“ಏ ತಾವುನರಾ’ ಅಂದರೆ, “ಯಾವ ಜಾಗದಲ್ಲಿದೆಯೋ ನಿನ್ನಯ ವಾಸ?’ ಅಥವಾ “ನೀನು ಕದಲದೇ ನಿಂತಿರುವ ತಾವು ಯಾವುದು?’. ಇದು ತ್ಯಾಗರಾಜರು ಹಾಡಿದ ಪಲ್ಲವಿಯ ಸಾಲು. ಇದನ್ನು ತಿಳಿದಾಗ ಇಡೀ ಕೃತಿಯ ಪ್ರತಿಯೊಂದು ಸಾಲೂ ಪಲ್ಲವಿಯ ಸಾಲಿನ ಜೊತೆಗೂಡಿ, ಹೆಚ್ಚು ಅರ್ಥಪೂರ್ಣವೆನಿಸಿ “ಎಲ್ಲ ತಾವೂ ರಾಮನಿರುವ ತಾವೇ’ ಎನ್ನುವ ತ್ಯಾಗರಾಜರ ಭಾವನೆಯ ತೃಪ್ತಿ ಮತ್ತು ಸಂತೋಷ ನಮ್ಮದಾಯ್ತು.
ಪಕ್ಕದ್ಮನೆಯ ಯುಕ್ತಾ ನನ್ನ ಪುಟ್ಟ ಗೆಳತಿ. ಕರ್ನಾಟಕ ಶಾಸ್ತ್ರೀಯ ಸಂಗೀತದ ಬಾಲಪ್ರತಿಭೆಯಾದ ಯುಕ್ತಾ ಪ್ರತಿದಿನವೂ ಮನೆಯಲ್ಲಿ ಅಭ್ಯಾಸ ಮಾಡುವುದು ನಮ್ಮ ಮನೆಗೆ ಸ್ಪಷ್ಟವಾಗಿ ಕೇಳಿಸುತ್ತೆ. ಸಂಗೀತದ ಗಂಧವೇ ಗೊತ್ತಿಲ್ಲದ ಕುಟುಂಬದಲ್ಲಿ ಹುಟ್ಟಿದ ಅವಳಿಗೆ ಈ ಹಾಡುಗಾರಿಕೆ ದೈವದತ್ತವಾಗಿ ಬಂದಿದೆಯೆನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ನನಗಂತೂ ಅವಳ ಹಾಡು ಕೇಳುವುದೇ ಒಂದು ಸಂಭ್ರಮ. ಶ್ರುತಿ, ಲಯ, ಭಾವ ಮತ್ತು ರಾಗ ಶುದ್ಧಿಗಳ ಪ್ರತೀಕದಂತೆ ಹಾಡುವ ಯುಕ್ತಾಳಿಗೆ ಭಾರತೀಯ ಭಾಷೆಗಳ ಪರಿಚಯ ಕಡಿಮೆ. ಆಗಾಗ್ಗೆ ಕೆಲವು ಸಾಹಿತ್ಯ ದೋಷಗಳು ಅವಳ ಹಾಡಿನಲ್ಲಿ ಇಣುಕುತ್ತವೆ. ಅಮೇರಿಕದಲ್ಲಿ ಹುಟ್ಟಿ ಬೆಳೆದ ಅವಳು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತಾಡುತ್ತಾಳೆ. ತಾನು ಅಭ್ಯಾಸ ಮಾಡಿದ ರಚನೆಗಳನ್ನು ಎಲ್ಲಿ, ಯಾವ ಗುರುಗಳು ಹೇಗೆ ಉತ್ಛರಿಸಿ ಹೇಳಿಕೊಟ್ಟರೋ ಹಾಗೆಯೇ ಹಾಡುತ್ತಾಳವಳು.
ಒಂದು ಭಾನುವಾರದಂದು ನಮ್ಮ ಮನೆಗೆ ಬಂದಾಗ ಅವಳು ಕಲ್ಯಾಣಿ ರಾಗದ ಆಲಾಪನೆಯೊಂದಿಗೆ “ಏ ತಾವುನ್ನಾ ರಾ’ ಎಂದು ತ್ಯಾಗರಾಜರ ಕೃತಿಯನ್ನು ಹಾಡಲು ಶುರು ಮಾಡಿದಳು. ವ್ಯಾಕರಣಬದ್ಧವಾದ ಪುಟ್ಟ ವಾಕ್ಯವದು. “ಎಲ್ಲಿದ್ದರೂ ಬಾ’ ಎಂದು ತಮ್ಮ ಪ್ರಿಯದೈವವಾದ ರಾಮನನ್ನು ತ್ಯಾಗರಾಜರು ಕರೆಯುತ್ತಿದ್ದಾರೆ ಎಂದುಕೊಂಡೆ. ಯುಕ್ತಾಳ ಗುರುಗಳೂ ಸಹ ಅದೇ ಅರ್ಥವನ್ನು ಹೇಳಿದರಂತೆ. ಆದರೆ ಹಾಡು ಮುಂದುವರೆದಾಗ ಗೊತ್ತಾಯ್ತು: ಪಲ್ಲವಿಗೆ ನಾನು ಕಂಡುಕೊಂಡ ಅರ್ಥ ಮುಂದಿನ ಭಾಗದ ಜೊತೆ ತಾಳೆಯಾಗುತ್ತಿಲ್ಲವೆಂದು. ಎಲ್ಲೋ ಪದಭ್ರಂಶವಾಗಿದ್ದಾಗ ಈ ರೀತಿ ಆಗುವುದುಂಟು.
ಅಂದು ಸಂಜೆ ಚೆನ್ನೈಯಿಂದ ಬಂದ ಪ್ರಸಿದ್ಧ ಸಂಗೀತಗಾರರೊಬ್ಬರ ಸಂಗೀತ ಕಾರ್ಯಕ್ರಮಕ್ಕೆ ಕೆಲವು ತೆಲುಗಿನವರೊಂದಿಗೆ ಹೋಗಿದ್ದೆ. ಆ ಕಾರ್ಯಕ್ರಮದಲ್ಲೂ ಸಹ “ಏ ತಾವುನ್ನಾ ರಾ’ ಎಂದೇ ಆ ಕೃತಿಯನ್ನು ತನ್ಮಯರಾಗಿ ಹಾಡಿದ್ದು ಕರ್ಣಾನಂದಮಯವಾಗಿತ್ತು. ತೆಲುಗು ಬರಹಗಾರ್ತಿಯಾಗಿ ಅಪಾರ ಮೆಚ್ಚುಗೆ ಗಳಿಸಿದ ನನ್ನ ಗೆಳತಿಯೊಬ್ಬಳಿಗೆ ಸಂಗೀತದಲ್ಲಿ ರಾಗಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಸಾಹಿತ್ಯಕ್ಕೆ ಕೊಡಬೇಕೆನ್ನುವ ಅಭಿಪ್ರಾಯ. ರಸಾಸ್ವಾದನೆಗೆ ಸಂಗೀತದ ಸೂಕ್ಷ್ಮಗಳ ತಿಳುವಳಿಕೆಯ ಅಗತ್ಯವಿಲ್ಲವೆನ್ನುವ ಅವಳು ಈ ರಚನೆಯಲ್ಲಿ ಪದಭ್ರಂಶವಾಗಿದೆಯೆಂದು ತಿಳಿದು ತುಂಬಾ ಕಸಿವಿಸಿಗೊಂಡು ರಸಭಂಗವಾಗಿ ಚಡಪಡಿಸಿದಳು. ಆದರೆ ತಕ್ಷಣಕ್ಕೆ ಎಲ್ಲಿ ತಪ್ಪಾಗಿದೆಯೆಂದು ಗೊತ್ತಾಗಲಿಲ್ಲ. ಮನೆಗೆ ಬಂದವರೇ ಯುಕ್ತಾಳನ್ನು ಕರೆದು ಆ ಕೃತಿಯ ಬಗ್ಗೆ ಕೇಳಿದಾಗ ಗೊತ್ತಾಯ್ತು: ಅದು ವಿದ್ವತ್ ಪುಸ್ತಕದಿಂದ ಬಂದಿದ್ದೆಂದು. ಆ ಪುಸ್ತಕದಲ್ಲಿ ಪ್ರಿಂಟಾದ ಕೃತಿಯನ್ನು ನೋಡಿದರೂ ಏನೂ ಪ್ರಯೋಜನವಾಗಲಿಲ್ಲ. ಅರ್ಥ ತಿಳಿಯಬೇಕೆನ್ನುವ ನಮ್ಮ ಪ್ರಕ್ರಿಯೆಯಲ್ಲಿ ಯುಕ್ತಾಳೂ ತನ್ನ ತಾಯಿಯೊಡನೆ ಬಂದು ಸೇರಿಕೊಂಡಳು. ಯೂಟ್ಯೂಬ…ನಲ್ಲಿ ಅದೇ ಕೃತಿಯನ್ನು ಹಲವಾರು ಸಂಗೀತಗಾರರಿಂದ ಕೇಳಿಸಿಕೊಂಡೆವು. ಅವರೆಲ್ಲರೂ ಹಾಡಿದ್ದು “ಏ ತಾವುನ್ನಾ ರಾ’ ಎಂದೇ! ಬಹುಶಃ ನಾವು ಅರ್ಥೈಸಿದ್ದೇ ಸರಿಯಿಲ್ಲವೇನೋ ಎನಿಸಿತು.
ಅಲ್ಪ ಸ್ವಲ್ಪ ತೆಲುಗು ಗೊತ್ತಿದ್ದವರಿಂದಲೋ ಅಥವಾ ಮುದ್ರಾ ರಾಕ್ಷಸನಿಂದಲೋ ಆದ ತಪ್ಪು ಮುಂದುವರೆದಿರಬಹುದೆಂಬ ಆಲೋಚನೆ ಬಂದು ನಮ್ಮೆಲ್ಲರ ಕುತೂಹಲ ಹೆಚ್ಚಾಯ್ತು. ಜನಪ್ರಿಯ ರಚನೆಯಾದ್ದರಿಂದ ಮೂಲ ಕೃತಿಯ ಪಲ್ಲವಿಯ ಸಾಲನ್ನು ಅಂದೇ ಕಂಡುಹಿಡಿಯಬೇಕೆಂಬ ಛಲ ಹುಟ್ಟಿತು. ಅಲ್ಲಿದ್ದ ಅಕ್ಷರಗಳ ಗುಣಿತ ಮತ್ತು ಒತ್ತುಗಳನ್ನು ಸ್ವಲ್ಪವೇ ಬದಲಿಸಿದರೆ ಹೊರಬಂತು ಸರಿಯಾದ ಸಾಲು. “ಏ ತಾವುನರಾ’ ಎಂದು. ಅಂದರೆ “ಯಾವ ಜಾಗದಲ್ಲಿದೆಯೋ ನಿನ್ನಯ ವಾಸ?’ ಅಥವಾ “ನೀನು ಕದಲದೇ ನಿಂತಿರುವ ತಾವು ಯಾವುದು?’. ಇದು ತ್ಯಾಗರಾಜರು ಹಾಡಿದ ಪಲ್ಲವಿಯ ಸಾಲು. ಆಗ ಇಡೀ ಕೃತಿಯ ಪ್ರತಿಯೊಂದು ಸಾಲೂ ಪಲ್ಲವಿಯ ಸಾಲಿನ ಜೊತೆಗೂಡಿ ಹೆಚ್ಚು ಅರ್ಥಪೂರ್ಣವೆನಿಸಿ “ಎಲ್ಲ ತಾವೂ ರಾಮನಿರುವ ತಾವೇ’ ಎನ್ನುವ ತ್ಯಾಗರಾಜರ ಭಾವನೆಯ ತೃಪ್ತಿ ಮತ್ತು ಸಂತೋಷ ನಮ್ಮದಾಯ್ತು. ಪದಭ್ರಂಶವಾಗಿರುವ ಎಲ್ಲ ತಾವೂ ಮುದ್ರಾರಾಕ್ಷಸನ ತಾವೇ ಎಂದು ಹಾಸ್ಯ ಮೆರೆದಳು ನನ್ನ ಗೆಳತಿ.
ಯುಕ್ತಾಳೀಗ ಪ್ರತಿಯೊಂದು ತೆಲುಗಿನ ಕೃತಿಯನ್ನು ನನ್ನ ಗೆಳತಿಯ ಮುಂದೆ ಪ್ರಸ್ತುತ ಪಡಿಸಿ ತಪ್ಪುಗಳಿಲ್ಲದ ಸಾಹಿತ್ಯವನ್ನು ಹಾಡುತ್ತಾಳೆ. ಸಾಹಿತ್ಯದ ಸರಿಯಾದ ಅರ್ಥ ತಿಳಿದು, ಹಾಡುಗಾರಿಕೆಗೆ ಜೀವ ತುಂಬಿ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬರುವುದರಿಂದ ಅದರ ಅನುಭವದ ಸೊಬಗೇ ಬೇರೆ ಎನ್ನುತ್ತಾಳೆ ಯುಕ್ತಾ. ಭಾಷಾಜ್ಞಾನಿಗಳು ಸಂಗೀತಜ್ಞಾನಿಗಳೊಂದಿಗೆ ಕೈಜೋಡಿಸಿದರೆ ಮಾತ್ರ ಹಾಡುಗಾರಿಕೆಯಲ್ಲಿ ಸಾಹಿತ್ಯಶುದ್ಧಿ ಸಾಧ್ಯವೆನ್ನುವ ನನ್ನ ಗೆಳತಿಯ ಮಾತು ಎಲ್ಲರೂ ಒಪ್ಪಲೇಬೇಕಾದ ಸತ್ಯ. ತಮಗೆ ಕನ್ನಡದಲ್ಲಿರುವ ದಾಸಸಾಹಿತ್ಯದ ರಚನೆಗಳು ಮತ್ತು ವಚನಗಳನ್ನು ಸಂಗೀತಗಾರರು ಹಾಡಿದಾಗ ಸಿಗುವ ಆನಂದ ಮತ್ತಿನ್ಯಾವುದರಲ್ಲಿಯೂ ಸಿಗುವುದಿಲ್ಲವೆಂದ ಯುಕ್ತಾಳ ತಾಯಿಯ ಮಾತು ಅನ್ಯಭಾಷಾ ಪರಿಚಯವಿಲ್ಲದ ಕನ್ನಡದವರೆಲ್ಲರಿಗೂ ಅನ್ವಯಿಸುತ್ತದೆ. ಒಮ್ಮೆ ಯುಕ್ತಾ ಸಂಗೀತ ಮತ್ತು ಸಾಹಿತ್ಯ ಈ ಎರಡರ ಬಗ್ಗೆ ಟೀಚರ್ ಹೇಳಿದ ಈ ಶ್ಲೋಕವನ್ನು ತಂದು ತೋರಿಸಿದಳು.
ಸಂಗೀತಮಪಿ ಸಾಹಿತ್ಯಮ… ಸರಸ್ವತ್ಯಾಃ ಸ್ತನದ್ವಯಂ |
ಏಕಮಾಪಾತ ಮಧುರಂ ಅನ್ಯದಾಲೋಚನಾಮೃತಂ||
ಅಂದರೆ ಸಂಗೀತವು ಕೇಳಿದ ತಕ್ಷಣವೇ ಆನಂದವನ್ನು ಕೊಟ್ಟರೆ, ಸಾಹಿತ್ಯವು ಚಿಂತನೆಗೆ ಹಚ್ಚಿ ಚಪ್ಪರಿಸಿ ಆನಂದವನ್ನು ಅನುಭವಿಸುವಂತೆ ಮಾಡುತ್ತದೆ. ಪ್ರಾರಂಭಿಕ ಹಂತದಲ್ಲಿ ಎರಡಕ್ಕೂ ವ್ಯತ್ಯಾಸವಿದ್ದರೂ, ಪ್ರಬುದ್ಧತೆ ಈ ಎರಡರಲ್ಲೂ ಈ ಎರಡರ ಸಮ್ಮಿಲನದ ಪರಮಾನಂದವನ್ನುಂಟು ಮಾಡುತ್ತದೆಂಬುದು ಸಾಧಕರ ಅನುಭವ.
ಸುಧಾ ಶ್ರೀನಾಥ್, ಅಮೇರಿಕ