ನವದೆಹಲಿ: ನಿಮಗೆ ಯಾವುದೇ ಜವಾಬ್ದಾರಿಯ ಪ್ರಜ್ಞೆ ಇಲ್ಲವಾ. ನಿಮಗೆ ಬಾಯಿಗೆ ಬಂದಂತೆ ಮಾತನಾಡಲು ಸ್ವಾತಂತ್ರ್ಯ ಕೊಟ್ಟವರು ಯಾರು? ಇದು ನಿಜಕ್ಕೂ ಆಘಾತಕಾರಿ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಯಮುನಾ ನದಿ ತೀರದಲ್ಲಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆದಿದ್ದ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಿಂದ ಹಾನಿಯಾಗಿದ್ದರೆ ಅದಕ್ಕೆ ಕೇಂದ್ರ ಸರ್ಕಾರ ಹಾಗೂ ಕೋರ್ಟ್ ಹೊಣೆ. ಯಾಕೆಂದರೆ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟಿದ್ದು ಅವರೇ ಎಂದು ಶ್ರೀ ಬುಧವಾರ ಹೇಳಿಕೆ ನೀಡಿದ್ದರು.
ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಿಂದ ಯುವನಾ ನದಿ ತೀರಪ್ರದೇಶದ ಪರಿಸರ ತುಂಬಾ ಹಾನಿಯಾಗಿದೆ. ಅದನ್ನು ಸರಿಪಡಿಸಲು ಕೋಟ್ಯಂತರ ರೂಪಾಯಿ ಬೇಕಾಗಲಿದೆ ಎಂದು ತಜ್ಞರ ಸಮಿತಿ ವರದಿ ನೀಡಿತ್ತು.
ಶ್ರೀ ಶ್ರೀ ತಜ್ಞರ ಸಮಿತಿ ವರದಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ ಎನ್ ಜಿಟಿ ಮುಖ್ಯಸ್ಥ ನ್ಯಾ.ಸ್ವತಂತ್ರ ಕುಮಾರ್ ಅವರು ಶ್ರೀ ಶ್ರೀ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಯುವನಾ ನದಿ ತಟದಲ್ಲಿ ನಡೆಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಉಂಟಾಗಿದ್ದ ನಷ್ಟದ ಬಗ್ಗೆ ತಜ್ಞರ ಸಮಿತಿ ನೀಡಿರುವ ವರದಿ ಬಗ್ಗೆ ಆರ್ಟ್ ಆಫ್ ಲಿವಿಂಗ್ ಉತ್ತರ ನೀಡುವಂತೆ ಎನ್ ಜಿಟಿ ಆದೇಶ ನೀಡಿದೆ.