ನಿನ್ನ ಜೊತೆ ಕಳೆದ ಲಕ್ಷಗಟ್ಟಲೆ ಸೆಕೆಂಡ್‌ಗಳು, ನಮ್ಮ ಸ್ನೇಹಕ್ಕೆ ಸಾಕ್ಷಿಯಾಗಿವೆ. ನಿನ್ನ ಜೊತೆ ಜಗಳವಾಡಿದ ದಿನ, ಕೂತಲ್ಲೇ ಕುದ್ದು ಹೋಗಿರುತ್ತೇನೆ ನಾನು. ಯಾಕೋ ಸಂಜೆ ಹೊತ್ತಿಗೆ ಮನದಲ್ಲಿ ಬೇಜಾರು, ನಿನ್ನ ಫೋನ್ ಬರುತ್ತೇನೋ ಅಂತ ಕಾಯುತ್ತೇನೆ.
ನಿನ್ನ ಹನಿಗೂಡಿದ ಕಣ್ಣುಗಳು ಕಾಡುತ್ತಿವೆ. ನಿನ್ನ ಸ್ನೇಹ ನನ್ನ ಸಾವಿರ ನೋವುಗಳನ್ನು ಮರೆಸಿದೆ. ನಿನಗೆ ಐ ಲವ್ ಯೂ ಅಂತ ಹೇಳಿ ಬಿಡಬಹುದೇನೋ, ಆದರೂ ಮನವೇಕೋ ಹಿಂಜರಿಯುತ್ತಿದೆ. ನಿನ್ನ ಸ್ನೇಹವನ್ನು ಕಳಕೊಂಡು ಬಿಡುತ್ತೀನೇನೋ ಎಂಬ ಆತಂಕದಿಂದ ಮನಸ್ಸು ತೊಳಲಾಡುತ್ತಿದೆ. ನಿನ್ನ ಕಣ್ಣಿನಲ್ಲಿ, ಎಲ್ಲಿ ನನ್ನನ್ನು ಪ್ರೀತಿಸುವ ವಿಷಯ ಹೇಳಿ ಬಿಡುತ್ತಾನೋ ಎಂಬ ಚಡಪಡಿಕೆ, ಭಯ ಇತ್ತು. ಆ ಒಂದು ಮಾತು ಹೇಳಿದ ಕ್ಷಣದಲ್ಲಿ ಸಾಯುವ ಗೆಳೆತನ ಮತ್ತೆ ಹುಟ್ಟುವುದಿಲ್ಲ.
ನಿನ್ನ ಜೊತೆ ಕಳೆದ ಲಕ್ಷಗಟ್ಟಲೆ ಸೆಕೆಂಡ್‌ಗಳು, ನಮ್ಮ ಸ್ನೇಹಕ್ಕೆ ಸಾಕ್ಷಿಯಾಗಿವೆ. ನಿನ್ನ ಜೊತೆ ಜಗಳವಾಡಿದ ದಿನ, ಕೂತಲ್ಲೇ ಕುದ್ದು ಹೋಗಿರುತ್ತೇನೆ ನಾನು. ಯಾಕೋ ಸಂಜೆ ಹೊತ್ತಿಗೆ ಮನದಲ್ಲಿ ಬೇಜಾರು, ನಿನ್ನ ಫೋನ್ ಬರುತ್ತೇನೋ ಅಂತ ಕಾಯುತ್ತೇನೆ. ತಡೆಯಲಾಗದು ಅನ್ನಿಸಿದಾಗ ನಿನಗೆ ಫೋನ್ ಮಾಡಬೇಕೆನಿಸಿದರೂ, ಅಹಂ ಅಡ್ಡ ಬರುತ್ತದೆ.
ಹಾಗೋ ಹೀಗೋ ದಿನ ಕಳೆದವು. ಆಮೇಲೆ ಶುರುವಾಯಿತು ರಾಜಿಯ ಕ್ಷಣ. ನಿನ್ನ ಸ್ನೇಹವೆಂಬುದು ತಂತಿಗೆ ನೇತು ಹಾಕಿರುವ ಶರ್ಟ್‌ನಂತೆ. ನಾನು ಏನು ಹೇಳಲಿ? ಮನಸ್ಸಿಗೆ ಯಾಕೋ ಈ ನಡುವೆ ಬೇಸರ, ಒಂಥರಾ ತವಕ, ಬೆವೆತ ಅಂಗೈ ಹಿಡಿದು ಓಡಾಡಿದ ಘಳಿಗೆ ಎಲ್ಲ ಮತ್ತೆ ಕಾಡಲು ಶುರುಮಾಡಿದೆ. ಹಂಚಿಕೊಂಡ ಭಾವನೆಗಳು ಮತ್ತೆ ಮನಸ್ಸಿನ ಬಾಗಿಲಿಗೆ ಬಂದಿವೆ. ನಿನ್ನ ಬಳಿ ಸದಾ ಮಾತನಾಡುತ್ತಲೇ ಇರಬೇಕು ಎಂದು ಹಾತೊರೆಯುವ ಮನಸ್ಸು. ನೀ ಪ್ರತಿ ಬಾರಿ ನನ್ನನ್ನು ನೋಡಿದಾಗಲೂ ಏನೋ ವಿಶೇಷ ಅನುಭವ.
ನಿನ್ನನ್ನು ಪ್ರೀತಿ ಮಾಡ್ಲಿಕ್ಕೆ ಇರುವ ಕಾರಣಗಳು ಒಂದೆರಡಲ್ಲ. ಅವತ್ತೂಂದು ದಿನ ನೀನು- “ಯು ಆರ್ ಮೈ ಬೆಸ್ಟ್‌ಫ್ರೆಂಡ್’ ಅಂದೆ ನೋಡು, ಆಗಲೇ ನಾ ನಿನ್ನ ಮನಸ್ಸಿಗೆ ಸೋತೆ. ಪ್ರೀತಿ ಕನವರಿಕೆಗೆ ನಿನ್ನ ಕನವರಿಸುವ ಸಲುಗೆ ಜಾಸ್ತಿಯಾಗಿದೆ. ಮೊದಲ ಬಾರಿಗೆ ನೀ ನನ್ನ ಮಾತನಾಡಿಸಿದ ಕ್ಷಣದಿಂದ, ನಿನ್ನ ಒಲವ ತೆಕ್ಕೆಗೆ, ಮಮತೆಯ ಅಕ್ಕರೆಗೆ ಬಿದ್ದಿರುವ ಮಗುವಂತೆ ನಾನು. ಪ್ರೀತಿ ಅಂದರೆ ಇದೇನಾ? ನೀನಿಲ್ಲದ ದಿನಗಳನ್ನು ಹೇಗೆ ಕಳೆಯಲಿ. ನಿನ್ನ ಸ್ನೇಹ, ಪ್ರೀತಿಯಾಗಲಿ ಎಂಬ ಬಯಕೆ. ಸ್ನೇಹ ಪ್ರೀತಿಯಾಗಬಹುದೇನೋ ಆದರೆ, ಅದು ಸೋತರೆ ಪ್ರೀತಿ ಸ್ನೇಹವಾಗಲೂ ಸಾಧ್ಯವಾಗುವುದಿಲ್ಲ. ಏನು ಹೇಳಲಿ ಈ ಹುಚ್ಚು ಪೆಚ್ಚು ಪ್ರೀತಿ ತುಂಬಿದ ಮನಸ್ಸಿಗೆ? ಈ ಕ್ಷಣಕ್ಕೆ, ಇಲ್ಲೇ ಉತ್ತರ ಬೇಕು ಎಂದು ಹಠ ಮಾಡುವ ಮನುಷ್ಯನಲ್ಲ. ಯೋಚಿಸು, ನಿನಗೂ ಮನಸ್ಸಿದೆ, ಅದರೊಳಗೆ ನಾನಿದ್ದೀನಿ ಎಂದು ಭಾವಿಸುವ.
ಇಂತಿ ನಿನ್ನ ??
(ಯಾಕೋ ಪ್ರೀತಿ ಹೇಳಿಕೊಳ್ಳಲು ಈ ಪುಕ್ಕಲು ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ಈ ಪತ್ರವೇನಾದರೂ ನಿನ್ನ ಕೈಗೆ ಸಿಕ್ಕರೆ ಉತ್ತರಿಸು. ಇಷ್ಟವಾದರೆ ಸರಿ, ಇಲ್ಲದಿದ್ದರೆ ಒತ್ತಾಯಿಸಲಾರೆ. ಆದರೆ ನನ್ನಲ್ಲಿ ಸುಮ್ಮನೆ ಭ್ರಮೆ ಹುಟ್ಟಿಸಿ ಹೋಗಬೇಡ)
ಶಾಂತ ಕುಮಾರ್