ನೀನಿರುವ ಜಾಗದಲ್ಲೆಲ್ಲ ನಾನಿರಬೇಕು, ನಿನ್ನ ಕಣಾ¤ಕುವ ವಸ್ತುಗಳಲ್ಲೆಲ್ಲ ನನ್ನುಸಿರಿರಬೇಕೆಂಬುದು ನನ್ನ ಸದಾಶಯ. ಸಾಧ್ಯವಾದಲ್ಲಿ ನಿನ್ನ ಕಣ್ಣೋಟದೊಳಗೆ ನನ್ನನ್ನು ಸೆರೆಹಿಡಿದುಬಿಡು, ಜೀವನಪರ್ಯಂತ ನಿನ್ನ ಬದುಕೆಂಬ ಅರಮನೆಯೊಳಗೆ ಸೆರೆಮನೆಯ ಕೈದಿಯಂತಾಗುವೆ…
ಎತ್ತಲಿಂದಲೋ ಶುರುವಾಗಿ ಓಡೋಡಿ ಬರುವ ಮಳೆಯಂತೆ ಎದೆಯ ಅರಮನೆಗೆ ಧಾವಿಸಿ ಬಂದವಳು ನೀನು. ಜಡಿಮಳೆಯಂತೆ ಅಲ್ಲಿಯೇ ನೆಲೆನಿಂತು ಮೈಕೊರೆಯುವ ಚಳಿಯಂತೆ ಪ್ರೀತಿಯ ಸೋನೆ ಹರಿಸಿದವಳು ನೀನು. ಅಷ್ಟಕ್ಕೂ ಮಳೆಹನಿಗೂ ಕಣ್ಣಹನಿಗೂ ಇರುವ ವ್ಯತ್ಯಾಸ ಅನತಿ ದೂರದಷ್ಟೇ! ಮಳೆಹನಿ ಬಿದ್ದಾಗ ನೀನು ನೆನಪಾಗುವೆ, ನಿನ್ನ ನೆನಪು ಅತಿಯಾದಾಗ ಕಣ್ಣಹನಿ ಜಾರುತ್ತದೆ. ಆದರೆ ಅದೇ ಕಣ್ಣಹನಿಯಲ್ಲಿ ಅವೆಷ್ಟು ಭರವಸೆಯ ಕಿಡಿಗಳಿದ್ದವು, ಅವೆಷ್ಟು ಆಡದ ನುಡಿಗಳಿದ್ದವೆಂದು ಲೆಕ್ಕ ಹಾಕಲು ವಿಳಂಬವಾಗುತ್ತದೆ ಎಂಬುದು ನನ್ನ ನಿರ್ದಿಷ್ಟ ಊಹೆ.
ತೀರಾ ಬೇಕಿರುವ ಜೀವ ದೂರವಿರುವಾಗ ಹತ್ತಿರಾಗಬೇಕೆನಿಸುತ್ತದೆ. ಹತ್ತಿರವಿರುವ ಜೀವ ದೂರ ಸರಿದಾಗ ಇರುವ ಒಂದು ಜೀವವೂ ಬೇಡವೆನ್ನಿಸುವುದು ಎಷ್ಟು ಸತ್ಯ ಅಲ್ವಾ? ಎಂಥ ಚಳಿ, ಮಳೆ, ಗಾಳಿ, ಪ್ರವಾಹ-ಪ್ರಳಯಗಳೂ, ಜಾÌಲಾಮುಖೀಯೂ, ಭೂಕಂಪಕ್ಕೂ ನಮ್ಮಿಬ್ಬರ ಆತ್ಮಸಾಂಗತ್ಯವನ್ನು ದೂರಾಗಿಸುವ ತಾಕತ್ತಿಲ್ಲ. ಅಷ್ಟೇ ಅಲ್ಲ, ನಮ್ಮಿಬ್ಬರ ನಡುವಿನ ಈ ದೂರ ತಾತ್ಕಾಲಿಕವೇ ಆಗಿದ್ದರೂ ಇದರಲ್ಲಿನ ಅಪರಿಮಿತ ಸಿಹಿಸಂಕಟವನ್ನು ತಡೆದುಕೊಳ್ಳುವ ಶಕ್ತಿ ನನಗಿಲ್ಲ. ಆದರೆ, ನೀನಿರುವ ಜಾಗದಲ್ಲೆಲ್ಲ ನಾನಿರಬೇಕು, ನಿನ್ನ ಕಣಾ¤ಕುವ ವಸ್ತುಗಳಲ್ಲೆಲ್ಲ ನನ್ನುಸಿರಿರಬೇಕೆಂಬುದು ನನ್ನ ಸದಾಶಯ. ಸಾಧ್ಯವಾದಲ್ಲಿ ನಿನ್ನ ಕಣ್ಣೋಟದೊಳಗೆ ನನ್ನನ್ನು ಸೆರೆಹಿಡಿದುಬಿಡು, ಜೀವನಪರ್ಯಂತ ನಿನ್ನ ಬದುಕೆಂಬ ಅರಮನೆಯೊಳಗೆ ಸೆರೆಮನೆಯ ಕೈದಿಯಂತಾಗುವೆ. ನಿನ್ನ ಘಮವಿಲ್ಲದ ಜಾಗದಲ್ಲಿ ನನ್ನ ನೆರಳು ಸೋಕುವ, ನಿನ್ನ ಪೀಠಿಕೆಯಿಲ್ಲದೇ ಯಾವ ಸ್ವಪ್ನವೂ ಬೀಳುವ ಅಗತ್ಯವಿಲ್ಲವೆಂಬುದು ನನ್ನ ಖಡಕ್ ಚಿಂತನೆ.
ನನ್ನ ಬದುಕಿನ ಹೊತ್ತಗೆಯ ಮುನ್ನುಡಿಯಿಂದ ಬೆನ್ನುಡಿಯವರೆಗೆ ನಿನ್ನ ಹೆಸರು ಸಂಗೀತದ ಅಲೆಯಂತೆ ಅನುರಣಿಸುತ್ತಲೇ ಇರಬೇಕು. ನಾ ಬರೆವ ಆತ್ಮಕಥೆಯುದ್ದಕ್ಕೂ ನಿನ್ನದೇ ವ್ಯಾಕರಣವೂ, ನನ್ನೆದೆಯ ಕವಿತೆಗಳಿಗೆಲ್ಲ ನಿನ್ನದೇ ಪಲ್ಲವಿ ಚರಣವೂ ಪಸರಿಸಿರಬೇಕು. ಪ್ರತಿ ಪುಟದಂಚಿನಲ್ಲೂ ನಿನ್ನ ಕಣೆಪ್ಪೆಯ ಮಿಟುಕಾಟದ ಗುಟುಕು ಬೇಕು. ನಿನ್ನ ಹೂನಗೆಯ ಕಂಪು ನನ್ನ ಎದೆಯನ್ನು ಅರಳಿಸಬೇಕು. ಹೊತ್ತಗೆಯ ಮುಖಪುಟದಲ್ಲಿ ನಿನ್ನ ಕನಸುಕಂಗಳ ಸುಂದರ ಭಾವಚಿತ್ರವೂ ಅದಕ್ಕೆ ಶೀರ್ಷಿಕೆಯಾಗಿ ಆ ಕಣೆಪ್ಪೆಯ ಮೇಲೆ ನನ್ನ ಹೆಸರೂ ಅಚ್ಚಾಗಬೇಕು.
ಹುಡುಗೀ, ನೀನೀಗ ಜೀವ-ಜೀವನದ ಭಾಗವಾಗಿರುವೆ. ನೀನೀಗ ಕಣ್ಣು-ಕನಸುಗಳ ಸಾರಥಿಯಾಗಿರುವೆ. ನೀನೀಗ ಭಾವ- ಭಾವನೆಗಳ ಒಡತಿಯಾಗಿರುವೆ. ನೀನೀಗ ನನ್ನೊಳಗೆ ನನ್ನವಳಾಗಿರುವೆ. ನನ್ನೊಳಗಿನ ಕಣ್ಣ ಕಾವ್ಯಕೆ ಗೆಳತೀ ನೀನೇ ಕಾವ್ಯಕನ್ನಿಕೆ. ನೀನೀಗ ಬದುಕಿನ ಯಾನ, ಪ್ರೀತಿಗೆ ವ್ಯಾಖ್ಯಾನ…
ಅರ್ಜುನ್ ಶೆಣೈ.