ಪ್ರೀತಿ ಜಾಸ್ತಿಯಾದಾಗ ಕೋಪವೂ ಜಾಸ್ತಿ ಇರುತ್ತದಂತೆ. ಆದರೆ, ನಮ್ಮಿಬ್ಬರ ನಡುವೆ ಅದು ಕೇವಲ ಐದು ನಿಮಿಷಕ್ಕೆ ಸೀಮಿತವಾಗಿರುತ್ತೆ. ನಾನಿಂದು ಇಷ್ಟೊಂದು ಸಂತೋಷವಾಗಿದ್ದೇನೆ ಎಂದರೆ, ಅದಕ್ಕೆಲ್ಲಾ ನಿನ್ನೊಂದಿಗಿನ ಒಡನಾಟವೇ ಕಾರಣ.
ನಿನ್ನ ಪರಿಚಯ ಯಾವ ಗಳಿಗೆಯಲ್ಲಿ ಆಯ್ತು ಎಂಬುದು ಗೊತ್ತಿಲ್ಲ. ಆದರೆ, ಅದನ್ನು ಶುಭಗಳಿಗೆ ಎಂದೇ ನೆನೆದಿರುವೆ. ನೀ ನನ್ನೊಡನೆ ಆಡುವ ಮಾತು, ಮಾಡುವ ಕಾಮಿಡಿ, ತುಂಟಾಟಗಳ ಮುಂದೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಹೌದು, ನೀನಂದರೆ ಬಹಳ ಇಷ್ಟ. ಅಂದಿಗೂ, ಇಂದಿಗೂ, ಮುಂದೆಂದಿಗೂ. ಮೊದಮೊದಲು ನೀನು ನನ್ನ ಬಳಿ ಕೊಂಚ ಮಾತನಾಡುತ್ತಿದ್ದೆ. ದಿನಗಳು ಉರುಳುತ್ತಿದ್ದಂತೆ ಮಾತುಗಳಲ್ಲಿ ಬದಲಾವಣೆಗಳು ಆಗುತ್ತಾ ಹೋದವು.
ಹಾಗೆ ಬದಲಾದ ಮಾತು ನಮ್ಮಿಬ್ಬರ ಸ್ನೇಹಕ್ಕೆ ನೀರೆರೆದಿದ್ದರಿಂದ ಅದೀಗ ಹೆಮ್ಮರವಾಗಿ ಬೆಳೆದು ನಿಂತಿದೆ. ನಿನ್ನ ಬಳಿ ಮಾತನಾಡಲು ಕುಳಿತರೆ ಸಾಕು, ನಗೆಹನಿಗಳೇ ಹೆಚ್ಚಾಗಿರುತ್ತವೆ. ನಿನ್ನ ಪ್ರತಿಯೊಂದು ನೋವು, ನಲಿವು, ಒಂದಷ್ಟು ನೈಜ ಘಟನೆಯ ಕಾಮಿಡಿಗಳನ್ನು ಓದುತ್ತಾ ಇದ್ದರೆ, ಸಮಯ ಕಳೆದದ್ದೇ ತಿಳಿಯುವುದಿಲ್ಲ. ಅಷ್ಟರ ಮಟ್ಟಿಗೆ ನಿನ್ನ ಮೆಸೇಜ್‌ನಲ್ಲಿ ಮುಳುಗಿ ಈಜಾಡುತ್ತಿರುತ್ತೇನೆ.
ಜೀವನದಲ್ಲಿ ತುಂಬಾ ಹಚ್ಚಿಕೊಂಡಿರುವವರನ್ನು ಭೇಟಿಯಾಗುವುದೆಂದರೆ ಎಲ್ಲರಿಗೂ ಸಂತೋಷ. ಅದೇ ರೀತಿಯಲ್ಲಿ ನಾವು ಕೂಡ. ಭೇಟಿಯಾಗೋಣ ಎಂದಾಗಲೆಲ್ಲಾ ಆತುರ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ಎಲ್ಲಿ ಭೇಟಿಯಾಗೋಣ, ಎಷ್ಟು ಗಂಟೆಗೆ ಭೇಟಿಯಾಗೋಣ ಎಂಬೆಲ್ಲಾ ಪ್ರಶ್ನೆಗಳು ಹರಿದಾಡಲು ಪ್ರಾರಂಭವಾಗುತ್ತವೆ. ಭೇಟಿಯ ದಿನದಂದು ಒಂದಷ್ಟು ದೂರದಲ್ಲಿ ಕಂಡಾಗ ನಿನ್ನ ತುಟಿಯಂಚಿನಲ್ಲಿ ಗುಲಾಬಿಯಂತೆ ನಗು ಅರಳುತ್ತದೆ.
ಒಂದಷ್ಟು ಸಮಯವನ್ನು ಕಳೆದು, ಹೋಗುವ ಸಂದರ್ಭ ಬಂದಾಗ ಇಬ್ಬರಲ್ಲೂ ಒಲ್ಲದ ಮನಸ್ಸು. ಇನ್ನೂ ಸ್ವಲ್ಪ ಹೊತ್ತು ಮಾತಾಡೋಣ ಎಂಬ ತುಡಿತ. ನಮ್ಮಲ್ಲಿ ಆತುರ ಇಲ್ಲದಿದ್ದರೂ ಸೂರ್ಯನಿಗೆ ನಾವು ಇಬ್ಬರೂ ಕೂತು ಸಂತೋಷದಿಂದ ಮಾತನಾಡುತ್ತಿರುವಾಗ ನೋಡಲು ಆಗುವುದಿಲ್ಲವೇನೋ ಗೊತ್ತಿಲ್ಲ. ಬಹಳ ಬೇಗ ಪಶ್ಚಿಮ ದಿಕ್ಕಿಗೆ ತೆರಳಿ ಬಿಡುತ್ತಾನೆ. ಆಗ, ಅನಿವಾರ್ಯವೆಂಬಂತೆ ಇಬ್ಬರೂ ಕೂಡ ಒಬ್ಬರಿಗೊಬ್ಬರು ಬೆನ್ನು ಹಾಕಿ ನಡೆದುಕೊಂಡು ಬರುತ್ತೇವೆ. ಸ್ವಲ್ಪ ದೂರ ಹೋಗಿ ಹಿಂದೆ ತಿರುಗಿ ಟಾಟಾ ಮಾಡದೆ ಇಬ್ಬರಿಗೂ ಸಮಾಧಾನ ಇಲ್ಲ.
ನಮ್ಮಿಬ್ಬರ ದೇಹ ಕಾಣುವವರೆಗೆ ನೋಟ ಇದ್ದೇ ಇರುತ್ತದೆ. ಯಾವಾಗ ಕಾಣದೆ ಹೋಗುತ್ತೇವೆಯೋ ಆ ಕೂಡಲೇ ವಾಟ್ಸಾಪ್ ಮೂಲಕ ಮೆಸೇಜ್ ಪ್ರಾರಂಭವಾಗುತ್ತದೆ. ಅಷ್ಟರ ಮಟ್ಟಿಗೆ ನಮ್ಮ ಸ್ನೇಹ ಬೆಳೆದುಬಿಟ್ಟಿದೆ. ಪ್ರೀತಿ ಜಾಸ್ತಿಯಾದಾಗ ಕೋಪವೂ ಜಾಸ್ತಿ ಇರುತ್ತದಂತೆ. ಆದರೆ, ನಮ್ಮಿಬ್ಬರ ನಡುವೆ ಅದು ಕೇವಲ ಐದು ನಿಮಿಷಕ್ಕೆ ಸೀಮಿತ! ನಾನಿಂದು ಇಷ್ಟೊಂದು ಸಂತೋಷವಾಗಿದ್ದೇನೆ ಎಂದರೆ ನಿನ್ನೊಂದಿಗಿನ ಒಡನಾಟವೇ ಕಾರಣ. ನಮ್ಮಿಬ್ಬರ ಸ್ನೇಹದ ಕೊಂಡಿ ಎಂದಿಗೂ ಕಳಚದೆ ಶಾಶ್ವತವಾಗಿ ಉಳಿಯಬೇಕೆಂಬುದೇ ನನ್ನ ಹಂಬಲ.
ಧನ್ಯವಾದಗಳು
* ರಾಕೇಶ್ ನಾಯಕ್ ಮಂಚಿ