Advertisement

ನಯಾಗರ ಜಲಪಾತದಲ್ಲಿ ನೀರೇ ಇಲ್ಲ!

12:01 PM Aug 21, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉತ್ತಮ ಮಳೆಯಾದರೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿರುವ “ನಯಾಗರ ಜಲಪಾತ’ ನೀರಿಲ್ಲದೆ ಬಣಗುಡುತ್ತಿದೆ. ಪರಿಣಾಮ, ಕೃತಕ ಜಲಪಾತದ ಸೌಂದರ್ಯ ಕಾಣಲು ಉದ್ಯಾನಕ್ಕೆ ಭೇಟಿ ನೀಡುವವರಿಗೆ ನಿರಾಸೆ ಮೂಡುವಂತಾಗಿದೆ.

Advertisement

ಹೊಸ ಆವಿಷ್ಕಾರಗಳ ಮೂಲಕ ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ತೋಟಗಾರಿಕೆ ಇಲಾಖೆ, ಅಮೆರಿಕದ ನಯಾಗರ ಜಲಪಾತವನ್ನು ಮಾದರಿಯಾಗಿಟ್ಟುಕೊಂಡು ಲಾಲ್‌ಬಾಗ್‌ ಕೆರೆಯ ಬಳಿ ಕೃತಕ ಜಲಪಾತ ನಿರ್ಮಿಸಿತ್ತು. ಅದಕ್ಕೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತಾದರೂ, ಕಳೆದ ಎರಡು ತಿಂಗಳಿಂದ ಜಲಪಾತದಲ್ಲಿ ನೀರು ಹರಿಯುತ್ತಿಲ್ಲ.

ಪರಿಣಾಮ ಕೆರೆಯ ಬಳಿಯ ಬಿರುಕು ಬಂಡೆಗಳು ಮಾತ್ರ ಕಾಣ ಸಿಗುತ್ತಿವೆ. ಲಾಲ್‌ಬಾಗ್‌ ಉದ್ಯಾನದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಇಲಾಖೆಯು ಉದ್ಯಾನದ ಕೆರೆಯ ಬಳಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ, ಕೆರೆಯ ಒಂದು ಭಾಗದ 30 ಎಕರೆ ಜಾಗದಲ್ಲಿ 150 ಅಡಿ ಉದ್ದ ಹಾಗೂ 15-20 ಅಡಿ ಎತ್ತರದಲ್ಲಿ ಜಲಪಾತ ನಿರ್ಮಿಸಲಾಗಿತ್ತು.

ಆದರೆ, ಕೆರೆ ಅಭಿವೃದ್ಧಿ ಉದ್ದೇಶಕ್ಕೆ ಜಲಪಾತದಲ್ಲಿ ನೀರು ಹರಿಯುವುದನ್ನು ಸ್ಥಗಿತಗೊಳಿಸಲಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿಯು ವಿಳಂಬಗತಿಯಲ್ಲಿ ಸಾಗುತ್ತಿರುವುದರಿಂದ ಇನ್ನೂ ಎರಡು ಮೂರು ತಿಂಗಳು ಜಲಪಾತವನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಮರು ಆರಂಭಕ್ಕೆ ಬೇಕು 2 ತಿಂಗಳು: ಮಳೆಯಿಂದಾಗಿ ಲಾಲ್‌ಬಾಗ್‌ ಕೆರೆಯ ಸುತ್ತ ಇರುವ ತಡೆಗೋಡೆ ಬಿರುಕು ಬಿಟ್ಟಿದ್ದು, ಕೆರೆ ನೀರು ಹೊರಭಾಗಕ್ಕೆ ಹರಿದುಹೋಗುತ್ತಿದೆ. ಹಾಗಾಗಿ, ಒಂದು ಕೋಟಿ ರೂ. ವೆಚ್ಚದಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕೆರೆಯ ಕೆಲವು ಕಡೆಗಳಲ್ಲಿ ಕಾಂಕ್ರೀಟ್‌ ಗೋಡೆಗಳ ನಿರ್ಮಾಣ, ಬದಿ ಕಟ್ಟುವ ಕೆಲಸ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ.

Advertisement

ಕಾಮಗಾರಿ ನಡೆಸುವ ವೇಳೆ ಕೃತಕ ಜಲಪಾತದಲ್ಲಿ ನೀರು ಹರಿಸಿದರೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ತೊಂದರೆಯಾಗಲಿದೆ. ಹೀಗಾಗಿ, ಅನಿವಾರ್ಯವಾಗಿ ನೀರು ಹರಿಸುವುದನ್ನು ತಡೆಹಿಡಿಯಲಾಗಿದೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆನಂತರ ಮತ್ತೆ ಜಲಪಾತದಲ್ಲಿ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ವಾಯುವಿಹಾರಿಗಳಿಗೆ ಬೇಸರ: ಕೃತಕ ಜಲಪಾತದಲ್ಲಿ ನೀರು ನಿಲ್ಲಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ವಾಯುವಿಹಾರಿಗಳು ಹಾಗೂ ಪ್ರೇಕ್ಷಕರು ಒಂದು ವರ್ಷಕ್ಕೂ ಹೆಚ್ಚು ದಿನಗಳ ಕಾಲ ಕೃತಕ ನಯಾಗರ ಜಲಪಾತದ ಕಾಮಗಾರಿ ನಡೆಸಿದ್ದು, ಈ ವೇಳೆಯೇ ಕೆರೆಯ ತಡೆಗೋಡೆ, ಬದಿ, ರಸ್ತೆಯ ನಿರ್ಮಾಣ ಕಾಮಗಾರಿಯನ್ನು ಮಾಡಿಕೊಂಡಿದ್ದರೆ ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಜಲಪಾತವನ್ನು ನಿಲ್ಲಿಸುವ ಅನಿವಾರ್ಯತೆ ಬರುತ್ತಿರಲಿಲ್ಲ. ಮುಂದಾಲೋಚನೆಯಿಲ್ಲದ ಮಾಡಿದ ಕೆಲಸದಿಂದಾಗಿ ಹಣವೂ ಪೋಲು, ಜನರಿಗೆ ಸೌದರ್ಯ ಸವಿಯುವ ಅವಕಾಶವೂ ಇಲ್ಲದಂತಾಗಿದೆ ಎಂದು ಹೇಳುತ್ತಿದ್ದಾರೆ.

ವರ್ಷಾರಂಭದಲ್ಲಿ ನಯಾಗರ ಫಾಲ್ಸ್‌ ಕಾಮಗಾರಿ ಮುಗಿಸಿ ನೀರು ಹರಿಸಿದ್ದರು. ಇದೀಗ ಮತ್ತೆ ಕೆರೆ ಕಾಮಗಾರಿ ಹೆಸರಿನಲ್ಲಿ ಎರಡು ತಿಂಗಳಿನಿಂದ ನೀರು ನಿಲ್ಲಿಸಲಾಗಿದೆ. ಖಾಲಿ ಬಂಡೆಗಳನ್ನು ಜನರಿಗೆ ತೋರಿಸಲು ಕೋಟಿ ಕೋಟಿ ಖರ್ಚು ಮಾಡುವ ಅಗತ್ಯವೇನಿತ್ತು?
-ಶಂಭುಲಿಂಗ, ವಾಯುವಿಹಾರಿ 

ಮಳೆಗೆ ಲಾಲ್‌ಬಾಗ್‌ ಕೆರೆಯ ತಡೆಗೋಡೆ ಬಿರುಕು ಬಿಟ್ಟು, ಕೆರೆ ಬದಿ ರಸ್ತೆ ಹಾಳಾಗಿತ್ತು. ಜಲಪಾತದಲ್ಲಿ ನೀರು ಹರಿಸುವುದರಿಂದ ಅಭಿವೃದ್ಧಿ ಕೆಲಸಕ್ಕೆ ತೊಂದರೆಯಾಗುತ್ತದೆ. ಈ ಕಾರಣದಿಂದಾಗಿ ನೀರು ಸ್ಥಗಿತಗೊಳಿಸಿದ್ದು, ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಮತ್ತೆ ಜಲಪಾತಕ್ಕೆ ಚಾಲನೆ ನೀಡಲಾಗುವುದು.
-ಚಂದ್ರಶೇಖರ್‌, ಲಾಲ್‌ಬಾಗ್‌ ಉದ್ಯಾನದ ಸಹಾಯಕ ನಿರ್ದೇಶಕ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next