ನಿನ್ನೆದುರು ತಲೆತಗ್ಗಿಸಬಾರದು ಎಂಬ ಒಂದೇ ಒಂದು ಕಾರಣದಿಂದ ಹಗಲು ರಾತ್ರಿ ಕಷ್ಟಪಟ್ಟು ಓದತೊಡಗಿದೆ. ಕೊನೆಗೆ ಐದು ಸೆಮಿಸ್ಟರ್‌ಗಳನ್ನು ಟಾಪ್ ಕ್ಲಾಸ್‌ನಲ್ಲಿ ಪಾಸಾದೆ. ಎಲ್ಲದಕ್ಕೂ ನೀನೇ ಸ್ಫೂರ್ತಿ, ನೀನೇ ಶಕ್ತಿ, ನೀನೇ ನನ್ನ ಬಾಳ ಜ್ಯೋತಿ.
ನಲ್ಮೆಯ ಗೆಳತಿಯೆ,
ನಾನು ಹೇಳಬೇಕು ಎಂದುಕೊಂಡು ಎದೆಯಲ್ಲಿ ಮುಚ್ಚಿಟ್ಟುಕೊಂಡಿದ್ದ ಎರಡನೇ ಮಾತಿದು. ಪಿಯುಸಿಯಲ್ಲಿ ಲಾಸ್ಟ್ ಬೆಂಚ್‌ನಲ್ಲಿ ಕುಳಿತು, ಒಬ್ಬೊಬ್ಬನೇ ಹುಚ್ಚನಂತೆ ಅಲೆದಾಡಿ, ಕೊನೆಗೆ ಹೇಗೋ ಪಾಸ್ ಆಗಿ ಮನೆಯವರ ಬಲವಂತಕ್ಕೆ ಡಿಗ್ರಿ ಕಾಲೇಜ್ ಸೇರಿದೆ. ಕಾಲೇಜಿಗೆ ಬಂದ ಮೊದಲ ದಿನ ನಾ ನಿನ್ನ ಕಂಡಾಗ ಅದುವರೆಗೂ ಬರಡಾಗಿದ್ದ ನನ್ನೆಯೆಂಬ ನೆಲದಲ್ಲಿ ಪ್ರೇಮದ ಸುಧೆ ಸುರಿಯಿತು. ಹೊಳೆವ ಹೊನ್ನನ್ನೇ ಎರಕ ಹೊಯ್ದಂತಿದ್ದ ನಿನ್ನ ಮುಖ, ಶುಭ್ರ ಬೆಳದಿಂಗಳಿನಂಥ ನಿನ್ನ ನಗು, ನನ್ನನ್ನೇ ಕೈ ಬೀಸಿ ಕರೆದ ಮುಂಗುರುಳನ್ನು ಕಂಡು ಅಕ್ಷರಶಃ ನಾ ನಿನ್ನ ಪ್ರೇಮಿಯಾದೆ. ಅಂದಿನಿಂದ ನನ್ನ ಜೀವನ ಶೈಲಿಯೇ ಬದಲಾಗಿಹೋಯ್ತು. ನಿನ್ನೆದುರು ತಲೆತಗ್ಗಿಸಬಾರದು ಎಂಬ ಒಂದೇ ಒಂದು ಕಾರಣದಿಂದ ಹಗಲು ರಾತ್ರಿ ಕಷ್ಟಪಟ್ಟು ಓದತೊಡಗಿದೆ. ಕೊನೆಗೆ ಐದು ಸೆಮಿಸ್ಟರ್‌ಗಳನ್ನು ಟಾಪ್ ಕ್ಲಾಸ್‌ನಲ್ಲಿ ಪಾಸಾದೆ. ಎಲ್ಲದಕ್ಕೂ ನೀನೇ ಸ್ಫೂರ್ತಿ, ನೀನೇ ಶಕ್ತಿ, ನೀನೇ ನನ್ನ ಬಾಳ ಜ್ಯೋತಿ.
ಕಾಲೇಜಿನ ಮೊದಲ ದಿನದಿಂದ ಹೃದಯದಲ್ಲಿ ಬೆಳೆಸಿದ್ದ ಪ್ರೇಮದ ಪುಷ್ಪವನ್ನು ನಿನ್ನ ಮುಡಿಗೇರಿಸಬೇಕೆಂದು ತೀರ್ಮಾನಿಸಿ ಅದೊಂದು ದಿನ ಗಟ್ಟಿ ಧೈರ್ಯ ಮಾಡಿ ನಿನ್ನೆದುರು ನಿಂತು ನನ್ನ ಪ್ರೇಮ ನಿವೇದನೆ ಮಾಡಿಯೇಬಿಟ್ಟೆ. ಆದರೆ, ನೀನು- “ನನಗೆ ಈ ಪ್ರೀತಿ ಗೀತಿ ಅನ್ನೋದು ಇಷ್ಟವಾಗಲ್ಲ. ನೀನು ಚೆನ್ನಾಗಿ ಓದ್ತಾ ಇದೀಯಾ…ಹೀಗೇ ಓದು. ಒಳ್ಳೆಯ ಜಾಬ್ ತಗೊ.. ಒಳ್ಳೆಯ ಹುಡುಗಿ ನೋಡಿ ಮದುವೆಯಾಗು. ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಅಷ್ಟೇ.. ‘ ಅಂದು ಬಿಟ್ಟಿಯಲ್ಲ; ಆನಂತರದ ದಿನಗಳಲ್ಲಿ ನಾನು ಅನುಭವಿಸಿದ ನೋವು, ಸಂಕಟ ಅಷ್ಟಿಷ್ಟಲ್ಲ. ಹುಡುಗಿ, ನಾನು ನಿನ್ನಿಂದ ಪರಿಶುದ್ಧ ಪ್ರೀತಿ, ಸ್ಫೂರ್ತಿ ಬಯಸಿದೆ. ಸಾಂತ್ವನ ಬಯಸಿದೆ, ಆದರೆ ನೀನು ಎಂಎನ್ವಿಯವರ ಹಾಡಿನ ಸಾಲುಗಳನ್ನೇ ನಾನು ಗುನುಗುವಂತೆ ಮಾಡಿದೆ
ಎದೆಯಾಸೆ ಏನೋ ಎಂದು ನೀ ಕಾಣದಾದೆ
ನಿಶೆಯೊಂದ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ
ಈ ಪತ್ರ ಓದಿದ ಮೇಲಾದರೂ ನನ್ನ ಮನಸ್ಸು ಅರ್ಥ ಮಾಡಿಕೊಂಡು ಮೊಗೆದಷ್ಟೂ ಮುಗಿಯದ ಪ್ರೀತಿ ನೀಡು.
ಒಲವಿನೂರ ಗೆಳೆಯ
ಶ್ರೀಕಾಂತ್