ಜೋಯಿಡಾ: ತಾಪಂ ಅಧ್ಯಕ್ಷೆ ನರ್ಮದಾ ಪಾಕ್ಲೃಕರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಳಿ ನದಿ ನೀರನ್ನು ನಮಗೆ ಮೊದಲು ನೀಡಿ, ನಂತರ ಬೇರೆಯವರಿಗೆ ಕೊಡಿ ಎನ್ನುವ ಕೂಗು ಒಕ್ಕೋರಲಿನಿಂದ ಕೇಳಿಬಂದಿತ್ತು.
ಸಭೆ ಆರಂಭಗೊಳ್ಳುತ್ತಿದ್ದಂತೆ ಜೋಯಿಡಾ ಕಾಳಿ ಬ್ರಿಗೇಡ್ ಮುಖ್ಯಸ್ಥ ರವಿರೇಡ್ಕರ್ ಹಾಗೂ ಸಂಘಟಕರು ಸಭಾಧ್ಯಕ್ಷರಿಗೆ ಮನವಿ ನೀಡಿ, ಜೋಯಿಡಾ ತಾಲೂಕಿನ ಜೋಯಿಡಾ, ರಾಮನಗರ ಪ್ರತಿವರ್ಷವೂ ಕುಡಿಯುವ ನೀರಿನ ಹಾಹಾಕಾರದಲ್ಲಿದೆ. ಇಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಕಾಳಿ ನೀರನ್ನು ಮೊದಲು ನಮ್ಮ ತಾಲೂಕಿನ ಜನತೆಗೆ ಕೊಡಿ ಎಂದು ವಿನಂತಿಸಿದರು. ಅಲ್ಲೆ ಕಾಳಿ ನೀರನ್ನು ಹೊರ ಜಿಲ್ಲೆಗೆ ಒಯ್ಯುವ ಕಾಮಗಾರಿಗೆ ಕಾಳಿ ಬ್ರಿಗೇಡ್ ಸಂಘಟನೆ ಸಂಪೂರ್ಣವಾಗಿ ವಿರೋಧಿಸುತ್ತಿದ್ದಾಗಿ ಸಭೆಯಲ್ಲಿ ಹೇಳಲಾಯಿತು.
ಈ ಕುರಿತು ಸಮಗ್ರ ಚರ್ಚೆ ನಡೆಯಿತು. ತಾಪಂ ಸದಸ್ಯ ಗುರಜರ, ತಾಲೂಕಿನಲ್ಲಿಯೇ ಹುಟ್ಟುವ ಕಾಳಿ ನದಿ ನೀರನ್ನು ನಮ್ಮ ತಾಲೂಕಿನ ಜನರಿಗೆ ಕುಡಿಯಲು ಪೂರೈಸುವ ಸರಿಯಾದ ವ್ಯವಸ್ಥೆ ಇನ್ನೂ ಇಲ್ಲ. ರಾಮನಗರ, ಜೋಯಿಡಾ ಜನರು ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸೂಪಾ ಜಲಾಶಯಕ್ಕಾಗಿ ತ್ಯಾಗಮಾಡಿದ ತಾಲೂಕಿನ ಜನರಿಗೆ ಕನಿಷ್ಟ ಪಕ್ಷ ಸರಿಯಾಗಿ ಕುಡಿಯುವ ನೀರನ್ನಾದರು ಸರಕಾರ ಕೊಡಬೇಕಿತು. ನಮ್ಮ ತಾಲೂಕಿನಲ್ಲಿ ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ ಎಂದು ಬೇಷರ ವ್ಯಕ್ತಪಡಿಸಿದರು. ಸಭೆಯಲ್ಲಿ ಉಳಿದ ಸದಸ್ಯರೂ ಇದಕ್ಕೆ ಬೆಂಬಲ ಸೂಚಿಸಿದ್ದು, ತಾಲೂಕಿನ ಕುಡಿಯುವ ನೀರಿನ ವ್ಯವಸ್ಥೆಗೆ ಕಾಳಿ ನೀರನ್ನು ಬಳಸಲು ಯೋಜನೆ ರೂಪಿಸಬೇಕೆನ್ನುವ ಅಭಿಪ್ರಾಯ ಕೇಳಿಬಂದಿತು.
ರಾಮನಗರ, ಜೋಯಿಡಾ ಭಾಗದ ಗ್ರಾಪಂ ಸದಸ್ಯರು, ಸಾರಿಗೆ ಅವ್ಯವಸ್ಥೆಯಿಂದಾಗಿ ಶಾಲಾ ಮಕ್ಕಳಿಗೆ ಬಸ್‌ಗಳು ಸರಿಯಾಗಿ ಇರದೆ ತೊಂದರೆ ಪಡುವಂತಾಗಿದೆ ಎಂದು ದೂರಿದರು. ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ ವೈದ್ಯಾಧಿಕಾರಿಗಳು ಇರದೆ ತುರ್ತು ಸೇವೆಗೆಂದು ಬರುವ ರೋಗಿಗಳಿಗೆ, ಅಪಘಾತದಂತ ಪ್ರಕರಣಗಳಿಗೆ ದಾಂಡೇಲಿ, ಇಲ್ಲವೇ ಧಾರವಾಡ-ಕಾರವಾರಕ್ಕೆ ಕಳಿಸಿಕೊಡುವ ಪ್ರಸಂಗ ಏರ್ಪಡುತ್ತಿದೆ. ಕೆಲವರಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಇಲ್ಲದೆ ಜೀವ ಕಳೆದುಕೊಳ್ಳುವ ಪ್ರಸಂಗವೂ ನಡೆದಿದೆ ಎಂದು ವೈದ್ಯಾಧಿಕಾರಿಗಳ ಬೇಜವಾಬ್ದಾರಿತನವನ್ನು ಗ್ರಾಪಂ ಸದಸ್ಯ ಸಂತೋಷ ಮತೇರೋ, ದತ್ತಾ ನಾಯ್ಕ ಕುಂಬಾರವಾಡಾ ಸಭೆ ಗಮನಕ್ಕೆ ತಂದರು. ತಾಲೂಕು ವೈದ್ಯಾಧಿಕಾರಿ ಸುಜಾತಾ ಉಕ್ಕಲಿ, ವೈದ್ಯಾಧಿಕಾರಿಗಳ ಲಭ್ಯತೆಗೆ ವ್ಯವಸ್ಥೆಗೊಳಿಸುವ ಮೂಲಕ ಈ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಡಿಗ್ಗಿ ಭಾಗದ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರುಸ್ತಿ ಮಾಡಿಸುವಂತೆ ಡಿಗ್ಗಿ ಭಾಗದ ಗ್ರಾಮಸ್ಥರು ನಮ್ಮ ಪಂಚಾಯತ್ ಸದಸ್ಯರ ಮುಖಾಂತರ ಸಭೆ ಗಮನಕ್ಕೆ ತಂದರು. ಸಭೆಯಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿ ಸತೀಶ ಅನುದಾನ ಬಂದಾಗ ರಸ್ತೆ ಸರಿಪಡಿಸುವ ಭರವಸೆ ನೀಡಿದರು.
ಜೋಯಿಡಾ-ಕುಬಾರವಾಡಾ ಹೆಸ್ಕಾಂ ಹೊಸ ಲೈನ್ ಅರ್ಧದಲ್ಲಿಯೇ ನಿಂತಿದ್ದು, ಕೂಡಲೆ ಕುಂಬಾರವಾಡಾವರೆಗೆ ಹೊಸ ಲೈನ್ ಕಾಮಗಾರಿ ಮಾಡಿ ಮುಗಿಸಿ ಎಂದು ಕುಂಬಾರವಾಡಾ ಗ್ರಾಪಂ ಸದಸ್ಯರು ಅಧಿಕಾರಿಗಳಲ್ಲಿ ವಿನಂತಿಸಿದರು. ಆದಷ್ಟು ಬೇಗ ಕೆಲಸ ಮುಗಿಸುವುದಾಗಿ ತಿಳಿಸಿದರು.
ಉಚಿತ ಕೋಳಿ ಮರಿ ಪ್ರಕರಣಕ್ಕೆ ಸಂಬಂಧಿಸಿದ ವಿಷಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಕೂಡಲೆ ರಾಮನಗರ ಪಶು ವೈದ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಇನ್ನುಳಿದ ತೋಟಗಾರಿಕೆ, ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳೀದ ವರ್ಗಗಳ ಇಲಾಖೆಯ ವಿಷಯ ಚರ್ಚೆಗೆ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ಪರಿಶೀಲನಾ ವರದಿ ಸಭೆಗೆ ಸಲ್ಲಿಸಿದರು. ತಾಪಂ ಉಪಾಧ್ಯಕ್ಷ ವಿಜಯ ಪಂಡಿತ್, ಜಿ.ಪಂ. ಸದಸ್ಯ ರಮೇಶ ನಾಯ್ಕ, ತಾ.ಪಂ. ಇಒ ಆನಂದ ಬಡಕುಂದ್ರಿ, ತಾ.ಪಂ. ಸದಸ್ಯೆ ಅಲ್ಕಾಂಜಾ ಮಂಥೇರೋ ಮುಂತಾದವರು ಇದ್ದರು.