Advertisement

ಟೋಕಿಯೋದಲ್ಲಿ ಚಿನ್ನವೇ ಗುರಿ: ಬ್ಲೇಕ್‌

12:16 AM Dec 03, 2019 | Sriram |

ಮುಂಬಯಿ: ಜಮೈಕಾದ ವಿಶ್ವವಿಖ್ಯಾತ ಓಟಗಾರ ಯೋಹಾನ್‌ ಬ್ಲೇಕ್‌ ಮುಂಬಯಿಗೆ ಆಗಮಿಸಿದ್ದಾರೆ. ಅವರು ಫೆಬ್ರವರಿಯಲ್ಲಿ ನಡೆಯಲಿರುವ “ರೋಡ್‌ ಸೇಫ್ಟಿ ವರ್ಲ್ಡ್ ಸೀರಿಸ್‌’ ಟಿ20 ಸರಣಿಯ ಪ್ರಚಾರ ನಡೆಸುತ್ತಿದ್ದು, ಸೋಮವಾರ ಮಾಧ್ಯಮದವರೊಂದಿಗೆ ಆತ್ಮೀಯವಾಗಿ ಬೆರೆತರು. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ 100 ಮೀ. ಓಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ತನ್ನ ಗುರಿ ಎಂದರು.

Advertisement

“100 ಮೀ. ಓಟದಲ್ಲಿ ನಾನು ಯಾವತ್ತೂ ಫೇವರಿಟ್‌. ನಾನು ವಿಶ್ವದಲ್ಲೇ ದ್ವಿತೀಯ ಅತೀ ವೇಗದ ಓಟಗಾರ. ನನ್ನ ಮುಂದಿರುವುದು ಕೊನೆಯ ಒಲಿಂಪಿಕ್ಸ್‌. ಟೋಕಿಯೋದಲ್ಲಿ ಚಿನ್ನದ ಪದಕವನ್ನೇ ಗೆಲ್ಲುವುದು ನನ್ನ ಗುರಿ ಮತ್ತು ಇದನ್ನು ನಾನು ಖಂಡಿತ ಸಾಧಿಸುವ ವಿಶ್ವಾಸದಲ್ಲಿದ್ದೇನೆ’ ಎಂದು ಬ್ಲೇಕ್‌ ಹೇಳಿದರು.

“ಈ ವರೆಗೆ ನಾನು ಎಷ್ಟೋ ಪದಕಗಳನ್ನು ಗೆದ್ದಿರಬಹುದು. ಆದರೆ ಒಲಿಂಪಿಕ್ಸ್‌ ಚಿನ್ನಕ್ಕೆ ಸಾಟಿಯಾಗುವಂಥದ್ದು ಯಾವುದೂ ಇಲ್ಲ’ ಎಂದರು.

ಇದೇ ವೇಳೆ ಮುಂದಿನ ವರ್ಷದ “ಡೈಮಂಡ್‌ ಲೀಗ್‌’ ಕೂಟದಿಂದ 200 ಮೀ. ರೇಸ್‌ ಸಹಿತ 4 ಸ್ಪರ್ಧೆಗಳನ್ನು ಕೈಬಿಟ್ಟ ವಿಶ್ವ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಸೆಬಾಸ್ಟಿಯನ್‌ ಕೋ ಅವರನ್ನು ಬ್ಲೇಕ್‌ ತರಾಟೆಗೆ ತೆಗೆದುಕೊಂಡರು. ಇದೊಂದು ಮೂರ್ಖ ನಿರ್ಧಾರ ಎಂದರು.

ಭಾರತದಲ್ಲಿ ಪ್ರತಿಭಾ ಶೋಧ
ಟೋಕಿಯೊ ಒಲಿಂಪಿಕ್ಸ್‌ ಬಳಿಕ ಭಾರತದಲ್ಲಿ ಆ್ಯತ್ಲೆಟಿಕ್ಸ್‌ ಪ್ರತಿಭೆಗಳನ್ನು ಹುಡುಕುವ ಕಾರ್ಯಕ್ರಮವೊಂದನ್ನು ನಡೆಸುವುದಾಗಿಯೂ ಬ್ಲೇಕ್‌ ಹೇಳಿದರು. “ಭಾರತದಲ್ಲಿ ಬಹಳಷ್ಟು ಆ್ಯತ್ಲೆಟಿಕ್ಸ್‌ ಪ್ರತಿಭೆಗಳಿವೆ. ಕೆಲವರನ್ನು ನಾನು ದೋಹಾದಲ್ಲಿ ಭೇಟಿಯಾಗಿದ್ದೆ. ಸೂಕ್ತ ಮಾರ್ಗದರ್ಶನ ಲಭಿಸಿದರೆ ಇವರೆಲ್ಲ ಬೇರೊಂದು ಎತ್ತರವನ್ನು ಕಾಣಲಿದ್ದಾರೆ’ ಎಂಬುದು ಯೋಹಾನ್‌ ಬ್ಲೇಕ್‌ ನಂಬಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next