ನಟ ಲೂಸ್‌ಮಾದ ಯೋಗಿ ಅವರ ಚಿತ್ರಗಳು ತೆರೆಗೆ ಬಂದು ಬಹಳ ಸಮಯವಾಯಿತು ಎಂದು ಗಾಂಧಿನಗರ ಮಾತನಾಡಿಕೊಳ್ಳುವ ಹೊತ್ತಿಗೇ, ಯೋಗಿ, ಹೊಸವರ್ಷದಲ್ಲಿ ಹೊಸ ಜೋಶ್‌ನಲ್ಲಿ ಲಂಬೋದರನ್ನು ಧ್ಯಾನಿಸುತ್ತ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಯೋಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಅವರ ಯಾವುದೇ ಚಿತ್ರಗಳು ತೆರೆ ಕಂಡಿರಲಿಲ್ಲ. ಇನ್ನು ಮದುವೆಯ ಬಳಿಕ ಯೋಗಿ “ಲಂಬೋದರ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರು ಒಂದು ವರ್ಷದ ಹಿಂದೆಯೇ ಸೆಟ್ಟೇರಿದ್ದ ಈ ಚಿತ್ರ ಸದ್ದಿಲ್ಲದೆ ತನ್ನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಇದೀಗ ತೆರೆಗೆ ಬರುವ ಸಿದ್ದತೆಯಲ್ಲಿದೆ.
ಇತ್ತೀಚೆಗೆ “ಲಂಬೋದರ’ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ, ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಸ್.ಎ ಚಿನ್ನೇಗೌಡ, ಉಪಾಧ್ಯಕ್ಷ ಕರಿಸುಬ್ಬು , ಶಿಲ್ಪಾ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದು, “ಲಂಬೋದರ’ನ ಹಾಡುಗಳನ್ನು ಹೊರತಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಲಂಬೋದರ’ ಚಿತ್ರದಲ್ಲಿ ಯೋಗಿ ಈ ಸಿನಿಮಾದಲ್ಲಿ ಮೂರು ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡಿ¨ªಾರೆ. ಇನ್ನು ಯೋಗಿಯ ಈ ಹೊಸ ಗೆಟಪ್ ನೋಡಿ “ನೀವು ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ಕಾಣುತ್ತೀರಿ’ ಎಂದು ಯೋಗಿ ಪತ್ನಿ ಸಾಹಿತ್ಯ ಕಾಂಪ್ಲಿಮೆಂಟ್ಸ್ ಕೂಡಾ ನೀಡಿದ್ದಾರಂತೆ. “ನನ್ನ ಮೂರು ಗೆಟಪ್‌ಗ್ಳೂ ನೋಡುಗರಿಗೆ ಮನರಂಜನೆ ನೀಡಲಿವೆ’ ಎನ್ನುವ ಯೋಗಿ, “ಲಂಬೋದರ ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಚಿತ್ರವಾಗಿದ್ದು, ಇಂದಿನ ಯುವ ಪೀಳಿಗೆಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡಲಾಗಿದೆ’ ಎನ್ನುತ್ತಾರೆ.
“ಲಂಬೋದರ’ ಚಿತ್ರಕ್ಕೆ ಕೆ. ಕೃಷ್ಣರಾಜ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಕೃಷ್ಣರಾಜ್, “ಯೋಗಿ ಮದುವೆಯಾದ ನಾಲ್ಕೇ ದಿನಕ್ಕೆ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿತ್ತು. ಈ ಚಿತ್ರಕ್ಕೆ ಕೂಡಾ ಕಡಲೆಕಾಯಿ ಪರಿಷೆ ದೃಶ್ಯಗಳು ಬೇಕಾಗಿದ್ದರಿಂದ ಯೋಗಿ ಹೊಸಜೀವನಕ್ಕೆ ಕಾಲಿಟ್ಟ ನಾಲ್ಕನೇ ದಿನವೇ ಶೂಟಿಂಗ್‌ಗೆ ಹಾಜರಾಗಿದ್ದರು. ಇದೊಂದು ಸಂಪೂರ್ಣ ಮನರಂಜನಾತ್ಮಕ ಚಿತ್ರವಾಗಿದ್ದು, ನೋಡುಗರಿಗೆ ಕೊಟ್ಟ ಕಾಸಿಗೆ ಮೋಸವಿಲ್ಲದೆ ಮನರಂಜಿಸುತ್ತದೆ’ ಎನ್ನುತ್ತಾರೆ.
ಸಮಾರಂಭದಲ್ಲಿ ಹಾಜರಿದ್ದ “ಲಂಬೋದರ’ನ ಬಳಗದ ಇತರ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇನ್ನು “ಲಂಬೋದರ’ ಚಿತ್ರದ ಹಾಡುಗಳಿಗೆ ಕಾರ್ತಿಕ್ ಶರ್ಮ ಸಂಗೀತ ಸಂಯೋಜನೆಯಿದ್ದು, ಜಯಂತ್ ಕಾಯ್ಕಿಣಿ, ಹರ್ಷಪ್ರಿಯ, ಗೌಸ್‌ಪೀರ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
“ಲಂಬೋದರ’ ಚಿತ್ರದಲ್ಲಿ ಯೋಗಿಗೆ ನಾಯಕಿಯಾಗಿ ಆಕಾಂಕ್ಷ ಜೋಡಿಯಾಗಿದ್ದಾರೆ, ಉಳಿದಂತೆ ಚಿತ್ರದಲ್ಲಿ ಅಚ್ಯುತಕುಮಾರ್, ಧರ್ಮಣ್ಣ ಕಡೂರ್, ಅರುಣಾ ಬಾಲರಾಜ್, ಸಿದ್ದು ಮೂಲಿಮನಿ, ಭೂಮಿಕಾ ಶೆಟ್ಟಿ ಮೊದಲಾದವರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶ್ವೇಶ್ವರ ಪಿ. ಮತ್ತು ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜನವರಿ ಕೊನೆಯೊಳಗೆ “ಲಂಬೋದರ’ನನ್ನು ಥಿಯೇಟರ್‌ಗಳಿಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.