ಕನ್ನಡಕ್ಕೆ ಮತ್ತೊಂದು ಸಿನಿಮಾ ಕುಟುಂಬದಿಂದ ಹೀರೋ ಒಬ್ಬರ ಆಗಮನವಾಗಿದೆ. ಹೆಸರು ಮಾಧವ್. “ಲೂಸ್ ಮಾದ’ ಯೋಗಿ ಅವರ ಭಾವ ಈ ಮಾಧವ. ಇವರಿಗೆ ಇದು ಮೊದಲ ಸಿನಿಮಾ. ಇನ್ನು, ಈ ಚಿತ್ರದ ಮೂಲಕ ಚನಾ ನಿರಾಜ ನಿರ್ದೇಶಕರಾಗುತ್ತಿದ್ದಾರೆ. ಚೇತನ್‌ಕುಮಾರ್ ಹಾಗು ಎ.ಪಿ.ಅರ್ಜುನ್ ಬಳಿ ಕೆಲಸ ಮಾಡಿದ್ದ ಚನಾ ನಿರಾಜ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚೇತನ್‌ಕುಮಾರ್ ಸಂಭಾಷಣೆ ಬರೆಯುತ್ತಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಇಷ್ಟರಲ್ಲೇ ಪುನೀತ್ ರಾಜಕುಮಾರ್ ಅವರಿಂದ ಶೀರ್ಷಿಕೆ ಅನಾವರಣಗೊಳಿಸುವ ಯೋಚನೆ ನಿರ್ದೇಶಕರಿಗಿದೆ. ಅಂದಹಾಗೆ, ಸ್ಕೈ ಬೆಲ್ಸ್ ಮಲ್ಟಿಮೀಡಿಯ ಬ್ಯಾನರ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. “ನಾಗರಹಾವು’ ನಿರ್ಮಾಪಕ ಸಾಜಿದ್ ಖುರೇಷಿ ಅವರು ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ.
ಯೋಗೀಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಕೊಳ್ಳೆಗಾಲ ಅರಣ್ಯದಲ್ಲಿರುವ ಒಂದು ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಕಥೆ. ನಾಯಕ ಮಾಧವ್‌ಗೆ ಇದು ಮೊದಲ ಚಿತ್ರವಾದ್ದರಿಂದ ಪೂರ್ಣ ತಯಾರಿಯೊಂದಿಗೇ ಕ್ಯಾಮೆರಾ ಮುಂದೆ ನಿಲ್ಲಲು ಅಣಿಯಾಗಿದ್ದಾರೆ. ಕಳೆದ ಆರು ತಿಂಗಳಿನಿಂದಲೂ ಇಮ್ರಾನ್ ಸರ್ದಾರಿಯ ಬಳಿ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ.
ಸಂಚಾರಿ ವಿಜಯ್ ಅವರ ಬಳಿ ನಟನೆ ತರಬೇತಿಯನ್ನೂ ಪಡೆದಿದ್ದಾರೆ. ಇದೊಂದು ತಾಯಿ ಸೆಂಟಿಮೆಂಟ್ ಕಥೆಯಾದ್ದರಿಂದ ಇಲ್ಲಿ ಸುಹಾಸಿನಿ ಅಥವಾ ಸಿತಾರ ಇವರಿಬ್ಬರ ಪೈಕಿ ಒಬ್ಬರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಿರ್ದೇಶಕರ ಮಾತು. ಕೊಳ್ಳೆಗಾಲ ಸುತ್ತ ಮುತ್ತಲ ಅರಣ್ಯಪ್ರದೇಶದಲ್ಲಿರುವ ಹಳ್ಳಿಯೊಂದರಲ್ಲಿ ನಾಯಕ ಮಾಧವ್ ಬೀಡುಬಿಟ್ಟಿದ್ದಾರೆ.
ಕಳೆದ ಹದಿನೈದು ದಿನಗಳಿಂದಲೂ ಅವರು ಅಲ್ಲೇ ಇದ್ದು ಅಲ್ಲಿನ ಜನರ ಬದುಕು, ಅವರ ಸಂಪ್ರದಾಯ, ಕಷ್ಟ, ಸುಖ ನೋವು, ನಲಿವುಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ನಿರ್ದೇಶಕರು ಅವರನ್ನು ಅಲ್ಲಿ ಬಿಟ್ಟಿದ್ದಾರಂತೆ. ಸಿನಿಮಾಗಾಗಿ ಮಾಧವ್ ಗಡ್ಡ ಬಿಟ್ಟಿದ್ದು, ಥೇಟ್ ಹಳ್ಳಿಗಾಡಿನ ಹುಡುಗರಾಗಿದ್ದಾರಂತೆ. ಇನ್ನು, ಈ ಚಿತ್ರದ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.
ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ. ಡಿಸೆಂಬರ್ 6 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಕೊಳ್ಳೆಗಾಲ, ಮಹದೇಶ್ವರ ಬೆಟ್ಟ ಗಜೇಂದ್ರಗಡ, ಗದಗ್, ತೆಲುಗು ನಿರ್ದೇಶಕ ರಾಜಮೌಳಿ ಅವರ ಹುಟ್ಟೂರಾದ ನೀರಮಾನ್ವಿ ಸೇರಿದಂತೆ ಇತರೆ ಕಡೆ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಸದ್ಯಕ್ಕೆ ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕರು ಯಾರೆಂಬುದು ಪಕ್ಕಾ ಆಗಿಲ್ಲ ಎಂದಷ್ಟೇ ಹೇಳುತ್ತಾರೆ ಚನಾ ನಿರಾಜ.