“ಇನ್ನೆಷ್ಟು ದಿನ ಅಂತ ಈ ನರಕ. ಬೇಗ ಇದೆಲ್ಲದರಿಂದ ಹೊರಟು ಹೋಗು …’ ಹಾಗಂತ ಅವಳ ಗೆಳತಿ ಹೇಳಿ ಹೊರಟು ಹೋಗುತ್ತಾಳೆ. ಅದಕ್ಕೆ ಸರಿಯಾಗಿ, ಅವನು ಬಾಳು ಕೊಡುವುದಕ್ಕೆ ಬರುತ್ತಾನೆ. ತಾನು ವೇಶ್ಯೆ ಅಂತ ಅವಳು ಅದೆಷ್ಟೇ ನೆನಪಿಸಿದರೂ, ಅವನು ಕೇಳುವುದಿಲ್ಲ. “ನನಗೆ ನಿನ್ನ ಭವಿಷ್ಯ ಮುಖ್ಯವೇ ಹೊರತು, ಭೂತಕಾಲವಲ್ಲ …’ ಎಂದು ಹೇಳುತ್ತಾನೆ. ಅವನ ಮಾತಿಗೆ ಫಿದಾ ಆಗುವ ಅವಳು, ಸಾವಿರ ಕನಸು ಕಾಣುತ್ತಾಳೆ. ಅವಳ ಕನಸು ನನಸಾಯಿತು ಎನ್ನುವಷ್ಟರಲ್ಲೇ …
“ದುನಿಯಾ’ ಚಿತ್ರವು ಈ ಪಾಪಿ ದುನಿಯಾದ ಚಿತ್ರಣವನ್ನು ಹಿಡಿದಿಟ್ಟರೆ, “ಯೋಗಿ ದುನಿಯಾ’ ಚಿತ್ರವು ಮೆಜೆಸ್ಟಿಕ್‌ನ ಕರಾಳ ಚಿತ್ರಣವನ್ನು ಹಿಡಿದಿಡುತ್ತದೆ. ಇಲ್ಲಿ ಮೆಜೆಸ್ಟಿಕ್ ಪ್ರದೇಶದ ಬೆಟ್ಟಿಂಗ್ ಮಾಫಿಯಾ, ವೇಶ್ಯವಾಟಿಕೆ, ಕುಡಿತ, ರೌಡಿಸಂ, ರಾತ್ರಿ ಚಟುವಟಿಕೆ ಮುಂತಾದ ಹಲವು ವಿಷಯಗಳನ್ನು ಹಿಡಿದಿಡುತ್ತದೆ. ಇದೆಲ್ಲವನ್ನೂ ತೋರಿಸುತ್ತಲೇ ಒಂದು ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಹರಿ. ಜೂಜಾಡುವುದು ಎಂಥ ತಪ್ಪು ಮತ್ತು ಬೆಟ್ಟಿಂಗ್‌ನಿಂದ ಒಬ್ಬ ಮನುಷ್ಯ ಯಾವ ಹಂತ ತಲುಪುತ್ತಾನೆ ಎಂದು ಹೇಳುತ್ತಾ ಹೋಗುತ್ತಾರೆ.
ಆದರೆ, ಚಿತ್ರದ ಕಥೆಯೇ ಬೇರೆ. “ಯೋಗಿ ದುನಿಯಾ’ ಚಿತ್ರವು ಯೋಗಿ ಎಂಬ ಅನಾಥ ಮತ್ತು ಶೀಲ ಎಂಬ ವೇಶ್ಯೆಯ ಸುತ್ತ ಸುತ್ತುತ್ತದೆ. ಬುಕ್ಕಿಯಾಗಿರುವ ಅವನು ಅವಳಿಗೆ ಬೋಲ್ಡ್ ಆಗುತ್ತಾನೆ. ಆಕೆ ವೇಶ್ಯೆ ಅಂತ ಗೊತ್ತಿದ್ದರೂ ಮನಸ್ಸು ಕೊಡುತ್ತಾನೆ. ತಾನು ಮಾಡುತ್ತಿರುವುದು ಗೊತ್ತಿರುವುದು ತಪ್ಪು ಎಂದು ಗೊತ್ತಿದ್ದರೂ, ಆಕೆಯನ್ನು ಆ ಪಾಪಕೂಪದಿಂದ ಹೊರತರುವುದಕ್ಕೆ ಕಷ್ಟಪಡುತ್ತಾನೆ. ಕೊನೆಗೆ ಆ ನಿಟ್ಟಿನಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥೆ.
ಈ ಕಥೆಗೂ, ಮೇಲಿನ ಸಂದೇಶಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಬೆಟ್ಟಿಂಗ್ ದಂಧಯೆ ಹಿನ್ನೆಲೆಯಲ್ಲಿ ಈ ಕಥೆಯನ್ನು ಹೇಳಲಾಗಿದೆ. ನಾಯಕ ಇಲ್ಲಿ ಬೆಟ್ಟಿಂಗ್ ಮಾಡುವುದು ಕಡಿಮೆಯೇ. ಅವನೊಬ್ಬ ಬುಕ್ಕಿ. ಬೆಟ್ಟಿಂಗ್ ಮಾಡಿ, ಮನೆ-ಮಠ ಕಳೆದುಕೊಳ್ಳುವುದಕ್ಕೆ ಬೇರೆಯದೇ ಪಾತ್ರಗಳಿವೆ. ಈ ಕಥೆಯ ನಡುವೆಯೇ ಅವರ ಕಥೆಗಳೂ ಇವೆ. ಅವರ ನಡುವೆ ಇವರದು, ಇವರ ನಡುವೆ ಅವರ ಕಥೆಯು ಆಗಾಗ ಹಾದುಹೋಗುತ್ತಿರುತ್ತದೆ. ಹಾಗಾಗಿ ಚಿತ್ರಕ್ಕೊಂದು ಫೋಕಸ್ ಮಿಸ್ ಆಗಿದೆ. ಇಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ನಿರ್ದೇಶಕರು ಒಂದು ದೃಶ್ಯವನ್ನು ಬೇಗ ಮುಗಿಸುವುದೆ ಇಲ್ಲ. ಒಂದು ದೃಶ್ಯವನ್ನು ಮಿನಿಮಮ್ ಹತ್ತು ನಿಮಿಷಗಳ ಕಾಲ ಓಡಿಸುತ್ತಾರೆ. ಇದೆಲ್ಲದರಿಂದ ಚಿತ್ರ ಒಂದು ಹಂತದಲ್ಲಿ ಬಹಳ ನಿಧಾನವಾಗಿಬಿಡುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ನಿರ್ದೇಶಕರು ಒಂದು ವಿಭಿನ್ನ ಟ್ವಿಸ್ಟ್ ಕೊಡುವ ಮೂಲಕ ಎಲ್ಲರಿಗೂ ಶಾಕ್ ಕೊಡುತ್ತಾರೆ. ಅದೊಂದು ಟ್ವಿಸ್ಟ್ ಬಿಟ್ಟರೆ, ಈ ಚಿತ್ರದಲ್ಲಿ ನೆನಪುಳಿಯುವ ಅಂಶಗಳು ಕಡಿಮೆಯೇ.
ಚಿತ್ರ ಹೇಗಾದರೂ ಇರಲಿ, ಚಿತ್ರದಲ್ಲೊಂದಿಷ್ಟು ಗಮನಾರ್ಹವಾದ ಅಭಿನಯವಿದೆ. ಯೋಗಿ ಮತ್ತು ಹಿತ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುವುದರ ಜೊತೆಗೆ ಇನ್ನೊಂದಿಷ್ಟು ಪಾತ್ರಗಳು ತಮ್ಮ ಅಭಿನಯದಿಂದ ಗಮನಸೆಳೆಯುತ್ತವೆ. ಪ್ರಮುಖವಾಗಿ ಅಶ್ವತ್ಥ್ ನೀನಾಸಂ, ಶಿವಮಂಜು, ಸಂದೀಪ್, ವಸಿಷ್ಠ ಸಿಂಹ ಎಲ್ಲರೂ ತಮ್ಮ ಪಾತ್ರಗಳನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ. ಮಂಜು ಛಾಯಾಗ್ರಹಣ ಮತ್ತು ಬಿ.ಜೆ. ಭರತ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ: ಯೋಗಿ ದುನಿಯಾ
ನಿರ್ದೇಶನ: ಹರಿ
ನಿರ್ಮಾಣ: ಟಿ.ಪಿ. ಸಿದ್ಧರಾಜು
ತಾರಾಗಣ: ಯೋಗಿ, ಹಿತ ಚಂದ್ರಶೇಖರ್, ವಸಿಷ್ಠ ಸಿಂಹ, ಅಶ್ವತ್ಥ್ ನೀನಾಸಂ, ಶಿವಮಂಜು ಮುಂತಾದವರು
ಚೇತನ್ ನಾಡಿಗೇರ್