Advertisement
ದೇಶದ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ, ಸಾಧು ಸಂತರ ತಂಗುದಾಣ, ಧಾರ್ಮಿಕ ಗ್ರಂಥಾಲಯ, ಗೋಶಾಲೆ ಸೇರಿ ಹಲವು ವಿಶೇಷತೆಗಳಿಗೆ ಮೇಲ್ಪಂಕ್ತಿಯಾಗಿರುವ ನಾಥ ಪರಂಪರೆಯ ಗೋರಖ್‌ಪುರದ ಗೋರಖನಾಥ ಮಠಕ್ಕೆ ಮುಸ್ಲಿಮರು ಸೇರಿದಂತೆ ಲಕ್ಷಾಂತರ ಭಕ್ತರು, ಅನುಯಾಯಿಗಳಿರುವುದು ವಿಶೇಷ. ಈ ಮಠಕ್ಕೆ ಮುಖ್ಯಸ್ಥರಾಗಿರುವ ಯೋಗಿ ಅವರನ್ನು ಇಲ್ಲಿಂದಲೇ ಸ್ಪರ್ಧೆಗೆ ಅಣಿಗೊಳಿಸಿರುವುದು ಬಿಜೆಪಿಗೆ ಧನಾತ್ಮಕವಾಗಲಿದೆ ಎನ್ನುವುದು ಲೆಕ್ಕಾಚಾರ.
ಗೋರಖ್‌ಪುರ ವ್ಯಾಪ್ತಿಯು 62 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಸಚಿವರಾಗಿದ್ದ ಈ ಭಾಗದ ಕೆಲ ನಾಯಕರು ಇತ್ತೀಚೆಗೆ ಪಕ್ಷ ತೊರೆದು ಸೈಕಲ್ (ಸಮಾಜವಾದಿ ಪಕ್ಷ) ಹತ್ತಿದ್ದಾರೆ. ಯೋಗಿ ಅವರು ಈ ಹಿಂದೆ ಗೋರಖ್‌ಪುರ ಸಂಸತ್ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದಾರೆ. ಇದೀಗ ವಿಧಾನಸಭೆ ಚುನಾವಣೆಗೆ ಗೋರಖ್‌ಪುರ ನಗರದಿಂದ ಕಣಕ್ಕಿಳಿಯುವುದರಿಂದ ಸುತ್ತಮುತ್ತಲಿನ ಹಲವು ಜಿಲ್ಲೆಗಳಲ್ಲಿ ಪಕ್ಷಕ್ಕೆ ಧನಾತ್ಮಕ, ಪ್ರಭಾವ ಸೃಷ್ಟಿಯಾಗಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಬಿಜೆಪಿಯ ಲೆಕ್ಕಾಚಾರ. ಬಿಜೆಪಿಯತ್ತ ಮತಗಳ ಧ್ರುವೀಕರಣ?:
2017ರ ವಿಧಾನಸಭಾ ಚುನಾವಣೆ ವೇಳೆ ಸಂಸದರಾಗಿದ್ದ ಯೋಗಿ, ಅತ್ಯುತ್ಸಾಹದಿಂದ ಪ್ರಚಾರಕ್ಕಿಳಿದ ಪರಿಣಾಮ ಗೋರಖ್‌ಪುರ ಹಾಗೂ ಜಿಲ್ಲೆಯ ಅಕ್ಕಪಕ್ಕದ 9 ಜಿಲ್ಲೆಗಳ 62 ಕ್ಷೇತ್ರಗಳ ಪೈಕಿ 44ರಲ್ಲಿ ಕೇಸರಿ ಬಾವುಟ ಹಾರಿತ್ತು. ಅಂದು ಬರೀ ಸಂಸದರಾಗಿದ್ದ ಯೋಗಿ, ಇಂದು 5 ವರ್ಷ ಪೂರ್ಣಾವಧಿ ಆಡಳಿತ ನಡೆಸಿದ ಮುಖ್ಯಮಂತ್ರಿ ಯಾಗಿದ್ದು, ಪಕ್ಷಕ್ಕೆ ಬಹುಮತ ಬಂದರೆ ಮತ್ತೊಂದು ಅವಧಿಗೆ ಸಿಎಂ ಆಗಲಿರುವುದರಿಂದ ತವರು ಪ್ರದೇಶ ವ್ಯಾಪ್ತಿಯಲ್ಲಿ ಬಿಜೆಪಿಯತ್ತ ಮತಗಳ ಧ್ರುವೀಕರಣವಾದರೂ ಅಚ್ಚರಿ ಇಲ್ಲ. ಆರ್‌ಪಿಎನ್ ಸಿಂಗ್ ಬಲ:
ಒಬಿಸಿ ನಾಯಕರಾದ ಸ್ವಾಮಿಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್, ಓಂಪ್ರಕಾಶ್ ರಾಜಬರ್ ಸೇರಿದಂತೆ ಕೆಲ ಪ್ರಮುಖರು ಇತ್ತೀಚೆಗೆ ಕಮಲ ತೊರೆದು ಎಸ್ಪಿ ಪಾಳಯಕ್ಕೆ ಜಿಗಿದಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ, ರಾಜಮನೆತನದ ಆರ್‌ಪಿಎನ್ ಸಿಂಗ್ ಕೇಸರಿ ಪಾಳೆಯಕ್ಕೆ ಬಂದಿರುವುದು ಬಿಜೆಪಿಗೆ ವರವಾಗಿ ಪರಿಣಮಿಸಿದೆ.
Advertisement
ಹಿಂದೂ ಯುವ ವಾಹಿನಿ ಬಲ: ಯೋಗಿ ಆದಿತ್ಯನಾಥ ಈ ಭಾಗದಲ್ಲಿ ಮಹಾರಾಜ ಜೀ ಎಂದೇ ಪ್ರಖ್ಯಾತಿ ಹೊಂದಿದ್ದು, ಜನರಲ್ಲಿ ಇವರ ಬಗ್ಗೆ ಪೂಜ್ಯನೀಯ ಭಾವನೆ ಇದೆ. 1992ರಲ್ಲಿ ಅವರೇ ಸ್ಥಾಪಿಸಿದ್ದ ಹಿಂದೂ ಯುವ ವಾಹಿನಿ ಸಂಘಟನೆ ಈ ಭಾಗದಲ್ಲಿ ಭದ್ರ ಅಸ್ತಿತ್ವ ಹೊಂದಿರುವುದರಿಂದ ಬಿಜೆಪಿಗೆ ಅನುಕೂಲವಾಗಲಿದೆ. ಗೋರಖ್‌ಪುರ ಪ್ರದೇಶ ವ್ಯಾಪ್ತಿಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯೋಗಿ ಅವರ ಸಲಹೆ, ನಿರ್ಧಾರಕ್ಕೆ ಮನ್ನಣೆ ಇರುವುದು ಸ್ಪಷವಾಗಿ ಗೋಚರಿಸುತ್ತಿದೆ. ಗೋರಖ್‌ಪುರ ಪ್ರದೇಶವು ಮಹಾರಾಜಗಂಜ್, ದಿಯೋರಿಯಾ, ಕುಶಿನಗರ್, ಬಸ್ತಿ, ಸಂತ ಕಬೀರ್‌ನಗರ್, ಸಿದ್ಧಾರ್ಥನಗರ, ಅಜಂಗಡ, ಬಲಿಯಾ, ಮಾವ್ ಜಿಲ್ಲೆಗಳನ್ನು ಒಳಗೊಂಡಿದೆ. ಶೇ.52ರಷ್ಟು ಒಬಿಸಿ:
ಈ ಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಮತದಾರರು ಶೇ.52ರಷ್ಟಿದ್ದರೆ, ಪರಿಶಿಷ್ಟ ಜಾತಿ ಮತದಾರರು ಶೇ.20 ರಷ್ಟಿದ್ದಾರೆ. ಮೇಲ್ವರ್ಗದ ಬ್ರಾಹ್ಮಣ, ಕ್ಷತ್ರಿಯ, ಕಾಯಸ್ತಾ ಮತದಾರರ ಪ್ರಮಾಣ ಗಣನೀಯ ಪ್ರಮಾಣದಲ್ಲಿದೆ. ಮಾವ್, ಅಜಂಗಡ, ಪದ್ರಾವ° ಸೇರಿದಂತೆ 15 ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಬಾಹುಳ್ಯವಿದೆ. ಇದೇ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಬಲ ಎದುರಾಳಿಗಳಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾಸಿಂಗ್ ಚೌಹಾಣ್, ವಿಪಕ್ಷ ನಾಯಕ ರಾಮ್‌ಗೋವಿಂದ್ ಚೌಧರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಬಿಎಸ್ಪಿ ನಾಯಕ ಉಮಾಶಂಕರ್, ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ಸ್ಪರ್ಧಿಗಳು. ಎಸ್ಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಅಖೀಲೇಶ್ ಯಾದವ್ ಪ್ರತಿನಿಧಿಸುವ ಅಜಂಗಡ ಸಂಸತ್ ಕ್ಷೇತ್ರ ಸಹ ಈ ಗೋರಖ್‌ಪುರ ಪ್ರದೇಶ ವ್ಯಾಪ್ತಿಯಲ್ಲಿಯೇ ಬರುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಯೋಗಿ ವರ್ಚಸ್ಸು ಮತಗಳನ್ನು ಸೆಳೆಯಲಿದೆ ಎಂಬ ಲೆಕ್ಕಾಚಾರ ಹಾಕಿಕೊಂಡೇ ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.