ಲಕ್ನೋ: ರಾಮ ಜನ್ಮಭೂಮಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಸಮಯಕ್ಕೆ ಸರಿಯಾಗಿ ನೀಡಿದ ನ್ಯಾಯವನ್ನು ಉತ್ತಮ ನ್ಯಾಯ ಎಂದು ಪರಿಗಣಿಸಲಾಗುತ್ತದೆ. ನ್ಯಾಯದಾನ ವಿಳಂಬವಾದರೆ ಕೆಲವು ಬಾರಿ ಇದು ಅನ್ಯಾಯವೂ ಆಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ರಾಮಜನ್ಮಭೂಮಿ ಪ್ರಕರಣದ ವಿಚಾರಣೆಯನ್ನು ಜನವರಿಯಲ್ಲಿ ನಡೆಸಲು ಸುಪ್ರೀಂ ಸೋಮವಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಯೋಗಿ ಈ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ವಿವಿಧ ಹಿಂದೂ ಮುಖಂಡರು ಅಧ್ಯಾದೇಶ ಹೊರಡಿಸುವಂತೆಯೂ ಆಗ್ರಹಿಸಿದ್ದಾರೆ. ಇನ್ನೊಂದೆಡೆ ಈ ಬಗ್ಗೆ ಟ್ವೀಟ್ ಮಾಡಿದ ಹರಿಯಾಣ ಸಚಿವ ಅನಿಲ್ ವಿಜ್ ಈ ಬಗ್ಗೆ ವ್ಯಂಗ್ಯವಾಡಿದ್ದಾರೆ. 1993 ಮುಂಬಯಿ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ಗೆ ಗಲ್ಲಿಗೇರಿಸುವುದನ್ನು ವಿಳಂಬಗೊಳಿಸುವ ಅರ್ಜಿಯನ್ನು ರಾತ್ರೋರಾತ್ರಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ಗೆ ಸಾಧ್ಯವಿದೆ. ಹಾಗೆಯೇ, ಕೋಟ್ಯಂತರ ಹಿಂದೂಗಳು ಕಾಯುತ್ತಿರುವ ರಾಮ ಮಂದಿರ ವಿವಾದ ವಿಚಾರಣೆಗೆ ದಿನಾಂಕ ನಿಗದಿಪಡಿಸಬಹುದಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.