ಲಕ್ನೋ/ಉತ್ತರಪ್ರದೇಶ: ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದ ದೇಶದ ಅತೀ ದೊಡ್ಡ ರಾಜ್ಯ ಎನಿಸಿಕೊಂಡ ಉತ್ತರಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪ್ರಚಂಡ ಜಯಭೇರಿ ಬಾರಿಸುವ ಮೂಲಕ ಗದ್ದುಗೆ ಏರಿದ್ದು, ಕೊನೆ ಕ್ಷಣದ ಬದಲಾವಣೆ ಎಂಬಂತೆ ನಡೆದ ಹೈಡ್ರಾಮಾದಲ್ಲಿ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಯೋಗಿ ಆದಿತ್ಯನಾಥ್ ಗೆ ಸಿಎಂ ಪಟ್ಟ ಒಲಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹಲವು ಟಿವಿ ಚಾನೆಲ್ ಗಳ ವರದಿ ತಿಳಿಸಿದೆ.
44ವರ್ಷದ ಯೋಗಿ ಆದಿತ್ಯನಾಥ್ 6 ಬಾರಿ ಗೋರಖ್ ಪುರ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದು, ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಫೈಯರ್ ಬ್ರ್ಯಾಂಡ್ ಸ್ಟಾರ್ ಪ್ರಚಾರಕರಾಗಿದ್ದರು. ಒಂದೆಡೆ ಕೇಶವ ಮೌರ್ಯ ಬೆಂಬಲಿಗರು, ಮೌರ್ಯಗೆ ಸಿಎಂ ಪಟ್ಟ ನೀಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಯೋಗಿ ಬೆಂಬಲಿಗರು ಯೋಗಿ ಪರ ಘೋಷಣೆ ಕೂಗಿದ್ದರು.
ಉತ್ತರಪ್ರದೇಶ ಮುಖ್ಯಮಂತ್ರಿ ಪಟ್ಟ ಯಾರಿಗೆ ಎಂಬ ಬಗ್ಗೆ ತೀರ್ಮಾನಿಸುವ ನಿಟ್ಟಿನಲ್ಲಿ ಶನಿವಾರ ಸಂಜೆ ಲಕ್ನೋದ ಲೋಕಭವನದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯಿತು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು 25 ನಿಮಿಷಗಳ ಕಾಲ ತಡವಾಗಿ ಸಭೆ ಆರಂಭವಾಯಿತು.
ದಿಢೀರ್ ಸಭೆ:
ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನದಲ್ಲಿ ಮೊದಲಿಗೆ ಕೇಶವ ಮೌರ್ಯ, ಮನೋಜ್ ಸಿನ್ನಾ ಹೆಸರು ಮುಂಚೂಣಿಯಲ್ಲಿದ್ದು, ಆದರೆ ಶನಿವಾರ ಕೊನೆ ಕ್ಷಣದ ಬದಲಾವಣೆ ಎಂಬಂತೆ ಮನೋಜ್ ಸಿನ್ನಾ, ಮೌರ್ಯ ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದಲ್ಲದೇ, ಗೋರಖ್ ಪುರ ಕ್ಷೇತ್ರದ ಸಂಸದ ಯೋಗಿ ಆದಿತ್ಯನಾಥ ಹೆಸರು ಕೇಳಿ ಬಂದಿತ್ತು.
ಸಭೆಯಲ್ಲಿ ಯುಪಿ ಸಿಎಂ ಗದ್ದುಗಾಗಿ ಪ್ರಬಲ ಪೈಪೋಟಿ ನಡೆದಿದ್ದು, ಆ ಹಿನ್ನೆಲೆಯಲ್ಲಿ ಯುಪಿಗೆ ಒಬ್ಬರು ಸಿಎಂ ಹಾಗೂ ಇಬ್ಬರಿಗೆ ಡಿಸಿಎಂ ಸ್ಥಾನ ಕೊಡುವ ಬಗ್ಗೆ ಮಾತುಕತೆ ನಡೆದಿತ್ತು. ಕೇಶವ ಮೌರ್ಯ ಹಾಗೂ ದಿನೇಶ್ ಶರ್ಮಾಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ಕೊನೆಗೂ ಅಧಿಕೃತ ಘೋಷಣೆ:
ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಎಂದು ಬಿಜೆಪಿ ಅಧಿಕೃತವಾಗಿ ಘೋಷಿಸುವ ಮೂಲಕ ತೆರೆಎಳೆದಿದೆ.