ಲಕ್ನೋ: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ. ಇಂದು ಸಂಜೆ 5.30ಕ್ಕೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಲಾಭಕ್ಕಾಗಿ ಈ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಸುಮಾರು 10 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ಬಿಜೆಪಿ ಸೇರಿದ್ದ ರಾಹುಲ್ ಗಾಂಧಿಗೆ ಆಪ್ತರಾಗಿದ್ದ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಅವರು ಇಂದು ಯೋಗಿ ಸಂಪು ಸೇರಲಿದ್ದಾರೆ ಎನ್ನಲಾಗಿದೆ. ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕರಾದ ಜಿತಿನ್ ಪ್ರಸಾದ್ ಅವರ ಸೇರ್ಪಡೆ ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ದೊಡ್ಡ ಮುನ್ನಡೆ ಒದಗಿಸಲಿದೆ ಎನ್ನಲಾಗಿದೆ.
ಇದನ್ನೂ ಓದಿ:ಕಾಶ್ಮೀರ : ಬಿಜೆಪಿ ಕಾರ್ಯಕರ್ತನ ಹತ್ಯಗೈದಿದ್ದ ಆರೋಪಿ ಎನ್‍ಕೌಂಟರ್ ನಲ್ಲಿ ಬಲಿ
ಬಿಜೆಪಿ ಮಿತ್ರ ಪಕ್ಷ ನಿಶಾದ್ ಪಾರ್ಟಿಯ ಸಂಜಯ್ ನಿಶಾದ್ ಕೂಡಾ ಯೋಗಿ ಸಂಪುಟ ಸೇರಲಿದ್ದಾರೆ. ಒಬಿಸಿ ಸಮದಾಯಕ್ಕೆ ಸೇರಿರುವ ಸಂಜಯ್ ನಿಶಾದ್ ಅವರು ಕಳೆದ ಬಾರಿ ಕೇಂದ್ರ ಸಂಪುಟಕ್ಕೆ ತನ್ನ ಪುತ್ರ ಪ್ರವೀಣ್ ನಿಶಾದ್ ರನ್ನು ಸೇರಿಸಿಕೊಳ್ಳದಿದ್ದಾಗ ಅಸಮಾಧಾನ ಹೊರ ಹಾಕಿದ್ದರು.
2017ರ ಚುನಾವಣೆಯಲ್ಲಿ ಬಿಜೆಪಿ 325 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಸಮಾಜವಾದಿ ಮಿತ್ರ ಪಕ್ಷಗಳು 54 ಮತ್ತು ಬಿಎಸ್ ಪಿ 19 ಸೀಟು ಗೆದ್ದುಕೊಂಡಿತ್ತು.