Advertisement

Sandalwood: ‘ಗರಡಿ’ ಮನೆಯಲ್ಲಿ ಪಾಟೀಲ್ ಖದರ್; ನ.10ಕ್ಕೆ ರಿಲೀಸ್

03:28 PM Sep 29, 2023 | Team Udayavani |

ಬಿ.ಸಿ.ಪಾಟೀಲ್‌ ನಿರ್ಮಾಣದ “ಗರಡಿ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಈ ಚಿತ್ರ ನವೆಂಬರ್‌ 10ರಂದು ತೆರೆಕಾಣಲಿದೆ. ಇತ್ತೀಚೆಗೆ ಈ ಚಿತ್ರದ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಆಗಿದ್ದು, ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯೋಗರಾಜ್‌ ಭಟ್‌ ಅವರು ಬರೆದಿರುವ “ಲೋಕಾನೆ ಗರಡಿ.. ಬಾಳೇ ಅಖಾಡ..’ ಎಂಬ ಗೀತೆಯನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಅವರೇ ಮುಖ್ಯ ಗಾಯಕರಾಗಿ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ ಅವರ ಜೊತೆಗೆ ಸಾಕಷ್ಟು ಪ್ರತಿಭಾವಂತ ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ.

Advertisement

ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕ ಯೋಗರಾಜ್‌ ಭಟ್‌ ಮಾತನಾಡಿ, “ಗರಡಿ ಎಂದರೆ ಒಂದು ಊರನ್ನು ಕಾಯುವ ಪೊಲೀಸ್‌ ಠಾಣೆ ಇದ್ದ ಹಾಗೆ. ಹಿಂದೆ ಒಂದು ಊರಿನ ರಕ್ಷಣೆಗೆ ಗರಡಿ ಬಹು ಮುಖ್ಯವಾಗಿತ್ತು. ಊರಿನವರು ಸಹ ಗರಡಿ ಮನೆಯ ಕುಸ್ತಿ ಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ ಗರಡಿ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್‌ ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಅಭಿನಯಿಸಿದ್ದಾರೆ. ಇದು ಒಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು. ಚಿತ್ರ ನವೆಂಬರ್‌ 10ರಂದು ಬಿಡುಗಡೆಯಾಗುತ್ತಿದೆ’ ಎಂದರು.

ಬಿ.ಸಿ.ಪಾಟೀಲ್‌ “ಗರಡಿ’ ಚಿತ್ರವನ್ನು ನಿರ್ಮಿಸುವ ಜೊತೆಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ಗರಡಿ ಚಿತ್ರ ಆರಂಭವಾಗಿ ಈ ನವೆಂಬರ್‌ 14 ಕ್ಕೆ ಎರಡು ವರ್ಷಗಳಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್‌ ಅವರು ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುತ್ತದೆ. ಯೋಗರಾಜ್‌ ಭಟ್‌ ಅವರು ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿ ಪಟ್ಟಿದ್ದೇನೆ. ನಿಮಗೂ ಚಿತ್ರ ಹಿಡಿಸಲಿದೆ’ ಎನ್ನುವುದು ಅವರ ಮಾತು.

ಯಶಸ್‌ ಸೂರ್ಯ ಈ ಚಿತ್ರದ ನಾಯಕ. “ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ ಅಂತ. ಎಲ್ಲರೂ ಗರಡಿ ಸೂರಿ ಅಂತ ಕರೆಯುತ್ತಿರುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್‌ ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾಗಿರುವ ಟೈಟಲ್‌ ಸಾಂಗ್‌ನಲ್ಲಿ ನಾನು ಡ್ಯಾನ್ಸ್‌ ಮಾಡಿದ್ದೇನೆ. ಯೋಗರಾಜ್‌ ಭಟ್‌ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ’ ಎನ್ನುತ್ತಾರೆ ನಾಯಕ ಸೂರ್ಯ.

ನಾಯಕಿ ಸೋನಾಲ್‌ ಮಾಂತೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ಧರ್ಮಣ್ಣ, ರಾಘು, ಛಾಯಾಗ್ರಾಹಕ ನಿರಂಜನ್‌ ಬಾಬು ಮಾತನಾಡಿದರು.

Advertisement

ರವಿ ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next