Advertisement
ಮಣಿಪಾಲ: ಯೋಗ ಜೀವನವೆಂದರೆ “ಪರಸ್ಪರ ಅರಿತು ಬದುಕುವುದು’. ಅದು ಸಮಾಜ ದೊಂದಿಗೆ ಅಥವಾ ವ್ಯಕ್ತಿಯೊಂದಿಗೆ ಇರಬಹುದು. ದಂಪತಿಯ ಕಲ್ಪನೆ ಯಲ್ಲೂ ಅದೇ. ಇಬ್ಬರು ಪರಸ್ಪರ ಅರಿತು ನಡೆದರೆ ದಂಪತಿ; ಇಲ್ಲವೇ ಬರೀ ಪತಿ-ಪತ್ನಿ. ಶರೀರಕ್ಕಿಂತ ಸೂಕ್ಷ್ಮ ಮನಸ್ಸು; ಮನಸ್ಸಿಗಿಂತ ಸೂಕ್ಷ್ಮ ಬುದ್ಧಿ (ಬೌದ್ಧಿಕ); ಅದಕ್ಕಿಂತ ಸೂಕ್ಷ್ಮ ಭಾವನೆ; ಭಾವನೆಗಳಿಗಿಂತ ಸೂಕ್ಷ್ಮ ಆನಂದ. ಸುಖ-ಶಾಂತಿ- ನೆಮ್ಮದಿಗಾಗಿ ಎಲ್ಲ ಹರಸಾಹಸ.
ನಿತ್ಯವೂ ಯೋಗಾಭ್ಯಾಸ ಮಾಡಿದರೆ (ಬರೀ ಆಸನಗಳಲ್ಲ, ಧ್ಯಾನ ಇತ್ಯಾದಿ ಭಾವ ಸಂಸ್ಕಾರ ಕ್ರಿಯೆಯನ್ನು ಒಳಗೊಂಡು) ನಮ್ಮೊಳಗಿನ ಭಾವನೆಗಳಿಗೆ ಸಂಸ್ಕಾರ ಸಿಗುತ್ತದೆ. ಅದರರ್ಥ ಪರಸ್ಪರ ಭಾವನೆಗಳ ಗೌರವಿಸುವ ಬಗೆಯನ್ನು ಕಲಿತಂತೆ.ಆಗ ಧನಾತ್ಮಕ ಬದುಕು ನಮ್ಮದು. ತಮ್ಮ ಭಾವನೆಗಳಲ್ಲಿ ಉಂಟಾಗುವ ಗೊಂದಲ, ಏರಿಳಿತಗಳು ಮನಸ್ಸಿನ ಮೇಲೆ ಬೀರುವ ಪರಿಣಾಮವೇ ಅಲ್ಲೋಲ ಕಲ್ಲೋಲ ಮನಸ್ಥಿತಿ. ಅತಿ ಅಪೇಕ್ಷೆ ಇದ್ದಾಗ ಸ್ವಾರ್ಥ ಬರುವುದು ಸಾಮಾನ್ಯ. ಎಲ್ಲಿ ಹೊಂದಾಣಿಕೆ ಇರದೋ ಅಲ್ಲಿ ಅಸೂಯೆ, ದ್ವೇಷ, ಅಸಹನೆ ಹುಟ್ಟಿಕೊಳ್ಳುವುದು ಸಹಜ. ಅತೀ ಅಭಿಮಾನವೇ ಅಹಂಕಾರದ ಸ್ವರೂಪ. ಇಂಥವರದ್ದು ಎರಡೇ ಬಯಕೆ-ನಾವು ಹೇಳಿದಂತೆ ಎಲ್ಲರೂ ಕೇಳಬೇಕು ಮತ್ತು ನಮಗೆ ಯಾರೂ ಹೇಳಬಾರದು.
Related Articles
ಯೋಗ ಎಂದರೆ “ಒಂದು ಮಾಡುವುದು’ ಎಂದರ್ಥ. ನಿತ್ಯ ಯೋಗಾಭ್ಯಾಸದಿಂದ ಶಾರೀರಿಕ ದೃಢತೆಯಷ್ಟೇ ಅಲ್ಲ; ಮಾನಸಿಕ ಸಮಾಧಾನ-ಶಾಂತಿ ಸಿಗುತ್ತದೆ. ಬೌದ್ಧಿಕ ವಿಕಾಸವಾಗುತ್ತದೆ. ಭಾವ ನಾತ್ಮಕ ಸಂಸ್ಕಾರ ದಕ್ಕುತ್ತದೆ.
Advertisement
ಇಷ್ಟೆಲ್ಲ ಸಾಧ್ಯವಾದರೆ ಇಡೀ ಬದುಕನ್ನು ಆಧ್ಯಾತ್ಮಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಲು, ಅನುಭವಿಸಲು ಬರಲಿದೆ. ಆಗ ನಮ್ಮಲ್ಲಿ ಹೊಂದಾ ಣಿಕೆ, ವಿನಯವಂತಿಕೆ ಹಾಗೂ ನಿರಹಂಕಾರ ಮನೆ ಮಾಡುತ್ತದೆ. ಇವು ಇರುವಲ್ಲಿ ಸಹೃದಯತೆಗಷ್ಟೇ ಸ್ಥಾನ. ಅಲ್ಲಿ ಮತ್ತೂಬ್ಬರ ತಪ್ಪು- ಒಪ್ಪುಗಳಲ್ಲಿ ಹುಳುಕು ಹುಡುಕದೇ ಹೊಂದಾಣಿಕೆ ಸಾಗುವ ಮನಸ್ಥಿತಿ ಇರಲಿದೆ. ಇದು ಸಿದ್ಧಿಸಿದ ವಿಚ್ಛೇದನ ದಂಥ ಮಾತಿಗೆ ಅರ್ಥವಿರದು.
ಕೆ. ರಾಘವೇಂದ್ರ ಪೈ ಮೂಲತಃ ಕಾರ್ಕಳದವರು. ದಾಸ ಸಾಹಿತ್ಯ ಮತ್ತು ಯೋಗದರ್ಶನದಲ್ಲಿ ಡಿ.ಲಿಟ್ ಪದವಿ ಪಡೆದು, 30 ವರ್ಷಗಳಿಂದ ಸಾವಿರಾರು ಮಂದಿ ಶಿಕ್ಷಕರಿಗೆ ಯೋಗ ಪ್ರಶಿಕ್ಷಣ, ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದವರು. ವಿಯೆಟ್ನಾಂ ದೇಶದಲ್ಲಿ 60 ಗಂಟೆ ಕಾಲ 7,777 ಆವರ್ತ ಸೂರ್ಯ ನಮಸ್ಕಾರ ಮಾಡಿದ್ದು ಇವರ ದಾಖಲೆ. ಪ್ರಸ್ತುತ ಮೈಸೂರು ಅವರ ಕಾರ್ಯಸ್ಥಾನ. ಲಂಡನ್. ಸಿಂಗಾಪುರ, ಶ್ರೀಲಂಕಾ, ದೋಹಾ ಕತಾರ್ ಸೇರಿದಂತೆ ವಿವಿಧೆಡೆ ಪ್ರಬಂಧ ಮಂಡನೆ, ಕಮ್ಮಟ ದಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ಉಡುಪಿಯಲ್ಲೂ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಹೆಸರಿನಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ.