Advertisement

ಯೋಗ ಥೆರಪಿ : ಮಾತ್ರೆ, ಚುಚ್ಚುಮದ್ದುಗಳಿಲ್ಲದ ಪ್ರಾಕೃತಿಕ ಚಿಕಿತ್ಸೆ

02:22 PM Mar 06, 2018 | |

ಕೇಂದ್ರ ಸರಕಾರ ಯೋಗಕ್ಕೆ ಹಚ್ಚಿನ ಒತ್ತು ನೀಡುತ್ತಿದ್ದಂತೆ ಯೋಗ ಥೆರಪಿ ಅಥವಾ ಯೋಗ ಚಿಕಿತ್ಸೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಯಾವುದೇ ಮಾತ್ರೆ, ಚುಚ್ಚುಮದ್ದುಗಳಿಲ್ಲದೇ ನೀಡುವ ಚಿಕಿತ್ಸೆಯಿದು. ಇದರಿಂದ ಅಡ್ಡ ಪರಿಣಾಮಗಳ ಭಯವೂ ಇರುವುದಿಲ್ಲ. ಆ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇತ್ತ ಕಡೆ ಧಾವಿಸಿ ಬರುತ್ತಿದ್ದಾರೆ.

Advertisement

ಆಧುನಿಕ ಜಗತ್ತಿನಲ್ಲಿ ಕಾಯಿಲೆಗಳೇನೂ ಕಡಿಮೆಯಿಲ್ಲ. ಪ್ರತಿದಿನ ಹೊಸ ಹೊಸ ಕಾಯಿಲೆಗಳು ಧಾಂಗುಡಿ ಇಡುತ್ತಿವೆ. ಇದಕ್ಕೆ ತಕ್ಕನಾಗಿ ವೈದ್ಯಲೋಕವೂ ಜಾಗೃತಗೊಂಡಿದೆ. ಔಷಧ, ಟ್ಯಾಬ್ಲೆಟ್‌, ಇಂಜೆಕ್ಷನ್‌ ತಿಂದು ಸುಸ್ತಾಗಿರುವ ಸಾರ್ವಜನಿಕರು ಈಗ, ಯೋಗದ ಕಡೆಗೆ ಗಮನ ಹರಿಸಿದ್ದಾರೆ.

ಮಾನವನ ಸಂರಚನಾತ್ಮಕ ವ್ಯವಸ್ಥೆಗಳಾದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಜೀವನ ಶೈಲಿಗಳ ಜತೆಗೆ ಸಾಮರಸ್ಯ ವ್ಯವಸ್ಥೆ ಉಂಟು ಮಾಡುವುದೇ ಪ್ರಕೃತಿ ಚಿಕಿತ್ಸೆ ಅಥವಾ ಯೋಗ ಚಿಕಿತ್ಸೆ ಎಂದು ವ್ಯಾಖ್ಯಾನಿಸಲಾಗಿದೆ. ಉತ್ತಮ ಆರೋಗ್ಯ ವೃದ್ಧಿಸಲು, ರೋಗರುಜಿನಗಳ ತಡೆಗಟ್ಟಲು ಮತ್ತು ಶಮನಗೊಳಿಸಲು, ಉತ್ತಮ ಆರೋಗ್ಯವಂತ ಜೀವನ ಪಡೆದುಕೊಳ್ಳಲು ಈ ಚಿಕಿತ್ಸಾ ಪದ್ಧತಿ ಸಹಾಯಕ.

ವೇದ ತತ್ತ್ವಶಾಸ್ತ್ರದ ಆರು ವ್ಯವಸ್ಥೆಗಳಲ್ಲಿ ಯೋಗವೂ ಒಂದು. ಯೋಗ ಸೂತ್ರದಲ್ಲಿ ಸಂಕಲ್ಪಿಸಿದ ಮತ್ತು ವಿವಿಧ ಅಂಶಗಳನ್ನು ವ್ಯವಸ್ಥಿತವಾಗಿ ಸಂಸ್ಕರಿಸಿದ ಮಹರ್ಷಿ ಪತಂಜಲಿಯನ್ನು ಯೋಗದ ಪಿತಾಮಹ ಎಂದು ಕರೆಯಲಾಗಿದೆ. ಮನುಷ್ಯ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಅಷ್ಟಾಂಗ ಯೋಗದ ದಾರಿಯನ್ನು ಇವರು ತೋರಿಸಿಕೊಟ್ಟಿದ್ದಾರೆ.

ಸಂಸ್ಕೃತದ ಯೋಕ್‌ ಅಥವಾ ಯುಜ್‌ ಎಂಬ ಶಬ್ದದಿಂದ ಯೋಗ ಉತ್ಪತ್ತಿಯಾಗಿದೆ. ವೈಯಕ್ತಿಕ ಚೈತನ್ಯವನ್ನು ಸಾರ್ವತ್ರಿಕ ಚೈತನ್ಯವಾದ ಭಗವಂತನ ಜತೆಗೆ ಒಂದುಗೂಡಿಸುವುದು ಎಂದು ವಿಶ್ಲೇಷಿಸಲಾಗಿದೆ. ವ್ಯಕ್ತಿಯ ಒಳಗಡೆ ಒಂದು ರೀತಿಯ ಅದಮ್ಯ ಚೈತನ್ಯ ಅಡಗಿದೆ. ಈ ಶಕ್ತಿಯನ್ನು ಶಿಸ್ತು ಬದ್ಧವಾಗಿ ಮತ್ತು ಸಮತೋಲಿತವಾಗಿ ಅಭಿವೃದ್ಧಿ ಅಥವಾ ಸುಧಾರಣೆ ಮಾಡುವುದೇ ಯೋಗ. ಸ್ವಯಂ ಸಾಕ್ಷಾತ್ಕಾರ ಮಾಡುವ ದಾರಿಯನ್ನು ಯೋಗ ಸಂಪೂರ್ಣ ತೆರೆದಿಡುತ್ತದೆ. 

Advertisement

ಯೋಗದ ಪ್ರಮುಖ ಶಾಖೆಗಳೆಂದರೆ ರಾಜಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಹಠ ಯೋಗ. ಜೀವನದ ವಿವಿಧ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಯೋಗವನ್ನು ಬಳಸಿಕೊಳ್ಳಲಾಗುತ್ತದೆ. ಪ್ರಸ್ತುತ, ಆಧುನಿಕ ಒತ್ತಡಗಳ ನಿವಾರಣೆಗಾಗಿಯೇ ಬಳಕೆ ಮಾಡುತ್ತಾರೆ. ವಿವೇಕಾನಂದರು ಯೋಗದ ಬಗ್ಗೆ ಹೀಗೆ ಹೇಳಿ ದ್ದಾರೆ. “ಯೋಗವೆಂದರೆ ಮನಸ್ಸಿನ ಅಂತರಾಳ ವನ್ನು (ಚಿತ್ತ) ವಿವಿಧ ರೂಪಗಳನ್ನು (ವೃತ್ತಿಗಳು) ತಾಳದಂತೆ ನಿಗ್ರಹಿಸುವುದು’.

ಯೋಗಕ್ಕೆ ವಿಶ್ವಮಾನ್ಯತೆ ಪಟ್ಟ ಸಿಗುತ್ತಿದ್ದಂತೆ ವಿದೇಶಗಳಲ್ಲೂ ಯೋಗ ಶಿಕ್ಷಕರಿಗೆ, ಚಿಕಿತ್ಸಕರಿಗೆ ಭಾರೀ ಡಿಮ್ಯಾಂಡ್‌ ಕೇಳಿಬಂದಿದೆ. ಅದುವರೆಗೆ ಹಿತ್ತಲ ಗಿಡ ಮದ್ದಲ್ಲ ಎಂದು ನಂಬಿ ಕುಳಿತಿದ್ದ ದೇಶೀಯರಿಗೂ ಒಂದು ರೀತಿಯಲ್ಲಿ ಅರಿವು ಬರತೊಡಗಿದೆ. ಪರಿಣಾಮವೋ ಏನೋ ಎಂಬಂತೆ ಯೋಗಿಕ್‌ ಸೈನ್ಸ್‌ ಪದವಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚತೊಡಗಿದೆ. ಇನ್ನೊಂದೆಡೆ ಯೋಗ ಥೆರಪಿ ಕ್ಲಿನಿಕ್‌ಗಳ ಸಂಖ್ಯೆಯೂ ಹೆಚ್ಚಾಗಿದೆ.

ಯಾವೆಲ್ಲ ರೋಗ ದೂರ ಮಾಡಬಹುದು?
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಯಿಂದ ಹಲವು ಕಾಯಿಲೆಗಳನ್ನು ದೂರ ಮಾಡಬಹುದು. ಇದರಲ್ಲಿ ಪ್ರಮುಖವಾಗಿ ಚರ್ಮದ ಅಲರ್ಜಿ ರೋಗಗಳು (ಮೊಡ ವೆ, ಕಪ್ಪು ಕಲೆ), ಅಸ್ತಮಾ (ಅಲರ್ಜಿ ಮತ್ತು ಶ್ವಾಸಕೋಶದ ಸಮಸ್ಯೆ), ರಕ್ತಹೀನತೆ, ಆತಂಕ, ಖನ್ನತೆ, ಹೊಟ್ಟೆಯುಬ್ಬರ, ಬೊಜ್ಜು (ಸ್ಥೂಲಕಾಯತೆ), ಅಧಿಕ ರಕ್ತದೊತ್ತಡ, ಜಠರದ ಉರಿತ, ಮಧುಮೇಹ, ಪಾರ್ಶ್ವವಾಯು, ಸೋರಿಯಾಸಿಸ್‌, ಅಸ್ಥಿ ಸಂಧಿವಾತ, ಸಂಧಿವಾತ, ಗರ್ಭದ ಸ್ಪಾಂಡಿಲೋಸಿಸ್‌, ಮಲಬದ್ಧತೆ, ಚರ್ಮದ ಉರಿಯೂತ, ಕೀಲೂರ, ಅಧಿಕ ಆಮ್ಲಿàಯತೆ, ಸೊಂಟನೋವು, ನಿದ್ರಾಹೀನತೆ, ಬೆನ್ನು ನೋವು, ಪಿಸಿಒಡಿ, ಮುಟ್ಟಿನ ತೊಂದರೆ, ಬಂಜೆತನ, ಮೈಗ್ರೇನ್‌ ತಲೆನೋವು, ಉಬ್ಬಿರುವ ರಕ್ತನಾಳಗಳ ಸಮಸ್ಯೆಯನ್ನು ದೂರ ಮಾಡಬಹುದು ಎನ್ನುತ್ತಾರೆ ಪರಿಣತ ವೈದ್ಯರು.

ಲಭ್ಯವಿರುವ ಚಿಕಿತ್ಸೆಗಳು
ಯೋಗದ ಆಸನ, ಪ್ರಾಣಾಯಾಮ, ಕ್ರಿಯಾ, ಧ್ಯಾನದ ಮೂಲಕ ಹೆಚ್ಚಿನ ಚಿಕಿತ್ಸೆಗಳು ಲಭ್ಯ. ಪ್ರಕೃತಿ ಚಿಕಿತ್ಸಾ ವಿಧಾನದಿಂದ ಉಗಿ ಸ್ನಾನ, ಮಸಾಜ್‌ (ಪೂರ್ಣ ದೇಹ ಮಸಾಜ್‌, ಆಂಶಿಕ ಮಸಾಜ್‌, ಹೊಳಪಿಗೆ ಉಪ್ಪು ಮಸಾಜ್‌ ಮತ್ತು ಪುಡಿ ಮಸಾಜ್‌), ಮಣ್ಣಿನ ಲೇಪ, ಕಟಿ ಸ್ನಾನ, ಅಕ್ಯುಂಪಕ್ಚರ್‌- ಕಪ್ಪಿಂಗ್‌, ಕಾಲು ಸ್ನಾನ, ಬಿಸಿ ಮತ್ತು ಶೀತ ಶಾಖ, ಎದೆ ಪಟ್ಟಿ, ಮಂಡಿ ಪಟ್ಟಿ, ಗಂಟಲು ಪಟ್ಟಿ, ಎನಿಮಾ, ಮುಖಕ್ಕೆ ಚಿಕಿತ್ಸೆ, ಗಂಜಿ ಅರಿಸಿನ ಸ್ನಾನ, ಸಾಸಿವೆ ಪಟ್ಟಿ, ಇಲೆಕ್ಟ್ರೋ ಥೆರಪಿ.

ಯೋಗ ಚಿಕಿತ್ಸೆಗೆ ಹೆಚ್ಚಾಗುತ್ತಿದೆ ಒಲವು ಆರೋಗ್ಯದ ಸುಧಾರಣೆಯಿಂದ ಹಿಡಿದು ಮೋಕ್ಷವನ್ನು ಸಾಧಿಸುವ ವಿವಿಧ ಉದ್ದೇಶಗಳವರೆಗೆ ಯೋಗವನ್ನು ಅಭ್ಯಾಸ ಮಾಡುತ್ತಾರೆ. ಬದುಕಿನಲ್ಲಿ ಎದುರಾಗುವ ಎಲ್ಲ ಕಷ್ಟ- ನಷ್ಟಗಳಿಗೆ, ನೋವುಗಳಿಗೆ, ದುಗುಡ ದುಮ್ಮಾನಗಳಿಗೆ ಈ ಸೃಷ್ಟಿಯಲ್ಲಿ ಸಿಗುವ ಏಕೈಕ ಔಷಧವೆಂದರೆ ಯೋಗ. ಆದ್ದರಿಂದ ಇತ್ತೀಚೆಗೆ ಯೋಗ ಚಿಕಿತ್ಸೆಯ ಕಡೆಗೆ ಹೆಚ್ಚಿನ ಜನರು ಒಲವು
ತೋರಿಸುತ್ತಾರೆ.
– ಡಾ| ಗೌರಿ ಶ್ಯಾಮ, ಸ್ವಾಸ್ಥ್ಯ ನೇಚರ್‌ ಕ್ಯೂರ್‌, ಯೋಗ ಮತ್ತು ನ್ಯಾಚುರೋಪತಿ ಸೆಂಟರ್‌, ಬೊಳುವಾರು

 ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next