Advertisement
ಪ್ರಾಚೀನ ಕಾಲದಲ್ಲಿ ಯೋಗಿಗಳು ನೂರಾರು ವರ್ಷ ಆರೋಗ್ಯವಾಗಿ ಬದುಕಿದ್ದರಂತೆ. ಅದಕ್ಕೆ ಕಾರಣ ಯೋಗ, ಧ್ಯಾನ, ಮುದ್ರೆ, ಹಿತಮಿತ ಆಹಾರ ಸೇವನೆ, ಗುಣ-ನಡತೆ ಎಂಬುದನ್ನು ಕೇಳಿದ್ದೇವೆ. ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳು ಕಲಬೆರಕೆಯಿಂದ ಕೂಡಿದ್ದು, ಇವುಗಳನ್ನು ಸೇವಿಸುವುದರಿಂದ ಹಲವಾರು ಕಾಯಿಲೆಗಳು ಬರಲು ಕಾರಣವಾಗುತ್ತಿವೆ. ನಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡರೆ ಮಾತ್ರ ಕಾಯಿಲೆಗಳಿಂದ ಮುಕ್ತರಾಗಿ ಆರೋಗ್ಯಕರವಾಗಿರಲು ಸಾಧ್ಯ.
Related Articles
Advertisement
ಈ ಅಭ್ಯಾಸಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಕಾಯಿಲೆಗಳನ್ನು ತಡೆಗಟ್ಟಲು, ರೋಗ ನಿರೋಧಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದರ ಜೊತೆಗೆ ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣ ಕ್ರಿಯೆ, ಕಾಲು ಊದಿಕೊಳ್ಳುವುದನ್ನು ತಡೆಯುತ್ತದೆ. ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮೆದುಳಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಯಾವುದೇ ರೀತಿಯ ವ್ಯಾಯಾಮವನ್ನು ಮನಸ್ಸಿಟ್ಟು ಶ್ರದ್ಧೆಯಿಂದ ಸರಿಯಾಗಿ ಮಾಡಿದರೆ ಅದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು.
ಆರೋಗ್ಯ ಎಂದರೆ ಬರೀ ದೈಹಿಕ ಆರೋಗ್ಯವಂತರಾಗಿರುವುದಲ್ಲ. ಅದರ ಬದಲಾಗಿ ಮಾನಸ್ಸು ಹಾಗೂ ಭಾವನೆಗಳನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ಕೂಡಾ ಮುಖ್ಯ. ನಿಮ್ಮ ಮೆದುಳನ್ನು ಚುರುಕಾಗಿಸುವುದಲ್ಲೂ ಯೋಗ ಸಹಕರಿಸುತ್ತದೆ. ಯೋಗ ಮಾತ್ರವಲ್ಲದೇ ಧ್ಯಾನ, ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಮುಖ್ಯವಾಗಿ ಕುಳಿತು ಕೆಲಸ ಮಾಡುವವರು ಮತ್ತು ಲಾಂಗ್ ಡ್ರೈವ್ ಹೋಗುವವರು ಪ್ರತಿದಿನ ಯೋಗ ಮಾಡಬೇಕು. ಇದರಿಂದ ಬೆನ್ನು ನೋವು, ಮೂಳೆಯ ಸೆಳೆತ ನಿವಾರಿಸಿ ಸಮತೋಲನವನ್ನು ಕಾಪಾಡಿಕೊಂಡು ಹಿಡಿತದಲ್ಲಿರಬಹುದು. ಧೀರ್ಘ ಉಸಿರಾಟದ ಯೋಗ ವಿಶ್ರಾಂತಿಯನ್ನು ನೀಡಿ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಯೋಗದ ಜತೆ ಪೌಷ್ಟಿಕ ಆಹಾರ ಸೇವನೆಯು ಅತೀ ಅಗತ್ಯ. ಪೌಷ್ಟಿಕಾಂಶ ಇರುವ ಆಹಾರ ಸೇವನೆ ದಿನನಿತ್ಯ ಸೇವಿಸುವುದರಿಂದಲೂ ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಆಗಿರುವ ಜಂಕ್ ಫುಡ್ ಗಳೆ ಜಾಸ್ತಿ. ಇಂದಿನ ಒತ್ತಡದ ಜೀವನದಲ್ಲಿ ಹೆಚ್ಚಿನ ಜನರೆಲ್ಲರೂ ಈ ಜಂಕ್ ಆಹಾರಗಳಿಗೆ ಮೊರೆ ಹೋಗಿದ್ದಾರೆ. ಇದು ಕೂಡಾ ನಮ್ಮ ಆರೋಗ್ಯ ಹಾನಿ ಮಾಡುತ್ತದೆ.
ಯೋಗಾಭ್ಯಾಸ ಮಾಡಲು ನುರಿತ ಯೋಗಪಟು ಅಥವಾ ಯೋಗ ಗುರುಗಳ ಮೂಲಕ ಅಭ್ಯಸಿಸಬೇಕು. ನಿರ್ದೇಶನ ರಹಿತ ಮತ್ತು ಆಸನಗಳ ಕುರಿತ ಸೂಕ್ತ ಮಾಹಿತಿ ಇಲ್ಲದೆ ಅಭ್ಯಸಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ರತಿನಿತ್ಯ ಒಂದು ಸರಿಯಾದ ಸಮಯವನ್ನು ನಿಗದಿಪಡಿಸಬೇಕು. ಪ್ರಶಾಂತ ವಾತಾವರಣದಲ್ಲಿ ಆಸನ, ಪ್ರಾಣಾಯಾಮ, ಧ್ಯಾನ ಮಾಡಬಹುದು. ‘ಧ್ಯಾನವೊಂದೇ ಮದ್ದು, ಯೋಗವೊಂದೇ ಚಿಕಿತ್ಸೆ’ ಎಂಬಂತೆ ನಾವೆಲ್ಲರೂ ಅನುಕೂಲವಿದ್ದಂತೆ ಅನುಸರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳೋಣ ಎಂಬುದು ನನ್ನ ಆಶಯ.
-ಕಾವ್ಯಶ್ರೀ