Advertisement

ಯೋಗ –ಪ್ರಕೃತಿ ಚಿಕಿತ್ಸೆ ಕೇಂದ್ರ: ಆಗಸ್ಟ್‌ನಲ್ಲಿ  ಶಿಲಾನ್ಯಾಸ​​​​​​

06:05 AM Jun 29, 2018 | Team Udayavani |

ಕಾಸರಗೋಡು: ಕೇಂದ್ರ ಆಯುಷ್‌ ಸಚಿವಾಲಯ ಕಾಸರಗೋಡು ಜಿಲ್ಲೆಯ ಕಿನಾನೂರು – ಕರಿಂದಳಂನಲ್ಲಿ ಸ್ಥಾಪಿಸುವ ಸೆಂಟ್ರಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಆಫ್‌ ಯೋಗ ಆ್ಯಂಡ್‌ ನ್ಯಾಚುರೋಪತಿ ಸೆಂಟರ್‌ಗೆ ಕೇರಳ ಸರಕಾರ 15 ಎಕರೆ ಸ್ಥಳ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಈ ಕೇಂದ್ರದ ಶಿಲಾನ್ಯಾಸ ಆಗಸ್ಟ್‌ ತಿಂಗಳಲ್ಲಿ ನಡೆಯಲಿದೆ.

Advertisement

ಕೂತುಪರಂಬದಲ್ಲಿ ಕೇಂದ್ರ ಸರಕಾರದ ನೆರವಿನಿಂದ ಸ್ಥಾಪಿಸುವ ಯುನಾನಿ ಇನ್‌ಸ್ಟಿಟ್ಯೂಟ್‌ನಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ. ಈ ಯೋಜನೆಗೆ ಇನ್ನೂ ಸ್ಥಳ ಕಂಡುಕೊಳ್ಳಬೇಕಾಗಿದೆ.

ವರ್ಷಗಳ ಹಿಂದೆಯೇ ಯೋಗ-ಪ್ರಕೃತಿ ಚಿಕಿತ್ಸೆ ಕೇಂದ್ರ ಸ್ಥಾಪನೆಯ ಯೋಜನೆಯ ಬಗ್ಗೆ ಕೇಂದ್ರ ಸರಕಾರ ಪ್ರಸ್ತಾವಿಸಿತ್ತು. ಆದರೆ ಕೇರಳ ಸರಕಾರ ಸ್ಥಳ ನೀಡಲು ವಿಳಂಬ ನೀತಿ ತೋರಿದ್ದರಿಂದ ಈ ಯೋಜನೆ ವಿಳಂಬವಾಗಿದೆ. ಯೋಗ ಆ್ಯಂಡ್‌ ನ್ಯಾಚುರೋಪತಿ ಪೋಸ್ಟ್‌ ಗ್ರಾಜ್ಯುವೇಟ್‌ ಇನ್‌ಸ್ಟಿಟ್ಯೂಟ್‌ ಆರಂಭಿಸಲು ಕೇಂದ್ರ ಆಯುಷ್‌ ಇಲಾಖೆಗೆ ಅಡ್ವಾನ್ಸ್‌ ಪೊಷೆಶನ್‌ ನೀಡಲು 2017ರ ಡಿಸೆಂಬರ್‌ 29ರಂದು ಆದೇಶ ಹೊರಡಿಸಿತ್ತು. ಆದರೆ ಲೀಸ್‌ (ಗುತ್ತಿಗೆ) ವ್ಯವಸ್ಥೆಯಲ್ಲಿ ಸ್ಥಳ ಲಭಿಸಿದರೆ ಮಾತ್ರವೇ ಇನ್‌ಸ್ಟಿಟ್ಯೂಟ್‌ ಸ್ಥಾಪಿಸಲು ಸಾಧ್ಯ ಎಂದು ಆಯುಷ್‌ ಕೇರಳ ಸರಕಾರಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸರಕಾರದ ಸಚಿವ ಸಂಪುಟ ಕರಿಂದಳಂನಲ್ಲಿ ವಾರ್ಷಿಕ 100 ರೂ. ಯಂತೆ 30 ವರ್ಷಕ್ಕೆ 15 ಎಕರೆ ಸ್ಥಳವನ್ನು ಮಂಜೂರು ಮಾಡಿದೆ.

ಕಾಸರಗೋಡಿನ ಅಭಿವೃದ್ಧಿಗೆ ಕೇಂದ್ರ ಸರಕಾರ ನಾಂದಿ – ಬಿಜೆಪಿ : ಕಾಸರಗೋಡು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚಾಲನೆ ನೀಡಿದೆ ಎಂದೂ ಆದರೆ ಅವುಗಳನ್ನು ಜಾರಿಗೊಳಿಸುವ ವಿಷಯದಲ್ಲಿ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಗಾಲು ಮಾಡಲು ಸಿಪಿಎಂ ನೇತೃತ್ವ ಯತ್ನಿಸುತ್ತಿದೆ ಎಂದೂ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಯವರ ಮಾದರಿ ಗ್ರಾಮ ಯೋಜನೆಯಾದ ಸಂಸದ್‌ ಆದರ್ಶ ಗ್ರಾಮ ಯೋಜನೆಯಲ್ಲೂ ಒಳಪಡಿಸಿ ಕೇಂದ್ರ ಆಯುಷ್‌ ಸಚಿವಾಲಯ ಕಿನಾನೂರು ಕರಿಂದಳಂ ಪಂಚಾಯತ್‌ನಲ್ಲಿ ಅತ್ಯಾಧುನಿಕ ಯೋಗ ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭಿಸಲು ತೀರ್ಮಾನಿಸಿದೆ. ಆದರೆ ಅದಕ್ಕೆ ಜಮೀನು ನೀಡುವಲ್ಲಿ ರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸಿದೆ ಎಂದು ಅವರು ಆರೋಪಿಸಿದರು. 

Advertisement

ಹಿಂದುಳಿದ ಜಿಲ್ಲೆಯಾದ ಕಾಸರಗೋಡಿನ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರಕಾರ ಅಗತ್ಯದ ಎಲ್ಲ ನೆರವನ್ನೂ ನೀಡುತ್ತಿದೆ ಎಂದು ಶ್ರೀಕಾಂತ್‌ ಹೇಳಿದರು. ಬದಿಯಡ್ಕದಲ್ಲಿ ನಬಾರ್ಡ್‌ನ 68 ಕೋಟಿ ರೂ. ಆರ್ಥಿಕ ಸಹಾಯದೊಂದಿಗೆ ವೈದ್ಯಕೀಯ ಕಾಲೇಜು, ರಾಜ್ಯಕ್ಕೆ ಮಾದರಿಯಾಗಬೇಕಾಗಿದ್ದ 900 ಕೋಟಿ ರೂ. ವೆಚ್ಚದ ಸೌರ ಯೋಜನೆ, ಉದುಮ ಜವುಳಿ ಗಿರಣಿ, ನಾಯ್ಕಪಿನ ಮಿಲ್ಮಾ ಹಾಲು ದಾಸ್ತಾನು ಕೇಂದ್ರ ಇತ್ಯಾದಿ ಹಲವು ಯೋಜನೆಗಳನ್ನು ಜಿಲ್ಲೆಗೆ ಮಂಜೂರು ಮಾಡಲಾಗಿದ್ದರೂ ಅವುಗಳು ಇನ್ನೂ ಕಾರ್ಯಾರಂಭಗೊಳ್ಳದೆ ನನೆಗುದಿಗೆ ಬಿದ್ದಿವೆ. ಅದನ್ನು ಕಂಡೂ ಕಾಣದಂತೆ ನಟಿಸುತ್ತಿರುವ ಸಂಸದರು ಈಗ ಅಂತ್ಯೋದಯ ಎಕ್ಸ್‌ ಪ್ರಸ್‌ ರೈಲುಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡಬೇಕೆಂಬ ಬೇಡಿಕೆಯೊಂದಿಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಎಂಬ ನಾಟಕ ಆಡಲು ಹೊರಟಿದ್ದಾರೆಂದೂ ಶ್ರೀಕಾಂತ್‌ ಆರೋಪಿಸಿದ್ದಾರೆ.

ದೇಶದಲ್ಲಿ ಐದನೇ ಆಸ್ಪತ್ರೆ
ದೇಶದಲ್ಲಿ ಆಯುಷ್‌ ಇಲಾಖೆ ಆರಂಭಿಸುವ ಐದನೇ ಆಸ್ಪತ್ರೆ ಇದಾಗಿದೆ.100 ಹಾಸಿಗೆಗಳಿರುವ ಆಸ್ಪತ್ರೆಯನ್ನು ಮುಂದಿನ  ದಿನಗಳಲ್ಲಿ 200 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಾಗಲಿದೆ.ಈ ಕೇಂದ್ರ ಆರಂಭಿಸಲು ಕೇಂದ್ರ ಆಯುಷ್‌ ಇಲಾಖೆ 15 ಎಕರೆ ಸ್ಥಳಕ್ಕೆ ಬೇಡಿಕೆ ಇರಿಸಿತ್ತು.

100 ಕೋಟಿ ರೂ. ವೆಚ್ಚ
ಸಂಪೂರ್ಣವಾಗಿ ಕೇಂದ್ರ ಸರಕಾರವೇ ಯೋಗ-ಪ್ರಕೃತಿ ಚಿಕಿತ್ಸೆ ಕೇಂದ್ರ ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು 100 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಇದೇ ಸಂದರ್ಭದಲ್ಲಿ ಕೂತುಪರಂಬದಲ್ಲಿ ಕೇಂದ್ರ ಸರಕಾರದ ನೆರವಿನೊಂದಿಗೆ ಯುನಾನಿ ಇನ್‌ಸ್ಟಿಟ್ಯೂಟ್‌ ಸ್ಥಾಪಿಸಲಾಗುವುದು. ಯೋಗ-ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಅಗತ್ಯದ ಹಣವನ್ನು ಕೇಂದ್ರ ಸರಕಾರ ಕಂತುಗಳಲ್ಲಿ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next