Advertisement

ಸ್ವಾಸ್ಥ್ಯಕ್ಕಾಗಿ ಯೋಗ : ಮನ,ದೇಹ, ಆತ್ಮಗಳ ಶುದ್ಧೀಕರಣ ಪ್ರಯತ್ನ

03:13 AM Jun 21, 2021 | Team Udayavani |

ಯೋಗವು ಸಾವಿರಾರು ವರ್ಷಗಳ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜೀವನಕ್ರಮವಾಗಿದೆ. ಯೋಗವು ದೇಹ, ಚಿಂತನೆ, ಜ್ಞಾನ, ಸಂಯಮ ಮತ್ತು ತ್ಯಾಗ ಸೇವೆಗಳ ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಯೋಗ ಶಾರೀರಿಕ ಮಾತ್ರವಲ್ಲದೆ ನಮ್ಮ ಜೀವನ ಶೈಲಿ ಹಾಗೂ ಪ್ರಜ್ಞೆ ಮೂಡಿಸುವ ಮೂಲಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Advertisement

ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ “ಯುಜ್‌’ ಎನ್ನುವುದರಿಂದ ಬಂದಿದ್ದು. ಕೂಡಿಸು ಎನ್ನುವ ಅರ್ಥದಲ್ಲಿ ಚಿತ್ತವನ್ನು ನಿರ್ದೇಶಿಸುತ್ತದೆ ಎಂಬುದು ಪತಂಜಲಿ ಮಹರ್ಷಿಗಳ ಚಿತ್ತ ವೃತ್ತಿ ನಿರೋಧ ಎನ್ನುವ ಸೂತ್ರದಲ್ಲಿ ಹೇಳಲಾಗಿದೆ. ಮನಸ್ಸಿನ ವೃತ್ತಿಗಳನ್ನು ಸಂಪೂರ್ಣ ತಡೆಹಿಡಿದು ನಿಲ್ಲಿಸಿ ಶಾಂತತೆ ಹಾಗೂ ಮಹಾ ಮೌನವನ್ನು, ಕೈವಲ್ಯವನ್ನು ಸಾಧಿಸುವುದೇ ಯೋಗ.

ಸ್ವಾಮಿ ವಿವೇಕಾನಂದರು ಹೇಳುವಂತೆ “ತನ್ನ ಸಂಪೂರ್ಣ ವಿಕಸನವನ್ನು ಒಂದು ಜನ್ಮದಲ್ಲಿ ಅಥವಾ ಕೆಲವೇ ತಿಂಗಳುಗಳ ಅಥವಾ ಕೆಲವೇ ಘಂಟೆಗಳಲ್ಲಿ ಸಾಧಿಸಬಹುದಾದ ಸಾಧನವೇ ಯೋಗ’.
ಯೋಗಾಭ್ಯಾಸವನ್ನು ವಿಶ್ವಮಟ್ಟದಲ್ಲಿ ಎಲ್ಲರೂ ಅನುಸರಿಸುವಂತಿರಬೇಕು ಎಂಬ ನಿಟ್ಟಿನಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಅಂತಾರಾಷ್ಟ್ರೀಯ ಯೋಗ ದಿನ ಜೂ. 21 ಒಂದು ಪ್ರಮುಖ ದಿನವಾಗಿದ್ದು ಯೋಗಾಸನ ಅನುಸರಿಸುವ ಮೂಲಕ ಇಡೀ ವಿಶ್ವವೇ ಉತ್ತಮ ಆರೋಗ್ಯ ಹೊಂದುವಂತಾಗಬೇಕು.

ಪ್ರತೀ ವರ್ಷ ಜೂ.21ರಂದು ವಿಶ್ವಮಟ್ಟದಲ್ಲಿ ಎಲ್ಲರೂ ಏಕ ಸಮಯದಲ್ಲಿ ವಿಶೇಷವಾಗಿ ರಚಿಸಲ್ಪಟ್ಟಿರುವ ಯೋಗ ಪ್ರಣಾಲಿಯನ್ನು ಅನುಸರಿಸುವುದು ಸಾಂಕೇತಿಕವಾಗಿದ್ದು ಯೋಗದ ಅಭ್ಯಾಸವನ್ನು ಸತತವಾಗಿ ಮುಂದುವರಿಸಿ ನಿತ್ಯದ ಚಟುವಟಿಕೆಯಾಗಿಸುವ ಮೂಲಕ ದೇಹದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ, ರಕ್ತ ಪರಿಚಲನೆ ಹೆಚ್ಚಿಸುವುದು, ಸ್ನಾಯುಗಳಿಗೆ ಸೆಳೆತ ನೀಡುವ ಮೂಲಕ ಉತ್ತಮ ಆರೋಗ್ಯ ಹೊಂದುವಂತಾಗಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತಿದೆ.

Advertisement

ಕೊರೊನಾ ಮಹಾಮಾರಿಯ ಕಾರಣದಿಂದಾಗಿ ಸುರಕ್ಷತೆಯ ನಿಟ್ಟಿನಲ್ಲಿ ಎಲ್ಲರೂ ಮನೆಯಲ್ಲಿ ಕುಳಿತು, ಮನೆಯವರೊಂದಿಗೆ ಯೋಗಾಭ್ಯಾಸವನ್ನು ಮಾಡುವುದು ಈ ವರ್ಷದ ವಿಷಯವಾಗಿದೆ. ಇದರಿಂದ ಮನೆಯಲ್ಲಿರುವ ಎಲ್ಲರಲ್ಲೂ ಒಗ್ಗೂಡಿಕೆ ಬಂದು, ಪ್ರೇಮ, ಸೌಹಾರ್ದದಗಳು ವ್ಯಕ್ತಗೊಂಡು ಆರೋಗ್ಯಭ್ಯಾಸವನ್ನು ತಂದುಕೊಟ್ಟು ಮುಂದಿನ ದಿನಗಳಲ್ಲಿ ಕೊರೊನಾ ಮಾರಿಯ ಕ್ಲಿಷ್ಟ ಪರಿಸ್ಥಿತಿಯಿಂದ ದೂರವಾಗುವುದು ಸ್ಪಷ್ಟವಾಗಿದೆ.

ಸರ್ವೇ ಭವಂತು ಸುಖೀನಃ
ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾಕಶ್ಚಿತ್‌ ದುಃಖ ಭಾಗ½ವೇತ್‌
ಓಂ ಶಾಂತಿಃ ಶಾಂತಿಃ ಶಾಂತಿಃ

– ಡಾ| ಎಚ್‌ ಆರ್‌. ನಾಗೇಂದ್ರ, ಕುಲಪತಿಗಳು, ಎಸ್‌- ವ್ಯಾಸ ಯೋಗ ವಿಶ್ವ ವಿದ್ಯಾನಿಲಯ, ಜಿಗಣಿ, ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next