ವರ್ಕ್ ಫ್ರಂ ಹೋಮ್ ಮಾಡುವವರು, ಒಂದೇ ಸ್ಥಳದಲ್ಲಿ ಹೆಚ್ಚಿನ ಸಮಯ ಕೂತು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಭುಜ, ಕಾಲುಗಳ ನೋವು ಬರುವುದು ಸರ್ವೇಸಾಮಾನ್ಯ. ಕೆಲಸ ಮಾಡುವ ಸ್ಥಳ, ಕಂಪ್ಯೂಟರ್, ಲ್ಯಾಪ್‌ಟಾಪ್‌ಗೆ ಇರಬೇಕಾದ ಅಂತರವನ್ನು ಮನೆಯಲ್ಲಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಆಗದು. ಏಕೆಂದರೆ, ಒಬ್ಬೊಬ್ಬರ ಮನೆಯ ಗಾತ್ರ, ಪರಿಸ್ಥಿತಿ, ಒಂದೊಂದು ರೀತಿ. ಮುಖ್ಯವಾಗಿ, ಆಫೀಸಿನ ಮತ್ತು ಮನೆಯ ಪ್ರತ್ಯಕ್ಷ- ಪರೋಕ್ಷ ಒತ್ತಡಗಳು ಬೇರೆಬೇರೆ ಇರುತ್ತವೆ.
ಈ ಒತ್ತಡಗಳಿಂದ ಪಾರಾಗಬೇಕೆಂದರೆ, ಯೋಗ ಮತ್ತು ಪ್ರಾಣಾಯಾಮದ ಮೊರೆ ಹೋಗಬೇಕು. ಯೋಗದಲ್ಲಿ ಮುಖ್ಯವಾಗಿ, ದ್ವಿಪಾದ ಪ್ರಸರಣಾಸನ, ಭುಜಂಗಾಸನ, ಚದುರಂಗ ದಂಡಾಸನ, ಶಶಾಂಕಾಸನಗಳನ್ನು ಮಾಡುತ್ತಾ ಬಂದರೆ, ಮಣಿಕಟ್ಟು, ಭುಜಗಳು, ಸೊಂಟದ ಭಾಗ, ಬೆನ್ನ ಭಾಗ, ಹಿಮ್ಮಡಿ ಮತ್ತು ಮೊಣಕೈಗಳಿಗೆ ಯಥೇತ್ಛ ವ್ಯಾಯಾಮ ಆಗುತ್ತದೆ. ರಕ್ತಸಂಚಾರ ಸರಾಗವಾಗಿ ಆದರೆ, ಕೈ-ಕಾಲು ನೋವಾಗಲಿ,
ಸಡನ್ನಾಗಿ ಎಲ್ಲೆಂದರಲ್ಲಿ ಹಿಡಿದುಕೊಳ್ಳುವುದಾಗಲಿ ಆಗುವುದಿಲ್ಲ. ಮಂಡಿಗಳನ್ನು ನೆಲದ ಮೇಲೆ ಚಾಚಿ, ಮೊಣಕೈಗಳನ್ನು ನೇರ ಮಾಡಿ, ಕಾಲಿನ ಸ್ನಾಯುಗಳನ್ನು ಬಿಗಿಹಿಡಿಯುವ ಭುಜಂಗಾಸನವು ಸೊಂಟ, ಕಾಲಿನ ಸ್ನಾಯುಗಳಿಗೆ ಬಲ ತಂದುಕೊಡುತ್ತದೆ. ವಜ್ರಾಸನದಲ್ಲಿ ಕುಳಿತು, ಪೃಷ್ಠಗಳನ್ನು ಹಿಮ್ಮಡಿಯ ಮೇಲೆ ಕೂರಿಸಿ, ಮುಂದಕ್ಕೆ ಬಾಗಿ, ಕೈಗಳನ್ನು ನೇರವಾಗಿ ಬಾಗಿಸಿ, ಹಣೆಯನ್ನು ನೆಲದ ಮೇಲೆ ಮುಟ್ಟಿಸುವ ಶಶಾಂಕಾಸನ ಕೂಡ ಬೆನ್ನು, ಸೊಂಟದ ನೋವನ್ನು ಕಡಿಮೆ ಮಾಡುತ್ತದೆ.
ಶಶಾಂಕಾಸನ ಮಾಡುವಾಗ, ಹೊಟ್ಟೆಯ ಒಳಗಿರುವ ಗಾಳಿಯನ್ನು ಸಂಪೂರ್ಣ ಹೊರ ಹಾಕಿ. ಮತ್ತೆ ಸ್ವಸ್ಥಾನಕ್ಕೆ ಬರುವಾಗ ಉಸಿರನ್ನು ಎಳೆದುಕೊಳ್ಳುತ್ತಾ ಹೋಗಿ. ಪ್ರತಿ ಬಾರಿಯೂ ಹೀಗೆ ಮಾಡುವುದರಿಂದ, ಹಲವು ಬಗೆಯ ಉಪಯೋಗಗಳಿವೆ. ಈ ಯೋಗ ಮಾಡುವಾಗ ಕಣ್ಣು ಮುಚ್ಚಿಕೊಳ್ಳಿ. ಹಾಗೆ ಮಾಡಿದರೆ, ಒಂದೇ ಕಡೆ ಗಮನ ಕೇಂದ್ರೀಕರಿಸಬಹುದು. ಆಗ, ಮನಸ್ಸು ಕೂಡ ಪ್ರಫುಲ್ಲವಾಗುತ್ತದೆ.