ಕಲಬುರಗಿ: ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿ ಆರೋಗ್ಯವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆ ಕಾಪಾಡಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಜಿಮ್ಸ್ ನಿರ್ದೇಶಕಿ ಡಾ| ಕವಿತಾ ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಮ್ಸ್ ಕಾಲೇಜಿನಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಶಿಕ್ಷಕ ಲಿಂಗರಾಜ ಮಾತನಾಡಿ, 11 ದಿನಗಳ ಯೋಗ ತರಬೇತಿ ಪೂರ್ಣಗೊಳಿಸಿದ ಎಲ್ಲ ವೈದ್ಯ ವಿಧ್ಯಾರ್ಥಿಗಳು ಮುಂದೆಯೂ ಪ್ರತಿದಿನ ನಿರಂತರ ಯೋಗಾಭ್ಯಾಸ ಮಾಡುವುದರ ಮೂಲಕ ಉತ್ತಮ ಆರೋಗ್ಯ ಹೊಂದಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜೂನ್ 11ರಿಂದ 21ರ ವರೆಗೆ ಯೋಗ ಶಿಕ್ಷಕರಾದ ಲಿಂಗರಾಜ ಮತ್ತು ಸುಪ್ರಿಯಾ ಅವರಿಂದ ಯೋಗ ತರಬೇತಿ ಪಡೆದ ಪ್ರಥಮ ವರ್ಷದ 150 ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಸಂಸ್ಥೆಯ ಡಾ| ಫರ್ಖಾನಾ ಖುಷನೂದ್, ಡಾ| ರಾಜಕುಮಾರ ಕೆ.ಆರ್, ಡಾ| ಮುರಳೀಧರ ಶೇಪೂರ, ಡಾ| ಗಿರೀಶ ದೇಸಾಯಿ, ರಾಚಣ್ಣ ಅವರನ್ನು ಸಹ ಅಭಿನಂದಿಸಲಾಯಿತು. ಜಿಮ್ಸ್ ಸಂಸ್ಥೆ ಆವರಣದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರು, ವೈದ್ಯ ವಿಧ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಇತರೆ ಸಿಬ್ಬಂದಿ ಸೇರಿ ಸುಮಾರು 500ಜನ ಭಾಗವಹಿಸಿದ್ದರು. ವಿಶ್ವ ಯೋಗ ದಿನಾಚರಣೆ ಸವಿನೆನಪಿಗೆ ಮತ್ತು ಸಂಸ್ಥೆಯ ಆವರಣ ಹಸಿರುಮಯಗೊಳಿಸಲು ನಿರ್ದೇಶಕಿ ಡಾ| ಕವಿತಾ ಪಾಟೀಲ ಸಸಿ ನೆಟ್ಟು ನೀರುಣಿಸಿದರು.