Advertisement

ಯೋಗದಿಂದಷ್ಟೇ ಆರೋಗ್ಯವಂತ ಸಮಾಜ ನಿರ್ಮಾಣ

05:51 PM Jun 13, 2022 | Team Udayavani |

ದಾವಣಗೆರೆ: ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ಯೋಗದಿಂದ ಮಾತ್ರ ನನಸಾಗಲು ಸಾಧ್ಯ ಎಂದು ಪ್ರಕೃತಿ ಚಿಕಿತ್ಸಾ ತಜ್ಞ ಡಾ| ಬಿ.ಆರ್‌. ಗಂಗಾಧರ ವರ್ಮ ಅಭಿಪ್ರಾಯಪಟ್ಟರು.

Advertisement

ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಶ್ರೀಅಮೃತೇಶ್ವರಿ ಅಷ್ಟಾಂಗ ಯೋಗ ಕೇಂದ್ರ, ಶ್ರೀ ಶಿರಡಿ ಸಾಯಿ ಯೋಗ ಕೇಂದ್ರ ಮತ್ತು ಭಾರತ ವಿಕಾಸ ಪರಿಷತ್‌ ಗೌತಮ ಶಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯವಂತರಾದ ಮನುಷ್ಯರೇ ನಿಜವಾದ ಭಾಗ್ಯವಂತರು. ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ಯೋಗದಿಂದ ಮಾತ್ರ ನನಸಾಗಲು ಸಾಧ್ಯ ಎಂದರು.

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಇಲ್ಲ ಎಂಬುದು ಅಕ್ಷರಶಃ ಸತ್ಯ. ಆರೋಗ್ಯವೆಂದರೆ ಕೇವಲ ರೋಗ ರಹಿತ ವಾಗಿರದೆ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುತ್ತದೆ. ಅಂತಹ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಯೋಗದ ಪಾತ್ರ ಅತಿ ಮಹತ್ವದ್ದು ಎಂದು ತಿಳಿಸಿದರು.

ಯೋಗ ಪುರಾತನ ತತ್ವಶಾಸ್ತ್ರ, ಜೀವನ ಶೈಲಿ ಹಾಗೂ ಕಲೆ. ಒಬ್ಬ ಮನುಷ್ಯನ ಸರ್ವೋನ್ನತ ಏಳಿಗೆಗೆ ಯೋಗ ತುಂಬಾ ಸಹಕಾರಿ. ಯೋಗ ಈಗ ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ. ಎಲ್ಲ ಪಂಥದ ಜನರೂ ಒಂದಲ್ಲ ಒಂದು ಕಾರಣಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗ ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವುದೇನೋ ನಿಜ.ಇದೇ ಸಂದರ್ಭದಲ್ಲಿ ಮೂಲ ಅಷ್ಟಾಂಗ ಯೋಗವನ್ನು ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯವಂತರಾಗುವುದು ಮಾತ್ರವಲ್ಲದೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಅಷ್ಟಾಂಗ ಯೋಗವೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳು. ಯಮಗಳ ಅಭ್ಯಾಸವು ಹಿಂಸೆ, ಕಳವು, ಕಾಮಾತುರತೆ, ಅಸತ್ಯ ಮತ್ತು ಪರರಿಂದ ಬಯಸುವುದನ್ನು ದೂರವಿಡುವಂತೆ ಮಾಡುತ್ತದೆ. ಅಲ್ಲದೆ ಮಾನಸಿಕವಾಗಿ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ನಿಯಮಗಳ ಅಭ್ಯಾಸವು ಸಂತೋಷ, ತಪಸ್ಸು, ಆತ್ಮಾವಲೋಕನ ಮತ್ತು ವಾಸ್ತವತೆಗೆ ಶರಣಾಗುವಂತೆ ಮಾಡುವುದರಿಂದ ದೇಹವನ್ನು ಶುಚಿತ್ವದಲ್ಲಿಟ್ಟು ಒಳ್ಳೆಯ ಗುಣಗಳನ್ನು ಮೈಗೂಡಿಸುತ್ತದೆ ಎಂದು ಹೇಳಿದರು.

Advertisement

ಆಸನಗಳ ಅಭ್ಯಾಸವು ದೇಹವನ್ನು ದಂಡಿಸಿ ಮಾಂಸಖಂಡಗಳನ್ನು ಬಲಿಷ್ಠ ಗೊಳಿಸುವುದಲ್ಲದೆ ದೈಹಿಕ-ಮಾನಸಿಕ ಶಾಂತಿಯನ್ನು ಒದಗಿಸುತ್ತದೆ. ಪ್ರಾಣಾಯಾಮದ ಅಭ್ಯಾಸ ಕ್ರಮಬದ್ಧವಾದ ಉಸಿರಾಟದ ಪಕ್ರಿಯೆ. ಶ್ವಾಸಕೋಶಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ದೇಹಕ್ಕೆ ಹೆಚ್ಚು ಆಮ್ಲಜನಕವನ್ನು ಒದಗಿಸುವುದರಿಂದ ದೇಹದ ಉಲ್ಲಾಸಕ್ಕೆ ಕಾರಣವಾಗುತ್ತದೆ.

ಪ್ರತ್ಯಾಹಾರವೆಂದರೆ ದೇಹದ ಇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮವನ್ನು ನಿಗ್ರಹಿಸುವುದು. ಇದರಿಂದ ಮನಸ್ಸಿನ ಚಂಚಲತೆಯನ್ನು ತಡೆಹಿಡಿಯಬಹುದು. ಧಾರಣದ ಅಭ್ಯಾಸವು ಮನುಷ್ಯನ ಏಕಾಗ್ರತೆಯನ್ನು ಹೆಚ್ಚಿಸಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಧ್ಯಾನದ ಅಭ್ಯಾಸವೆಂದರೆ ಮನಸ್ಸನ್ನು ಸಂಪೂರ್ಣವಾಗಿ ಆಲೋಚನೆಗಳಿಂದ ಮುಕ್ತಗೊಳಿಸಿ, ನಮ್ಮನ್ನು ನಾವು ಸಂಪೂರ್ಣವಾಗಿ ಮುಕ್ತಿಯ ಸಾಧನದ ಕಡೆಗೆ ಒಳಪಡಿಸುವುದು. ಸಮಾಧಿ ಎಂದರೆ ಜೀವಾತ್ಮನನ್ನು ಪರಮಾತ್ಮನೊಂದಿಗೆ ಲೀನಗೊಳಿಸುವುದು ಎಂದು ಮಾಹಿತಿ ನೀಡಿದರು.

ಭಾರತ ವಿಕಾಸ ಪರಿಷತ್‌ ಗೌತಮ ಶಾಖೆಯ ಅಧ್ಯಕ್ಷ ಡಾ| ಎಸ್‌. ಪ್ರಸಾದ್‌ ಬಂಗೇರಾ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಆರ್‌. ಮಂಜುನಾಥ್‌, ಡಾ| ವಿಂಧ್ಯ ಗಂಗಾಧರ ವರ್ಮ, ಶ್ರೀ ಅಮೃತೇಶ್ವರಿ ಅಷ್ಟಾಂಗ ಯೋಗ ಕೇಂದ್ರ, ಶ್ರೀ ಶಿರಡಿ ಸಾಯಿ ಯೋಗ ಕೇಂದ್ರದ ಯೋಗ ಗುರುಗಳು ಮತ್ತು 75ಕ್ಕೂ ಅಧಿಕ ಸಾಧಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next