ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಮಂಥನ ಎರಡು ಪುಸ್ತಕಗಳನ್ನು ಆಧ್ಯಾತ್ಮ ಚಿಂತಕ ಸುಚರಿತ ಮಾತಾಜಿ ಹಾಗೂ ಸರ್ಕಾರಿ ಹೈಟೆಕ್ ಪಂಚಕರ್ಮ ಆಸ್ಪತ್ರೆ ಆರ್‌ಎಂಒ ಡಾ.ಶಶಿರೇಖಾ ಲೋಕಾರ್ಪಣೆಗೊಳಿಸಿದರು.
ಮೈಸೂರು ಜಿಲ್ಲಾ ಯೋಗ ನ್ಪೋರ್ಟ್ಸ್ ಫೌಂಡೇಷನ್ ಹಾಗೂ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ಡಾ.ಗಣೇಶ್‌ಕುಮಾರ್ ಯೋಗಮಂಥನ ಭಾಗ-1, ಭಾಗ-2 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಬಳಿಕ ಆಧ್ಯಾತ್ಮ ಚಿಂತಕಿ ಸುಚರಿತ ಮಾತಾಜಿ ಮಾತನಾಡಿದರು.
ಯೋಗ ಸರ್ವ ರೋಗಗಳ ನಿವಾರಕ ರೋಗವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಆರೋಗ್ಯದ ದೃಷ್ಟಿಯಿಂದ ನಾವೆಲ್ಲರೂ ನಿಯಮಿತವಾಗಿ ಯೋಗಾಭ್ಯಾಸ ಮಾಡಬೇಕು ಎಂದು ತಿಳಿಸಿದರು. ಲೇಖಕ ಗಣೇಶ್ ಕುಮಾರ್ ಮಾತನಾಡಿ, ಯೋಗ ಪ್ರಾಚೀನ ವಿಜ್ಞಾನವಾಗಿದ್ದು, ಆಸನಗಳನ್ನು ಮಾಡುವುದಷ್ಟೇ ಯೋಗವಲ್ಲ.
ಅದರ ಇತಿಹಾಸ ಹಾಗೂ ಅಭ್ಯಾಸ ಮಾಡುವ ವಿಧಾನವನ್ನು ಜನರು ತಿಳಿಯಬೇಕಿದೆ. ಅದನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಪುಸ್ತಕಗಳನ್ನು ಬರೆದಿದ್ದೇನೆ. ಇದರಿಂದಾಗಿ ಶಿಕ್ಷಕರಿಗೆ ಬಹಳ ಉಪಯೋಗವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಮ್ಮನ್ನು ಕಾಡುತ್ತಿರುವ ಅನಾರೋಗ್ಯದ ವಿರುದ್ಧ ಹೋರಾಡಲು ನಾವು ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕಿದೆ.
ಇದಕ್ಕೆ ಯೋಗ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಬಳಿಕ ಅಂತಾರಾಷ್ಟ್ರೀಯ ಯೋಗ ಪಟುಗಳಾದ ಸೌರಭ ಅಂಕಿತಾ, ವಂಶಿಕಾ, ಸಾಗರಿ, ವಿಘ್ನೇಶ್, ಧನುಶ್ರೀ, ಮುಕ್ತಾ, ಶೃಜನ್‌ರಾವ್, ವರ್ಷಾ, ಉಷಾ ಯೋಗಾಸನಗಳನ್ನು ಪ್ರದರ್ಶಸಿದರು.