ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿರುವ “ಯೋಗ’ ಇನ್ಮುಂದೆ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿಯೂ ಸಾಕಷ್ಟು ಮಹತ್ವ ಪಡೆದುಕೊಳ್ಳಲಿದೆ. ಯೋಗದಲ್ಲಿ ಜ್ಞಾನ ಹೊಂದಿರುವವರು ಮುಂದಿನ ವರ್ಷದಿಂದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಫಿಸಿಯೋಥೆರಪಿ ಕೋರ್ಸ್‌ಗಳಿಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ವಿಶ್ವವಿದ್ಯಾಲಯಗಳ ಮಾನ್ಯತಾ ಆಯೋಗ (ಯುಜಿಸಿ) ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಶೀಘ್ರದಲ್ಲೇ ಇಂಥದ್ದೊಂದು ಯೋಜನೆಯನ್ನು ಪರಿಚಯಿಸಲಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳ ಲಾಗುವುದು ಎಂದು ಯುಜಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 24ರಂದು ನಡೆದ ಸಭೆಯಲ್ಲಿ ಮಂಡಿಸಲಾಗಿರುವ ಈ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿರುವ ಯುಜಿಸಿ ಶೀಘ್ರದಲ್ಲೇ ಅಂತಿಮ ನಿರ್ಧಾರಕ್ಕೆ ಬರಲು ಚಿಂತನೆ ನಡೆಸಿದೆ. ಯುಜಿಸಿ ಅಧಿಕಾರಿಗಳ ಮಾಹಿತಿಯಂತೆ ಪ್ರಸ್ತಾವನೆಗೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದ್ದು, 2018ಕ್ಕೆಲ್ಲ ಕಾರ್ಯ ರೂಪಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಮಾನವ ಸಂಪನ್ಮೂಲ ಅಭಿ ವೃದ್ಧಿ ಸಚಿವಾಲಯ ಯೋಗಕ್ಕೆ ಸಂಬಂಧಿಸಿ ಫಿಸಿಯೋಥೆರಪಿ ಬ್ಯಾಚ್ಯುಲರ್ ಮತ್ತು ಮಾಸ್ಟರ್ ಕೋರ್ಸ್‌ಗಳನ್ನು ಆರಂಭಿಸಲು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಯುಜಿಸಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೆ, ಯುಜಿಸಿ ಕಳೆದ ವರ್ಷವೇ ವಿಶ್ವವಿದ್ಯಾಲಯ ಗಳಡಿ ಬರುವ ಪದವಿಪೂರ್ವ ಹಾಗೂ ಸ್ನಾತಕ್ಕೋತ್ತರ ವಿಭಾಗದಲ್ಲಿ ಯೋಗ ವಿಭಾಗ ಆರಂಭಿಸಲು ಮಾನ್ಯತೆ ನೀಡಿತ್ತು. ಅಂತೆಯೇ ಆರು ವಿಶ್ವವಿದ್ಯಾಲಯಗಳು ಈ ಕೋರ್ಸ್‌ಗೆ ಎಲ್ಲಾ ಸಿದ್ಧತೆ ಕೂಡ ಮಾಡಿಕೊಂಡಿವೆ.