Advertisement

ಬದಿಯಡ್ಕದ ವಿಜಯ ಗಣೇಶ ಮೆಕ್ಸಿಕೋದಲ್ಲಿ ಯೋಗ ಪ್ರಸರಣದ ಸಾಧನೆ

12:50 AM Jan 25, 2019 | Harsha Rao |

ಕಾಸರಗೋಡು: ಮೆಕ್ಸಿಕೋದ ಭಾರತದ ರಾಯಭಾರ ಕಚೇರಿಯ ಉಪ ಕಚೇರಿಯಾದ ಕಲ್ಚರಲ್‌ ಸೆಂಟರ್‌ನಲ್ಲಿ ಭಾರತೀಯ ಯೋಗ ರಾಯಭಾರಿಯಾಗಿ ಬದಿಯಡ್ಕ ಕೋರಿಕ್ಕಾರು ವಿಜಯ ಗಣೇಶ ಕಾರ್ಯನಿರ್ವಹಿಸಿದ್ದು 2.5 ವರ್ಷ. ಈ ಸುವರ್ಣಾವಕಾಶ ವಿಜಯ ಗಣೇಶ ಕೋರಿಕ್ಕಾರು ಅವರಿಗೆ ಭಾರತ ಸರಕಾರದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಶನ್ಸ್‌ (ಐಸಿಸಿಆರ್‌) ವತಿಯಿಂದ ದೊರಕಿತು.

Advertisement

ಯೋಗದ ಮೂಲ ಅರ್ಥ ಮನವರಿಕೆ  
ಭಾರತೀಯ ಯೋಗ ಶಾಸ್ತ್ರಕ್ಕೆ ಮೆಕ್ಸಿಕೋದಲ್ಲಿ ಅತ್ಯಂತ ಬೇಡಿಕೆಯಿದೆ. ಹಲವಾರು ಮಂದಿ ಯೋಗಾಭ್ಯಾಸಕ್ಕೆ ಇಂಡಿಯನ್‌ ಕಲ್ಚರ್‌ ಸೆಂಟರ್‌ಗೆ ಆಗಮಿಸಿ ಅಭ್ಯಾಸದಿಂದ ಪ್ರಯೋಜನ ಪಡೆಯುತ್ತಿದ್ದರು. ಮೆಕ್ಸಿಕೋ ಸಿಟಿಯ ಪ್ರತಿಗಲ್ಲಿಯಲ್ಲೂ ಒಂದೊಂದು ಯೋಗ ಕೇಂದ್ರಗಳಿದ್ದು ಹೆಚ್ಚಿನ ಜನರು ಕೇಂದ್ರಗಳಿಗೆ ಹೋಗಿಯೇ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುತ್ತಿದ್ದರು. ಆದರೆ ಬಹಳಷ್ಟು ಜನರು ಯೋಗದ ಮೂಲ ಅರ್ಥವನ್ನು ತಿಳಿಯದೆ ಬರೀ ಶಾರೀರಿಕ ವ್ಯಾಯಾಮದಂತೆ ಯೋಗವನ್ನು ಮೈಗೂಡಿಸಿಕೊಂಡಿದ್ದರು. ಇದರಿಂದಾಗಿ ವಿಜಯ ಗಣೇಶ ಕೋರಿಕ್ಕಾರು ಅವರು ವಿವಿಧ ಕಡೆ ಯೋಗದ ಕಾರ್ಯಾಗಾರ ಮತ್ತು ಉಪನ್ಯಾಸಗಳನ್ನು ಕೊಟ್ಟು ಯೋಗದ ಮೂಲ ಅರ್ಥವನ್ನು ತಿಳಿಹೇಳುವ ಕೆಲಸವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕಲ್ಚರಲ್‌ ಸೆಂಟರ್‌ನಲ್ಲಿ ಯೋಗದ ಆರು ತಿಂಗಳ ಸರ್ಟಿಫಿಕೇಟ್‌ ಕೋರ್ಸ್‌ನ್ನು ನಾಲ್ಕು ಬಾರಿ ಯಶಸ್ವಿಗೊಳಿಸಿದ್ದಾರೆ. ಜತೆಗೆ ವಿವಿಧ ಸಂಸ್ಕೃತ ಶ್ಲೋಕಗಳನ್ನು, ಮಂತ್ರಗಳನ್ನು, ಇದರ ಅರ್ಥಗಳನ್ನು, ಯೋಗ ಮತ್ತು ಮಂತ್ರಗಳನ್ನು ವಿವರಿಸಿದ್ದು ಇದು ಮೆಕ್ಸಿಕೊ ಜನರಿಗೆ ಇಷ್ಟವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ  
ಅಂತಾರಾಷ್ಟ್ರೀಯ ಯೋಗ ದಿನವನ್ನು ಸತತವಾಗಿ ಮೂರು ವರ್ಷ ಆಚರಿಸುವಂತಹ ಅವಕಾಶ ಅವರಿಗೆ ದೊರಕಿತ್ತು. 2016, 2017 ಮತ್ತು 2018ರಲ್ಲಿ ಇಂಡಿಯನ್‌ ಎಂಬಸಿ ಮತ್ತು ಕಲ್ಚರಲ್‌ ಸೆಂಟರ್‌ನ ಸಹಭಾಗಿತ್ವದಲ್ಲಿ ಮೆಕ್ಸಿಕೊದಲ್ಲಿ ಯೋಗ ದಿನಾಚರಣೆ ನಡೆದಿತ್ತು. 2016ರಲ್ಲಿ ಮೆಕ್ಸಿಕೊದ ಪ್ರಮುಖ 3 ನಗರಗಳಲ್ಲಿ ಪ್ರಾರಂಭಗೊಂಡು, 2017ರಲ್ಲಿ 7 ನಗರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಬೇಡಿಕೆ ಹೆಚ್ಚಿದ ಕಾರಣದಿಂದ 2018 ರಲ್ಲಿ 11 ನಗರಗಳಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಇಷ್ಟೇ ಅಲ್ಲದೆ ಇಡೀ ಜೂನ್‌ ತಿಂಗಳನ್ನು “ಜೂನ್‌ ಈಸ್‌ ದ ಮಂತ್‌ ಆಫ್‌ ಯೋಗ’ ಎಂದೇ ಕರೆದು ಯೋಗದ ವಿವಿಧ ಕಾರ್ಯಾಗಾರಗಳನ್ನು ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ, ವಿವಿಧ ವಾಣಿಜ್ಯ ಮತ್ತು ಶಿಕ್ಷಣ ಸಂಕೀರ್ಣಗಳಲ್ಲಿ ನಡೆಸಿಕೊಟ್ಟಿದ್ದಾರೆ. ಯೋಗ ದಿನಾಚರಣೆ ನಡೆದ ಎಲ್ಲ ಸ್ಥಳಗಳಲ್ಲೂ 500ರಿಂದ 1,000 ಮಂದಿ ಭಾಗವಹಿಸಿ, ಯೋಗಾಭ್ಯಾಸವನ್ನು ಮಾಡಿದ್ದರು.

ಯೋಗಕ್ಕೆ ಬೇಡಿಕೆ ಹೆಚ್ಚಳ 
ಭಾರತ ಸರಕಾರದ ಸಾಂಸ್ಕೃತಿಕ ಕೇಂದ್ರಗಳು 1950ರಲ್ಲಿ ವಿವಿಧ ದೇಶಗಳಲ್ಲಿ ತೆರೆಯ ತೊಡಗಿದವು. ಪ್ರಸ್ತುತ ಹಲವು ದೇಶಗಳಲ್ಲಿ ಭಾರತದ ಸಾಂಸ್ಕೃತಿಕ ಕೇಂದ್ರಗಳಿದ್ದು ಅವುಗಳ ಪೈಕಿ 36 ದೇಶಗಳಲ್ಲಿ ಯೋಗದ ಹುದ್ದೆಗಳಿದ್ದು, ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಶಿಕ್ಷಕರನ್ನು ಐಸಿಸಿಆರ್‌ ಆರಿಸಿ ವಿವಿಧ ಕೇಂದ್ರಗಳಿಗೆ ಕಳುಹಿಸುತ್ತದೆ. ಯೋಗಾಭ್ಯಾಸದಿಂದಾಗುವ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ವರ್ಧನೆಯಿಂದಾಗಿ ಪಾಶ್ಚಾತ್ಯರಲ್ಲಿ ಯೋಗದ ಬಗೆಗಿರುವ ಆಸಕ್ತಿಯು ಹೆಚ್ಚುತ್ತಾ ಇದ್ದು, ಅದಕ್ಕಿರುವ ಬೇಡಿಕೆಯೂ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿಂದಲೂ ಯೋಗಕ್ಕಿರುವ ಬೇಡಿಕೆಗಳು ಹೆಚ್ಚಿದ್ದು, ಇನ್ನು ಬಾಕಿ ಇರುವ ರಾಯಭಾರ ಕಚೇರಿಗಳಲ್ಲೂ ಯೋಗದ ಹುದ್ದೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.
–  ಕೋರಿಕ್ಕಾರು ವಿಜಯ ಗಣೇಶ, ಭಾರತೀಯ ಯೋಗ ರಾಯಭಾರಿ

Advertisement

Udayavani is now on Telegram. Click here to join our channel and stay updated with the latest news.

Next