Advertisement

ನಿತ್ಯ ಜೀವನದಲ್ಲಿ ಯೋಗ

11:29 PM Aug 03, 2022 | Team Udayavani |

ಭಾರತೀಯ ಪರಂಪರೆಯಲ್ಲಿ ಯೋಗಶಾಸ್ತ್ರಕ್ಕೆ ಮಹತ್ತರವಾದ ಸ್ಥಾನವಿದೆ. ಈ ಶಾಸ್ತ್ರವು ಪ್ರಾಯೋಗಿಕ ವಾಗಿದ್ದು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ರಕ್ಷಣೆಯಲ್ಲಿ ಸಹಕಾರಿಯಾಗಿದೆ. ಭಾರತೀಯರಿಗೆ ಯೋಗವು ಒಂದು ಜೀವನ ಪದ್ಧತಿಯಾಗಿದ್ದು, ಪ್ರಸ್ತುತ ಜನಾದರಣೆ ಪಡೆದ ಶಾಸ್ತ್ರವಾಗಿದೆ.

Advertisement

ಎಲ್ಲ ಧರ್ಮಗ್ರಂಥಗಳ ಮುಖ್ಯ ಉದ್ದೇಶ ಜೀವನದಲ್ಲಿ ಶಾಂತಿಯನ್ನು ಹೊಂದುವ ಬಗೆಯನ್ನು ತಿಳಿಸುವುದು. ಶಾಂತಿಯುತವಾದ ಮನಸ್ಸಿನಿಂದ ಊಹಿಸಲೂ ಅಸಾಧ್ಯವಾದ ಕಾರ್ಯಗಳನ್ನು ಮಾಡಲು ಸಾಧ್ಯ. ಬಂಧ ಮತ್ತು ಮೋಕ್ಷಗಳಿಗೆ ಮನಸ್ಸೇ ಕಾರಣವಾದ್ದರಿಂದ ಮನಸ್ಸನ್ನು ಪ್ರಸನ್ನೀಕರಿಸಿಕೊಂಡರೆ ಎಲ್ಲವನ್ನೂ ಸಾಧಿಸಿದಂತೆ. ಎಲ್ಲ ಯೋಗಸಾಧನೆಗಳ ಪರಮಲಕ್ಷ್ಯ ಮನಶಾಂತಿ. ಶಾಂತಿಯನ್ನು ಪಡೆಯುವ ವಿಧಾನಗಳನ್ನು ವಿವಿಧ ಯೋಗ ಮಾರ್ಗಗಳು ಬೋಧಿಸುತ್ತವೆ. ನಮ್ಮ ದಿನನಿತ್ಯದ ಕೆಲಸಗಳ ಜತೆಯಲ್ಲಿ ಯೋಗಾಭ್ಯಾಸ ಮಾಡುತ್ತಾ ಸಾಗಿದಾಗ ಉತ್ತಮ ಜೀವನಕ್ರಮ ಸಾಧ್ಯವಾಗಿ ವ್ಯಕ್ತಿಯು ಜೀವನದ ಉನ್ನತಿಯನ್ನು ಸಾಧಿಸಬಹುದು.

ಆಸನಗಳ ಅಭ್ಯಾಸವೊಂದೇ ಯೋಗವಲ್ಲ. ದೇಹದಲ್ಲಿರುವ ಸಪ್ತಧಾತುಗಳಾದ ರಸ, ರಕ್ತ, ಮಾಂಸ ಮೇಧ, ಅಸ್ತಿ, ಮಜ್ಜ ಮತ್ತು ವೀರ್ಯಗಳ ಅಸಮತೋಲನವನ್ನು ಹೋಗಲಾಡಿಸಿ ದೇಹಾರೋಗ್ಯ ಕಾಪಾಡುವುದು ಆಸನಗಳ ಗುರಿ. ದೇಹದಲ್ಲಿರುವ ರೋಗಗಳ ನಿರ್ಮೂಲನ ಮತ್ತು ಆಗಾಮಿ ರೋಗಗಳ ಪ್ರತಿಬಂಧವು ಆಸನಾಭ್ಯಾಸದಿಂದ ಸಾಧ್ಯವಾಗುತ್ತದೆ. ಅಂತೆಯೇ ಪ್ರಾಣಾಯಾಮವು ಶ್ವಾಸೋಚ್ಛಾಸದ ಗತಿಯನ್ನು ನಿಯಂತ್ರಿಸಿ ಆಹಾರದ ಪಚನ ಕ್ರಿಯೆಯನ್ನು ಸರಿಪಡಿಸಿ ಚಂಚಲವಾದ ಚಿತ್ತವನ್ನು ನಿಶ್ಚಲಗೊಳಿಸುತ್ತದೆ.

ನಿಯಮಿತವಾದ ಆಸನ ಪ್ರಾಣಾಯಾಮಗಳ ಅಭ್ಯಾಸದಿಂದ ಈ ಅಂಶವನ್ನು ಸಾಧಿಸಬಹುದು. ಇದಕ್ಕಾಗಿ ದಿನದ ಕೆಲವು ಸಮಯವನ್ನು ಮೀಸಲಿಡಬೇಕಾಗುತ್ತದೆ. ಆಹಾರ ಮತ್ತು ನಿದ್ರೆಗಳಂತೆ ಈ ಅಭ್ಯಾಸಕ್ಕೂ ನಿಗದಿತವಾದ ಸಮಯವನ್ನು ಮೀಸಲಿಡುವುದು ಅಗತ್ಯ.

ನಿತ್ಯಜೀವನದಲ್ಲಿ ನಾವು ನಮಗರಿಯದಂತೆ ಯೋಗ ಸಾಧನೆಯನ್ನು ಮಾಡುತ್ತಿರುತ್ತೇವೆ. ದಿನನಿತ್ಯದಲ್ಲಿ ಮಾಡುವ ದೇವರ ಭಜನೆಯಲ್ಲಿ ಯೋಗ ಅಡಕವಾಗಿರುತ್ತದೆ. ದೇವರ ಭಜನೆಯನ್ನು ಹಾಡುತ್ತಾ ಮೈಮರೆತುಕೊಂಡ ವ್ಯಕ್ತಿಯು ಒಂದು ರೀತಿಯ ಅವ್ಯಕ್ತವಾದ ಆನಂದವನ್ನು ಅನುಭವಿಸುತ್ತಾನೆ. ಜೀವನದ ಬವಣೆಗಳನ್ನು ಮರೆತು ದೇವರ ಕುರಿತಾದ ಸ್ತೋತ್ರದೊಂದಿಗೆ ಒಂದಾದಾಗ ವಿಶೇಷವಾದ ಮನಶಾಂತಿಯನ್ನು ಪಡೆಯುತ್ತಾನೆ. ಮಂಗಳ ಪದ್ಯದಿಂದ ಭಜನೆಯನ್ನು ಪೂರ್ತಿಗೊಳಿಸಿ ಜೀವನಸಾಗರಕ್ಕೆ ಧುಮುಕಿದಾಗಲೂ ಸಾತ್ವಿಕಸತ್ವ ತುಂಬಿಕೊಂಡಿದ್ದರೆ ಭಕ್ತಿಯೋಗ ಎನಿಸುವುದು. ಮಹಾತ್ಮಜ್ಞಾನಪೂರ್ವಕವಾದ ಸದೃಢವಾದ ಸ್ನೇಹವೇ ಭಕ್ತಿಯೆಂದಿದೆ ಶಾಸ್ತ್ರ. ಭಕ್ತಿಯ ಮಾರ್ಗದಲ್ಲಿ ಸಾಗುತ್ತಾ ಪಾರಲೌಕಿಕವಾದ ಆನಂದವನ್ನು ಉಣ್ಣುತ್ತಾ ಶಾಂತಿಯುತವಾಗಿ ಬಾಳಲು ಸಾಧ್ಯ. ನೀರಿನಲ್ಲಿರುವ ಪದ್ಮಪತ್ರದಂತೆ ಸಂಸಾರದಲ್ಲಿ ಸುಖಪಡುತ್ತಾ ಅದನ್ನೆ ಅಂಟಿಸಿಕೊಳ್ಳದೆ ಪಾರಮಾರ್ಥಿಕ ಸಾಧನೆಯ ಹಾದಿಯಲ್ಲಿ ಸಾಗುವುದೇ ಯೋಗ.

Advertisement

ಕಚೇರಿಯಲ್ಲಿ ವ್ಯಕ್ತಿಯು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುತ್ತಿರುವಾಗ ಆತನಿಗೆ ದೊರೆಯುವ ಆತ್ಮಸಂತೃಪ್ತಿಯು ಅವನನ್ನು ಉತ್ಕರ್ಷಕ್ಕೆ ಒಯ್ಯುತ್ತದೆ. ತನಗೆ ಒದಗಿ ಬಂದ ಉದ್ಯೋಗದಲ್ಲಿ ಸಂತುಷ್ಟಿಯಿಂದ ತೊಡಗಿಕೊಂಡು ಸಾರ್ಥಕತೆಯನ್ನು ಕಾಣುವುದೇ ಕರ್ಮಯೋಗ. ಕಾಯಕವೇ ಕೈಲಾಸ ಎನ್ನುವ ಶಿವಶರಣರ ಮಾತಿನಂತೆ ಕಾಯಕದಲ್ಲೇ ದೇವರನ್ನು ಕಾಣುತ್ತಿದ್ದರೆ ಯೋಗ ಸಾಧನೆಯ ಪಥದಲ್ಲಿ ಸಾಗಿದಂತೆ. ಜೀವನಿಗೆ ಕರ್ಮದಲ್ಲಿ ಮಾತ್ರ ಅಧಿಕಾರ ಫ‌ಲದಲ್ಲಿ ಇರುವುದಿಲ್ಲ ಎಂಬ ಭಗವದ್ಗೀತೆಯ ಮಾತಿನ ಸಾಕ್ಷಾತ್ಕಾರ ವಾಗುವುದು ಕಾರ್ಯಕ್ಷೇತ್ರದಲ್ಲೆಂದು ತಿಳಿದು ವ್ಯವಹರಿಸುವವನು ನಿಜವಾದ ಯೋಗಿಯಾಗುತ್ತಾನೆ. ಪ್ರಾತಃಕಾಲದಿಂದ ಆರಂಭಿಸಿ ರಾತ್ರಿಯವರೆಗೆ ಹಾಗೆಯೇ ರಾತ್ರಿಯಿಂದ ಆರಂಭಿಸಿ ಪ್ರಾತಃಕಾಲದವರೆಗೆ ಯಾವುದನ್ನೆಲ್ಲ ಮಾಡುತ್ತೇವೆಯೋ ಅವೆಲ್ಲವನ್ನು ಭಗವಂತನ ಪೂಜೆಯೆಂದು ತಿಳಿಯುತ್ತಾ ಹೋದಾಗ ಕರ್ಮಯೋಗದ ಪರಾಕಾಷ್ಠೆಯನ್ನು ತಲುಪಲು ಸಾಧ್ಯ. ತಾನು ಮಾಡುವ ಉತ್ತಮ ಕೆಲಸಗಳಿಗೆ ಒಂದೊಮ್ಮೆ ಸರಿಯಾದ ಮಾನ್ಯತೆ ಸಿಗದಿದ್ದರೂ ಭಗವಂತ ಪ್ರೀತನಾದರೆ ಸಾಕೆಂದು ಕಾರ್ಯವೆಸಗುತ್ತಿದ್ದರೆ ಯೋಗ ಸಿದ್ಧಿಸಿದಂತೆ. ಸನ್ಮಾರ್ಗದಲ್ಲಿ ಮಾಡಿದ ಕಾರ್ಯಗಳಿಗೆಲ್ಲ ಸರಿಯಾದ ಕಾಲದಲ್ಲಿ ಫ‌ಲಪ್ರಾಪ್ತಿಯಾಗುವುದೆಂಬ ಶಾಸ್ತ್ರವಚನದಲ್ಲಿ ನಂಬಿಕೆ ಇರಿಸಿದರೆ ಆತಂಕಕ್ಕೆ ಒಳಗಾಗುವ ಕಾರಣವಿಲ್ಲ.

ವಾಹನಗಳಲ್ಲಿ ಪ್ರಯಾಣಿಸುವ ವೇಳೆಯಲ್ಲಿ, ಸಮಾರಂಭಗಳಲ್ಲಿ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವಾಗ ಮನಸ್ಸನ್ನು ಅನಾವಶ್ಯಕವಾದ ಯೋಚನೆಗಳತ್ತ ಹರಿಯಬಿಡದೆ ನಮಗಿಷ್ಟವಾದ ದೇವರ ನಾಮವನ್ನು ಅಥವಾ ಓಂಕಾರವನ್ನು ಧ್ಯಾನಿಸುತ್ತಿದ್ದರೆ ಮನಸ್ಸು ನಿಶ್ಚಲವಾದ ಸ್ಥಿತಿಗೆ ಬರುತ್ತದೆ. ಉಪಾಂಶುವೆಂಬ ಧ್ಯಾನದ ಪ್ರಕಾರದಲ್ಲಿ ತನಗೆ ಮಾತ್ರ ಕೇಳುವಂತೆ ಬೀಜಾಕ್ಷರವನ್ನು ಅಥವಾ ಓಂಕಾರವನ್ನು ಜಪಿಸುತ್ತೇವೆ. ಈ ರೀತಿಯಾಗಿ ಧ್ಯಾನ ಮಾಡುತ್ತಾ ಮನಸ್ಸಿನ ಸ್ಥಿಮಿತವನ್ನು ಸಾಧಿಸಲು ಶಕ್ತವಾದರೆ ಅದು ಉತ್ತಮವಾದ ಯೋಗವಾಗುತ್ತದೆ. ಕೆಲಸವಿಲ್ಲದ ಮನಸ್ಸು ಭೂತದ ಕಾರಸ್ಥಾನವಾಗುವುದರಿಂದ ವಿಕೃತವಾದ ಆಲೋಚನೆಗಳನ್ನು ದೂರ ಮಾಡಿ ಆರೋಗ್ಯಕರ ಮನಸ್ಸನ್ನು ಹೊಂದಲು ಈ ರೀತಿಯ ಧ್ಯಾನದಿಂದ ಸಾಧ್ಯವಾಗುತ್ತದೆ.

ಮನಸ್ಸನ್ನು ಪ್ರಸನ್ನವಾಗಿಸುವುದಕ್ಕಾಗಿ ಪತಂಜಲಿ ಮಹರ್ಷಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮನೋಧರ್ಮವನ್ನು ತಿಳಿಸುತ್ತಾರೆ. ನಮ್ಮಿಂದ ಉತ್ತಮ ಸ್ಥಿತಿಯಲ್ಲಿರುವವರಲ್ಲಿ ಮೈತ್ರಿ ಭಾವವನ್ನು ಬೆಳೆಸಿಕೊಳ್ಳಬೇಕೆಂಬುದು ಮಹರ್ಷಿಗಳ ಉಪದೇಶ. ಹಾಗೆ ಮಾಡಿದಾಗ ಮತ್ಸರವು ಮನೆಮಾಡುವಂತಿಲ್ಲ. ಅಲ್ಲದೆ ಜೀವನದಲ್ಲಿ ಉತ್ತಮಿಕೆಯನ್ನು ಹೊಂದಿದವನ ಆದರ್ಶವನ್ನು ಪಾಲಿಸಿ ನಾವು ಉತ್ಕರ್ಷವನ್ನು ಕಾಣಲು ಸಾಧ್ಯ. ನಮಗಿಂತ ಕೆಳಮಟ್ಟದ ಜೀವನವನ್ನು ನಡೆಸುತ್ತಿರುವವರ ಕುರಿತಾಗಿ ಕರುಣೆ ತೋರುವುದು ಅಳವಡಿಸಿಕೊಳ್ಳಬೇಕಾದ ಎರಡನೆಯ ಮನೋಧರ್ಮ.

ಜ್ಞಾನದಲ್ಲಾಗಲಿ, ಐಶ್ವರ್ಯದಲ್ಲಾಗಲಿ, ಸಾಧನೆಯಲ್ಲಾಗಲಿ ನಮ್ಮಿಂದ ಕನಿಷ್ಠರನ್ನು ಕಂಡಾಗ ಅವರ ಕುರಿತಾಗಿ ಕರುಣೆ ಉಂಟಾದರೆ ಪರೋಪಕಾರ ಬುದ್ಧಿ ಸಹಜವಾಗಿ ರೂಢವಾಗುತ್ತದೆ. ಅಲ್ಲದೆ ಕನಿಷ್ಠರೊಂದಿಗೆ ನಮ್ಮನ್ನು ಹೋಲಿಸಿಕೊಂಡರೆ ತಾನು ಹೀನನೆಂಬ ಕೊರಗು ಇಲ್ಲವಾಗುತ್ತದೆ. ಅಂತೆಯೇ ಜೀವನದಲ್ಲಿ ಯಶಸ್ಸನ್ನು ಹೊಂದಿದವನ ಕುರಿತಾಗಿ ಸಂತೋಷ ಭಾವವನ್ನು ತಾಳಬೇಕು. ಆಗ ಮನಸ್ಸಿನ ಕಲ್ಮಶಗಳು ದೂರವಾಗುವುದಲ್ಲದೆ ಪರಸ್ಪರರಲ್ಲಿ ಸೌಹಾರ್ದ ಭಾವನೆ ವೃದ್ಧಿಯಾಗುತ್ತದೆ. ಹಾಗೆಯೇ ಅಕಾರಣವಾಗಿ ಪರಪೀಡನೆ ನಡೆಸುತ್ತಿರುವ ಪಾಪಾತ್ಮರ ಕುರಿತಾಗಿ ಉಪೇಕ್ಷೆಯಿಂದಿರುವುದೇ ಯುಕ್ತವಾಗುವುದು. ಇಂತಹ ದುಶ್ಚರಿತನನ್ನು ಉಪೇಕ್ಷೆ ಮಾಡಿದ ಪರಿಣಾಮವಾಗಿ ಆತ ಪರಿಶುದ್ಧನಾದರೆ ಒಟ್ಟು ಸಮಾಜದ ಹಿತಪ್ರಾಪ್ತಿಯಾಗುವುದು. ಸಮಾಜದ ಆರೋಗ್ಯವನ್ನು ಕಾಪಿಡುವುದಕ್ಕೆ ಇಂತಹ ಜೀವನ ಮೌಲ್ಯಗಳನ್ನು ಯೋಗ ಶಾಸ್ತ್ರ ಉಪದೇಶಿಸುತ್ತದೆ. ಯೋಗಶಾಸ್ತ್ರದ ನಿರಂತರವಾದ ಅನುಷ್ಠಾನದಿಂದ ಉತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮಗಳು ವರ್ಧಿಸುತ್ತವೆ. “ಯೋಗಯುಕ್ತೋ ಭವಾರ್ಜುನ’ ಎಂದು ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದಂತೆ ಯೋಗ ಮಾರ್ಗದಲ್ಲಿ ಸಾಗಿ ಸುಖೀ ಜೀವನವನ್ನು ನಡೆಸೋಣ.

– ಗಿರೀಶ ಶೆಟ್ಟಿಗಾರ್‌, ಯೋಗ ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next