ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶದ ಜನರು ಅಸಮಧಾನ ವ್ಯಕ್ತಪಡಿಸುತ್ತಿರುವುದಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಸಲಹೆಯೊಂದನ್ನು ನೀಡಿದ್ದಾರೆ. ಅದೇನೆಂದರೆ ಹೆಚ್ಚು ಶ್ರಮ ವಹಿಸಿ ದುಡಿಯುವ ಮೂಲಕ ಬೆಲೆ ಏರಿಕೆಯನ್ನು ಎದುರಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕೆಂದು ಕುಮಾರಸ್ವಾಮಿಗೆ ಗೊತ್ತಿದೆ: ಈಶ್ವರಪ್ಪ ಟಾಂಗ್
2022ರ ಮಾರ್ಚ್ 22ರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 6.40 ರೂಪಾಯಿಯಷ್ಟು ಹೆಚ್ಚಳವಾಗಿದೆ. ಸುಮಾರು 137 ದಿನಗಳ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾಗಿದ್ದರಿಂದ ತೈಲ ಮಾರಾಟ ಕಂಪನಿಗಳು ಪ್ರತಿದಿನ ತೈಲ ಬೆಲೆ ಪರಿಷ್ಕರಿಸಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಪ್ರತಿದಿನ ತೈಲ ಬೆಲೆ ಏರಿಕೆಯಾಗುತ್ತಿರುವುದಕ್ಕೆ ವಾಹನ ಸವಾರರು, ಪ್ರಯಾಣಿಕರು ಅಸಮಧಾನ ಹೊರಹಾಕುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಬಾಬಾ ರಾಮ್ ದೇವ್ , ಸನ್ಯಾಸಿಯಾಗಿರುವ ನಾನೇ ಮುಂಜಾನ್ 4ಗಂಟೆಯಿಂದ ರಾತ್ರಿ 10ಗಂಟೆವರೆಗೆ ಕಠಿಣವಾಗಿ ದುಡಿಯುತ್ತಿದ್ದೇನೆ. ಹೀಗಾಗಿ ದೇಶದ ಜನರು ಕೂಡಾ ಶ್ರಮ ವಹಿಸಿ ದುಡಿಯುವ ಅಗತ್ಯವಿದ್ದು, ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಬೆಲೆ ಏರಿಕೆಯನ್ನು ಎದುರಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಬೆಲೆ ಇಳಿಕೆಯಾಗಬೇಕು ಎಂಬುದನ್ನು ಒಪ್ಪಿಕೊಳ್ಳುವುದಾಗಿ ಹೇಳಿದ ಬಾಬಾ ರಾಮ್ ದೇವ್, ಸರ್ಕಾರದ ಸಂದಿಗ್ಧತೆ ಅರ್ಥವಾಗುತ್ತದೆ. ಒಂದು ವೇಳೆ ತೈಲ ಬೆಲೆ ಕಡಿಮೆಯಾದರೆ ತೆರಿಗೆ ಪಡೆಯುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ಇದರಿಂದ ದೇಶವನ್ನು ಮುನ್ನಡೆಸುವುದು ಹೇಗೆ? ಯೋಧರಿಗೆ ಸಂಬಳ ನೀಡುವುದು ಹೇಗೆ? ರಸ್ತೆ ನಿರ್ಮಾಣ ಮಾಡುವುದು ಹೇಗೆ. ಹೌದು ಹಣದುಬ್ಬರ ಇಳಿಕೆಯಾಗಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ ಜನರು ಶ್ರಮ ವಹಿಸಿ ದುಡಿಯಬೇಕಾದ ಅಗತ್ಯವಿದೆ ಎಂದು ರಾಮ್ ದೇವ್ ಪ್ರತಿಪಾದಿಸಿದ್ದಾರೆ.