Advertisement

ದೇಹದ ತೂಕ ಇಳಿಸಲು ನೆರವಾಗುವ ಯೋಗ

12:42 PM Feb 08, 2021 | Team Udayavani |

ದೇಹದ ತೂಕ ಹೆಚ್ಚಾಗಿದ್ದರೆ ಕಡಿಮೆ ಮಾಡುವ ಹಂಬಲ, ಕಡಿಮೆ ಇದ್ದರೆ ಕೊಂಚ ಹೆಚ್ಚು ಮಾಡುವ ತವಕ. ಇದು ಇಂದಿನ ಯುವ ಮನಸ್ಸುಗಳ ತೊಳಲಾಟ. ಕೆಲವರು ದೇಹದ ತೂಕ ಕಡಿಮೆ ಇದ್ದರೂ ಪರವಾಗಿಲ್ಲ ಹೆಚ್ಚಾಗಬಾರದು. ಹೆಚ್ಚಾದರೆ ಅದನ್ನು ಇಳಿಸುವುದೇ ಕಷ್ಟ ಎನ್ನುತ್ತಾರೆ. ಕೊಂಚ ಶ್ರಮಪಟ್ಟರೆ ಇದು ಕಷ್ಟವಲ್ಲ. ಯಾಕೆಂದರೆ ದೇಹದ ತೂಕ ಇಳಿಸುವ ಕೆಲವೊಂದು ಯೋಗ ಭಂಗಿಗಳನ್ನು ನಿತ್ಯವೂ ಮಾಡಿದರೆ ಅತೀ ಶೀಘ್ರದಲ್ಲಿ ತೂಕ ಇಳಿಕೆ ಮಾಡಬಹುದು.

Advertisement

ದೇಹದ ತೂಕ ಕಡಿಮೆ ಮಾಡುವಾಗ ಮುಖ್ಯವಾಗಿ ನಾವು ಕರುಳಿನ ಆರೋಗ್ಯದ ಬಗ್ಗೆ ಯೋಚಿಸಬೇಕು. ಯಾಕೆಂದರೆ ಕರುಳು ನಮ್ಮ ರೋಗನಿರೋಧಕ ವ್ಯವಸ್ಥೆಗೆ ಮಾತ್ರವಲ್ಲ ಉತ್ತಮ ಜೀರ್ಣಕಾರಿಗೂ ಸಹಾಯ ಮಾಡುತ್ತದೆ. ಕರುಳಿನ ಅನಾರೋಗ್ಯವು ಮಲಬದ್ಧತೆ, ಆಯಾಸ, ಆಹಾರ ಬೇಡವೆನಿಸುವಂತೆ ಮಾಡುವುದು ಮಾತ್ರವಲ್ಲ ದೇಹದ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಹೀಗಾಗಿ ದೇಹದ ತೂಕ ಇಳಿಸಬೇಕು ಎಂದುಕೊಂಡಿದ್ದರೆ ಮೊದಲು ಕರುಳಿನ ಆರೋಗ್ಯವನ್ನು ಸಮತೋಲನದಲ್ಲಿರಿಸುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸುಲಭವಾಗಿ ಜೀರ್ಣವಾಗುವ ಆಹಾರದ ಜತೆಗೆ ಪ್ರೋಬಯಾಟಿಕ್‌
ಅಂಶಗಳಿರುವ ಆಹಾರ ಸೇವನೆ ಬಹುಮುಖ್ಯವಾಗುತ್ತದೆ. ಇದರೊಂದಿಗೆ ಕರುಳಿನ ಆರೋಗ್ಯ ಕಾಪಾಡಲು ಯೋಗದಲ್ಲೂ ದಾರಿಯಿದೆ.

ಅರ್ಧಚಂದ್ರಾಕಾರ ಯೋಗಭಂಗಿ

ಒಂದು ರೀತಿಯಲ್ಲಿ ಇದು ತಿರುಚುವ ಯೋಗ ಭಂಗಿಯಾಗಿದೆ. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಿ ಹೊಟ್ಟೆಯ ಕೊಬ್ಬು ಕರಗುವುದು. ಜತೆಗೆ ದೇಹದ ಅಂಗಾಂಗಗಳಿಗೆ ಮಸಾಜ್‌ ದೊರೆಯುವುದು.

ಮಾಡುವ ವಿಧಾನ
ನೆಲದ ಮೇಲೆ ನೇರವಾಗಿ ನಿಂತುಕೊಂಡು ಬಲಗಾಲನ್ನು ಮುಂದೆ ಇರಿಸಿ. ದೇಹವನ್ನು ಕೆಳಕ್ಕೆ ಇಳಿಸಿ. ಮುಂಭಾಗದ ಕಾಲು 90 ಡಿಗ್ರಿ ಕೋನದಲ್ಲಿರಲಿ. ಮೊಣಕಾಲಿನ ಗಂಟು ಮತ್ತು ಹಿಮ್ಮಟಿ ಛಾವಣಿಯ ಕಡೆಗೆ ಎತ್ತುವ ಮೂಲಕ ಎಡಗಾಲನ್ನು ನೇರವಾಗಿಸಿಕೊಳ್ಳಿ.

Advertisement

ಕೈಗಳನ್ನು ಹೃದಯದ ಮಧ್ಯದಲ್ಲಿ ಪ್ರಾರ್ಥನೆ ಭಂಗಿಯಲ್ಲಿರಿಸಿ ತಲೆಯನ್ನು ಬಲಭಾಗಕ್ಕೆ ತಿರುಗಿಸಿ. ಎಡ ಮೊಣಕೈಯನ್ನು ಬಲ ಮೊಣಕಾಲುಗಳಿಗೆ ಕೊಕ್ಕೆಯಂತೆ ಮಾಡಿ ಬಣ ಮೊಣಕೈಯನ್ನು ಆಕಾಶಕ್ಕೆ ವಿಸ್ತರಿಸಿ. ಛಾವಣಿ ನೋಡಿಕೊಂಡು ಬೆನ್ನು ಮೂಳೆ ನೇರವಾಗಿದೆ ಎಂಬುದನ್ನು ಖಚಿತಪಡಿಸಿ. ಸ್ವಲ್ಪ ಹೊತ್ತು ಹೀಗೆ ಇದ್ದು ನಿಧಾನವಾಗಿ ಉಸಿರಾಡುತ್ತಿರಿ.

ಬಿಲ್ಲಿನಂತ ಯೋಗಭಂಗಿ
ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಮಲಬದ್ಧತೆ ನಿವಾರಿಸಿ, ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಮಾಡುವ ವಿಧಾನ ಹೊಟ್ಟೆಯ ಮೇಲೆ ಮಲಗಿ. ಕಾಲುಗಳನ್ನು ಹಿಮ್ಮುಖವಾಗಿ ಮಡಸಿ ಕೈಗಳಿಂದ ಹಿಡಿದುಕೊಳ್ಳಿ.

ದೀರ್ಘ‌ವಾದ ಉಸಿರು ತೆಗೆದುಕೊಂಡು ಎದೆ ಮತ್ತು ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಿ. ಸ್ವಲ್ಪ ಹೊತ್ತು ಹೀಗೆ ಇದ್ದು, ಉಸಿರಾಟದತ್ತ ಗಮನವಿರಿಸಿ. ದೇಹ ಬಿಲ್ಲಿನಂತೆ ಬಿಗಿಯಾಗಿರಬೇಕು.

ಚಿಟ್ಟೆಯಂತ ಯೋಗಭಂಗಿ
ಜೀರ್ಣಕ್ರಿಯೆಯನ್ನು ಸುಧಾರಿಸುವ ಈ ಯೋಗಭಂಗಿಯು ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಮಾಡುವ ವಿಧಾನ
ಬೆನ್ನನ್ನು ನೇರವಾಗಿರಿಸಿ ಮೊಣಕಾಲುಗಳನ್ನು ಬಾಗಿಸಿ ನೆಲದ ಮೇಲೆ ಕುಳಿತುಕೊಳ್ಳಬೇಕು. ಬಾಗಿದ ಮೊಣಕಾಲುಗಳನ್ನು ಹೊರಭಾಗಕ್ಕೆ ಸರಿಸಿ ಎರಡೂ
ಕಾಲುಗಳ ಅಡಿಭಾಗವು ಮಧ್ಯೆ ಸಂಧಿಸುವಂತಿರಬೇಕು. ಎರಡೂ ಕಾಲುಗಳ ಪಾದಗಳನ್ನು ಕೈಗಳಿಂದ ಹಿಡಿದುಕೊಳ್ಳಿ.

ದೇಹವನ್ನು ನಿಧಾನವಾಗಿ ಮುಂದಕ್ಕೆ ಕಾಲುಗಳ ಕಡೆಗೆ ಬಗ್ಗಿಸಿ. ಸುಮಾರು 2 ನಿಮಿಷದವರೆಗೆ ಈ ಭಂಗಿಯಲ್ಲಿರಲು ಪ್ರಯತ್ನಿಸಿ. ಉಸಿರಾಟದ
ಮೇಲೆ ಗಮನವಿರಲಿ.

Advertisement

Udayavani is now on Telegram. Click here to join our channel and stay updated with the latest news.

Next