Advertisement

ಯೋಗ ಸಾಧಕರ ಯಶೋಗಾಥೆ

04:48 PM Jun 21, 2021 | Team Udayavani |

ಎಲ್‌ಐಸಿ ನಿವೃತ್ತ ಅಧಿಕಾರಿಯ ಸೇವೆ

Advertisement

ಬಾಗಲಕೋಟೆ: ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿಯೊಬ್ಬರು ತಮ್ಮ ದೇಹದಲ್ಲಿ ಆ್ಯಸಿಡಿಟಿ ಕಡಿಮೆ ಮಾಡಿಕೊಳ್ಳಲು ಆರಂಭಿಸಿದ ಯೋಗ, ಇಂದು 15ಸಾವಿರಕ್ಕೂ ಹೆಚ್ಚು ಜನರಿಗೆ ಯೋಗದ ತರಬೇತಿಯಾಗಿದೆ. ನಿತ್ಯವೂ ಬೆಳಗ್ಗೆ 6ರಿಂದ 7 ಹಾಗೂ ಸಂಜೆ 6ರಿಂದ 7ರ ವರೆಗೆ ನಿತ್ಯವೂ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೂಲಕ ಯೋಗ ತರಬೇತಿ ನೀಡುತ್ತಿದ್ದಾರೆ.

ಹೌದು, ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಸಂಗಪ್ಪ ಕುಪ್ಪಸ್ತ ಅವರೇ ಈವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಯೋಗ ಶಿಬಿರ ನೀಡಿದ್ದಾರೆ. ಇದರಿಂದ ಸಾವಿರಾರು ಜನರು ತಮ್ಮ ಆರೋಗ್ಯ ಸುಧಾರಿಸಿಕೊಳ್ಳುವ ಅವರೂ ಯೋಗ ತರಬೇತುದಾರರಾಗಿ ಹೊರಹೊಮ್ಮಿದ್ದಾರೆ. ಕುಪ್ಪಸ್ತ ಅವರು, ಕಳೆದ 1995ರಿಂದ ಈ ವರೆಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಯೋಗ ಆರಂಭಿಸುವ ಮೊದಲು ಅವರಿಗೆ ತೀವ್ರ ಆ್ಯಸಿಡಿಟಿ ಸಮಸ್ಯೆ ಇತ್ತು. ಹೀಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸು. ರಾಮಣ್ಣ ಅವರು ಬಾಗಲಕೋಟೆಗೆ ಬಂದಾಗ, ಯೋಗದ ಮೂಲಕ ಆ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದು ಎಂಬ ಸಲಹೆ ನೀಡಿದ್ದರು. ಅಂದಿನಿಂದಲೇ ಯೋಗ ಆರಂಭಿಸಿದ ಸಂಗಪ್ಪ ಕುಪ್ಪಸ್ತ ಅವರು, ಈವರೆಗೂ ನಿಲ್ಲಿಸಿಲ್ಲ.

ಕುಪ್ಪಸ್ತ ಅವರು, 1995ರಿಂದ ತಾವು ಎಲ್‌ಐಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಉಡುಪಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲೂ ಯೋಗ ತರಬೇತಿ ನೀಡಿದ್ದಾರೆ. ಅವರು ಸೇವೆ ಸಲ್ಲಿಸುವ ಕಚೇರಿಯ ಸಿಬ್ಬಂದಿಗೆ ಮೊದಲು ಯೋಗ ಕಲಿಸುವುದರಿಂದ ಹಿಡಿದು, ತಾವು ವಾಸಿಸುವ ಮನೆಯ ಸುತ್ತಲಿನ ಜನರಿಗೆ ಯೋಗ ಕಲಿಸಲು ಆರಂಭಿಸುತ್ತಿದ್ದು. ನಿವೃತ್ತಿಯಾದ ಬಳಿಕ ಅದನ್ನು ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ನಿರಂತರವಾಗಿದ್ದು, ಸ್ವಾಮಿ ವಿವೇಕಾನಂದ ಯೋಗ ತರಬೇತಿ ಕೇಂದ್ರದ ಮೂಲಕ ಅದನ್ನು ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಕಳೆದ 23 ವರ್ಷಗಳಿಂದ 15 ಸಾವಿರಕ್ಕೂ ಹೆಚ್ಚು ಜನರಿಗೆ ಯೋಗ ತರಬೇತಿ ನೀಡಿದ ಖ್ಯಾತಿ ಕುಪ್ಪಸ್ತ ಅವರದು.

ಅಪ್ರತಿಮ ಯೋಗ ಸಾಧಕಿ ಡಾ| ಭಾರತಿ

Advertisement

ಲೋಕಾಪುರ: ಯೋಗಬ್ರಹ್ಮ ಋಷಿ ಪ್ರಭಾಕರ ಗುರೂಜಿ ಶಿಷ್ಯೆ ಪಟ್ಟಣದ ಡಾ| ಭಾರತಿ ಸೋಮಶೇಖರ ಲೋಹಾರ 20 ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಯೋಗ ಪ್ರಾಣಾಯಾಮ, ಧ್ಯಾನ ಮತ್ತು ಸುಖ ಜೀವನದ ಕಲೆಗಳು ಕುರಿತು ತರಬೇತಿ ನೀಡುವುದರ ಮೂಲಕ ಗುರುತಿಸಿಕೊಂಡಿದ್ದಾರೆ.

16 ವರ್ಷಗಳಿಂದ ಹೈದ್ರಾಬಾದ್‌, ಗದಗ, ಧಾರವಾಡ, ಬೆಂಗಳೂರು, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಹಲವಾರು ತರಬೇತಿ ನೀಡುತ್ತಾ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಯೋಗ ಶಿಕ್ಷಣದ ಮೂಲಕ ಭಾರತೀಯ ಸಂಸ್ಕೃತಿ ಉಳಿಸುವ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಗುರುಕುಲವನ್ನು ನಿರ್ಮಾಣ ಮಾಡಿದ್ದಾರೆ. ಯೋಗ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ| ಭಾರತಿ ಸೋಮಶೇಖರ ಲೋಹಾರ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆಯಲ್ಲಿ ತೊಡಗಿ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಈ ಸದ್ಯ ಪಟ್ಟಣದ ಬಾಲಾಜಿ ಶಿಕ್ಷಣ ಸಂಸ್ಥೆ ರಾಯಲ್‌ ಪ್ಯಾಲೇಸ್‌ ಇಂಟರ್‌ನ್ಯಾಷನಲ್‌ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಖ್ಯ ಗುರುಮಾತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಡೆದ ಪ್ರಶಸ್ತಿಗಳು: ಡಾ| ಭಾರತಿ ಸೋಮಶೇಖರ ಲೋಹಾರ ಸಾಮಾಜಿಕ ಸೇವೆ ಗುರುತಿಸಿ ಬೆಂಗಳೂರಿನ ಭಾರತ ವಿಶ್ವ ವಿದ್ಯಾನಿಲಯದ ಡಾಕ್ಟರೇಟ್‌ ಪ್ರಶಸ್ತಿ, ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಹಾಗೂ ರಾಷ್ಟ್ರಮಟ್ಟದ ಶ್ರೇಷ್ಠ ಶಿಕ್ಷಣ ತಜ್ಞೆ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಉಚಿತ ಯೋಗ ತರಬೇತಿ ನೀಡುತ್ತಿರುವ ಅಶೋಕ

ಮಹಾಲಿಂಗಪುರ: ಪಟ್ಟಣದ ಸಿದ್ಧಾರೂಢ ನಗರದ ಅಶೋಕ ಪಂಡಿತ ಬಾಣಕಾರ ಕಳೆದ ಒಂದು ದಶಕದಿಂದ ಸದ್ದಿಲ್ಲದೇ ಯೋಗದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಚಿಕ್ಕಂದಿನಿಂದಲೇ ಅಧ್ಯಾತ್ಮ ಮತ್ತು ಯೋಗದಲ್ಲಿ ಆಸಕ್ತಿ ಹೊಂದಿದ್ದರು. ಪತಂಜಲಿ ಯೋಗ ಪೀಠದ ವತಿಯಿಂದ 2012ರಲ್ಲಿ ಹರಿದ್ವಾರದಲ್ಲಿ ನಡೆದ ಯೋಗ ಶಿಕ್ಷಕರ ತರಬೇತಿಯಲ್ಲಿ ಭಾಗವಹಿಸಿ ಯೋಗದ ತರಬೇತಿ ಹಾಗೂ ಯೋಗ ಗುರು ರಾಮದೇವಬಾಬಾರವರಿಂದ ಯೋಗ ದೀಕ್ಷೆ ಪಡೆದುಕೊಂಡಿದ್ದಾರೆ. ನಂತರ ಮಹಾಲಿಂಗಪುರದ ಎಫ್‌.ಎಚ್‌.ಕುಂಟೂಜಿ ಯೋಗ ಶಿಕ್ಷಕರ ಸಹಕಾರ, ಪ್ರೇರಣೆಯಿಂದ ಯೋಗದ ಎಲ್ಲಾ ಆಸನಗಳನ್ನು ಸಿದ್ದಿಪಡಿಸಿಕೊಂಡಿದ್ದಾರೆ. ಹಲವೆಡೆ ಯೋಗ ಶಿಬಿರಗಳನ್ನು ನಡೆಸಿ, ನೂರಾರು ಜನರಿಗೆ ಉಚಿತ ಯೋಗ ತರಬೇತಿ ನೀಡಿದ್ದಾರೆ.

ಉಚಿತ ಯೋಗ ಶಿಬಿರ: 2018ರಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಆಯುಷ್‌ ಇಲಾಖೆ ಹಾಗೂ ಸಂಜಿವಿನಿ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಪತಂಜಲಿ ಯೋಗ ಸಮಿತಿ ಸಹಯೋಗದೊಂದಿಗೆ ಒಂದು ತಿಂಗಳವರೆಗೆ ಉಚಿತ ಯೋಗ ಶಿಬಿರದಲ್ಲಿ ಯೋಗ ಶಿಕ್ಷಕರಾಗಿ ಯೋಗ ಅಭ್ಯಾಸ ನೀಡಿದ್ದಾರೆ.

ತೇರದಾಳ, ರನ್ನಬೆಳಗಲಿ, ಕೆಸರಗೊಪ್ಪ ಹಾಗೂ ಪಟ್ಟಣದ ಬನಶಂಕರಿದೇವಸ್ಥಾನ ಹಾಗೂ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ನಿರಂತರವಾಗಿ ಮೂರು ವರ್ಷಗಳ ಕಾಲ ಉಚಿತ ಯೋಗ ಶಿಬಿರ, ಸ್ವಾಮಿ ವಿವೇಕಾಂದ ಮಕ್ಕಳ ಉದ್ಯಾನವನದಲ್ಲಿ ಇಂದಿಗೂ ನಿರಂತರವಾಗಿ ಆಸಕ್ತರಿಗೆ ಉಚಿತವಾಗಿ ಯೋಗಭ್ಯಾಸ ನೀಡುತ್ತಿದ್ದಾರೆ. ಯೋಗ ಸಾಧನೆ ಗುರುತಿಸಿ ವಿವಿಧ ಊರು ಮತ್ತು ಹಲವಾರು ಮಠಮಾನ್ಯಗಳು ಮತ್ತು ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಯೋಗಿಯಾಗು ನಿರೋಗಿಯಾಗು, ಉಪಯೋಗಿಯಾಗು ಎಂಬ ಸಿದ್ಧಾಂತದ ಮೂಲಕ ಯೋಗ ಸಾಧನೆ ಮಾಡುತ್ತಿರುವ ಅಶೋಕ ಬಾಣಕಾರ ಸಾರ್ವಜನಿಕರಿಗೆ ಉಚಿತ ಯೋಗ ಶಿಬಿರಗಳ ಮೂಲಕ ಯೋಗದ ಮಹತ್ವ ತಿಳಿಸಿಕೊಡುತ್ತಿದ್ದಾರೆ.

ಹಡಗಲಿ ಗುರೂಜಿ ಮೇರು ಸಾಧನೆ

ಗುಳೇದಗುಡ್ಡ: ಕಳೆದ 56 ವರ್ಷಗಳಿಂದ ಯೋಗವನ್ನೇ ತಮ್ಮ ಉಸಿರಾಗಿಸಿಕೊಂಡು ಲಕ್ಷಾಂತರ ಜನರಿಗೆ ಯೋಗ ಶಿಕ್ಷಣ ನೀಡಿ, ಯೋಗದ ಮಹತ್ವದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ ಗುಳೇದಗುಡ್ಡದ ಗುರೂಜಿ ಬಸವರಾಜ ಹಡಗಲಿ.

ಅವರು ಸ್ಥಾಪಿಸಿದ ಶ್ರೀಕೃಷ್ಣ ಯೋಗಾಶ್ರಮ ರಾಷ್ಟ್ರವಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದ ಜಿಲ್ಲೆಯ ಏಕೈಕ ಯೋಗ ಕೇಂದ್ರವಾಗಿದೆ. ಬಸವರಾಜ ಗುರೂಜಿ ರಷ್ಯಾ, ಅಮೆರಿಕಾ, ಚೀನಾ, ತೈವಾನ್‌, ಹಾಂಗ್‌ಕಾಂಗ್‌, ಯುಕ್ರೇನ್‌, ಬ್ಯಾಂಕಾಂಕ್‌, ಜರ್ಮನಿ ಸೇರಿದಂತೆ ಸುಮಾರು 26 ದೇಶಗಳ ಯೋಗ ಸಾಧಕರಿಗೆ ಹಡಗಲಿ ಗುರೂಜಿ ಹಾಗೂ ಶ್ರೀಕೃಷ್ಣ ಆಶ್ರಮ ಪರಿಚಿತ.

ವಿಶ್ವದಾದ್ಯಂತ 5868ಯೋಗ ಶಿಬಿರಗಳನ್ನು ಗುರೂಜಿ ಡಾ| ಬಸವರಾಜ ಹಡಗಲಿ ಮತ್ತು ಪುತ್ರ ಡಾ| ದೀಪಕ ಹಡಗಲಿ ನಡೆಸಿದ್ದಾರೆ. ಭಾರತ ಸೇರಿದಂತೆ ಬೇರೆ ಬೇರೆ ದೇಶಗಳ 19 ಲಕ್ಷಕ್ಕೂ ಹೆಚ್ಚು ಜನರಿಗೆ ಯೋಗ ಶಿಕ್ಷಣ ನೀಡಿದ್ದಾರೆ. 6900 ಜನರಿಗೆ ಯೋಗ ಶಿಕ್ಷಕ ತರಬೇತಿ ಹಾಗೂ 3730 ಜನರನ್ನು ರೇಖೀ ಗುರುಗಳನ್ನಾಗಿ ಗುರೂಜಿ ತಯಾರಿ ಮಾಡಿದ್ದಾರೆ. ಅಲ್ಲದೇ ಗುರೂಜಿ ಬಸವರಾಜ ಹಡಗಲಿ ಇಲ್ಲಿಯವರೆಗೆ ಕನ್ನಡ ಮರಾಠಿ, ಹಿಂದಿ ಭಾಷೆಗಳಲ್ಲಿ ಯೋಗ ಜೀವನ, ಪ್ರಾಣಾಯಾಮ ಧ್ಯಾನ, ಹೀಲಿಂಗ್‌ ಕುರಿತು 16 ಗ್ರಂಥಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next