ದಾವಣಗೆರೆ: ನಾಳೆ (ಜೂ.21) ನಡೆಯುವ ಮೂರನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಜಿಲ್ಲಾ ಯೋಗ ಒಕ್ಕೂಟದ ಪದಾಧಿಕಾರಿಗಳು 10.5 ಕಿಲೋ ಮೀಟರ್ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸಿದರು.
ಯೋಗ ದಿನಾಚರಣೆಯ ಪ್ರಮುಖ ವೇದಿಕೆ ಕಾರ್ಯಕ್ರಮ ನಡೆಯುವ ಮೋತಿ ವೀರಪ್ಪ ಕಾಲೇಜು ಮೈದಾನದಿಂದ ಪ್ರಾರಂಭವಾದ ಸೈಕಲ್ ಜಾಥಾ ಚಿಗಟೇರಿ ಆಸ್ಪತ್ರೆ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಮಹಾತ್ಮಗಾಂಧಿ ವೃತ್ತ, ಮಂಡಿಪೇಟೆ, ಕೆ.ಆರ್. ಮಾರ್ಕೆಟ್ ರಸ್ತೆ, ದುರ್ಗಾಂಬಿಕಾ ದೇವಸ್ಥಾನ, ಕಾಯಿಪೇಟೆ, ವಸಂತ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ವಿನೋಬ ನಗರ 2ನೇ ಮುಖ್ಯ ರಸ್ತೆ, ರಾಂ ಅಂಡ್ ಕೋ ವೃತ್ತದ ಮೂಲಕ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು.
ಇಂಧನ ಉಳಿಸಿ… ಆರೋಗ್ಯ ಬೆಳೆಸಿ… ಎಂಬ ಘೋಷಣೆಯೊಂದಿಗೆ ಸಾಗಿದ ಜಾಥಾ ಪರಿಸರಹಾನಿಗೆ ಕಾರಣವಾಗುವ ಇಂಧನ ಬಳಕೆ ನಿಲ್ಲಿಸಬೇಕು. ಆರೋಗ್ಯ ಬೆಳವಣಿಗೆಗೆ ಪೂರಕವಾದ ಯೋಗ ಮಾಡಬೇಕು ಎಂದು ಮನವಿ ಮಾಡಲಾಯಿತು. ಜಾಥಾಕ್ಕೆ ಚಾಲನೆ ನೀಡಿ, ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಸೈಕಲ್ ಬಳಕೆಯಿಂದ ಸಾಕಷ್ಟು ವ್ಯಾಯಾಮ ಮಾಡಿದಂತಾಗುತ್ತದೆ.
ಇದು ಆರೋಗ್ಯಕ್ಕೆ ಹೆಚ್ಚು ಸಹಕಾರಿ. ಸೈಕಲ್ ಬಳಕೆ ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆಯಲ್ಲದೆ, ಪರಿಸರ ಮಾಲಿನ್ಯ ತಡೆಗಟ್ಟಬಹುದು ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಸೈಕಲ್ ಪಾಥ್ ನಿರ್ಮಾಣಕ್ಕೆ ಮನವಿ ಇದೆ. ಹಳೆ ಪಿಬಿ ರಸ್ತೆಯಲ್ಲಿ ಸೈಕಲ್ ಪಾಥ್ ನಿರ್ಮಾಣ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿ, ಶ್ರೀಮಂತರು ಬೊಜ್ಜು ಇಳಿಸಿಕೊಳ್ಳುವ ಕಾರಣಕ್ಕೆ ಸೈಕಲ್ ತುಳಿದರೆ, ಬಡವರು ದುಡಿಮೆಗಾಗಿ ಸೈಕಲ್ ಬಳಸುತ್ತಾರೆ. ಸೈಕಲ್ ತುಳಿಯುವುದರಿಂದ ಆರೋಗ್ಯ ಸದೃಢತೆಗೆ ಸಹಕಾರಿಯಾಗಲಿದೆ. ಇಂಧನ ಉಳಿಸಿದಂತಾಗುತ್ತದೆ ಎಂದರು. ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ವಾಸುದೇವ ರಾಯ್ಕರ್, ರಾಜು ಬದ್ಧಿ, ಪ್ರಭು, ಪ್ರಕಾಶ್, ತೀರ್ಥರಾಜ್ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ| ಯು. ಸಿದ್ದೇಶ್ ಇತರರು ಇದ್ದರು.