Advertisement

21ರಂದು ಜಿಲ್ಲಾಡಳಿತದಿಂದ ಯೋಗ ದಿನಾಚರಣೆ

01:24 PM Jun 15, 2019 | Team Udayavani |

ಧಾರವಾಡ: ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್‌ ಇಲಾಖೆ ಹಾಗೂ ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜೂ. 20ರಂದು ಯೋಗ ಜಾಗೃತಿ ನಡಿಗೆ ಹಾಗೂ 21ರಂದು ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಗ ಜಾಗೃತಿ ನಡಿಗೆ ಹಾಗೂ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ನಗರದ ಶಾಲಾ-ಕಾಲೇಜು, ಸರ್ಕಾರಿ ಹಾಸ್ಟೆಲ್ಗಳ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಳೆಗಾಲ ಆರಂಭವಾಗಿರುವುದರಿಂದ ಒಳಾಂಗಣ ಕ್ರೀಡಾಂಗಣವನ್ನೂ ಮುನ್ನೆಚ್ಚರಿಕೆಯಾಗಿ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಉಪಾಹಾರ, ಕುಡಿಯುವ ನೀರು ಮತ್ತಿತರ ಮೂಲ ೌಕರ್ಯ ಕಲ್ಪಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಸಂಗಮೇಶ ಕಲಹಾಳ ಮಾತನಾಡಿ, 20ರಂದು ಬೆಳಗ್ಗೆ 8 ಗಂಟೆಗೆ ಡಾ| ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಿಂದ ಯೋಗ ಜಾಗೃತಿ ನಡಿಗೆ ಆರಂಭವಾಗಲಿದೆ. ಜ್ಯುಬಿಲಿ ವೃತ್ತ, ಮಹಾನಗರಪಾಲಿಕೆ, ಜಿಲ್ಲಾಸ್ಪತ್ರೆ, ಜಿಲ್ಲಾ ಆಯುರ್ವೇದ ಆಸ್ಪತ್ರೆ, ಕೊಂಡವಾಡ ಓಣಿ, ವಿಜಯಾ ರಸ್ತೆ, ಸಿಬಿಟಿ, ಸ್ವಾಮಿ ವಿವೇಕಾನಂದ ವೃತ್ತ, ಹಳೆ ಬಸ್‌ ನಿಲ್ದಾಣ ಮಾರ್ಗಗಳಲ್ಲಿ ಸಂಚರಿಸಿ ಪುನಃ ಕ್ರೀಡಾಂಗಣ ತಲುಪಲಾಗುವುದು ಎಂದರು.

21ರಂದು ಬೆಳಗ್ಗೆ 6:45 ಗಂಟೆಗೆ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಬಳಿಕ ಬೆಳಗ್ಗೆ 7ರಿಂದ 8 ಗಂಟೆಯವರೆಗೆ ಯೋಗಾಭ್ಯಾಸ ಕಾರ್ಯಕ್ರಮ ಜರುಗಲಿದೆ. ಯೋಗಾಭ್ಯಾಸಕ್ಕೆ ಬರುವವರು ಸರಳವಾದ ಉಡುಪು ಧರಿಸಿ ಯೋಗಾ ಮ್ಯಾಟ್ ಅಥವಾ ಜಮಖಾನೆಯೊಂದಿಗೆ ಆಗಮಿಸಬೇಕು ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಜಿಪಂ ಸ್ವಚ್ಛಭಾರತ ಮಿಷನ್‌ ಸಹಾಯಕ ನಿರ್ದೇಶಕ ಗಿರೀಶ ಕೋರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಗಿ, ಡಾ| ವಿ.ಡಿ. ಕರ್ಪೂರಮಠ, ಜಿಲ್ಲಾ ಆಯುಷ್‌ ಫೆಡರೇಷನ್‌ ಅಧ್ಯಕ್ಷ ಡಾ| ರವೀಂದ್ರ, ಆಯುಷ್‌ ಇಲಾಖೆ ಸಹಾಯಕ ಆಡಳಿತಾಧಿಕಾರಿ ಅಶೋಕ ಇನ್ನಿತರರಿದ್ದರು.

ಇಂದಿನಿಂದ ಕೆಎಲ್ಇ ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ಶಿಬಿರ:

 ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಕೆಎಲ್ಇ ಸಂಸ್ಥೆಯ ಎಲ್ಲ ಶೈಕ್ಷಣಿಕ ಕೇಂದ್ರಗಳಲ್ಲಿ ಜೂ. 15ರಿಂದ 21ರ ವರೆಗೆ ವಿಶೇಷ ಯೋಗ ಶಿಬಿರ ನಡೆಯಲಿದೆ. ಬೆಳಗಾವಿ, ಧಾರವಾಡ, ಗದಗ ಹಾವೇರಿ ಜಿಲ್ಲೆಗಳಲ್ಲಿರುವ ಶಿಕ್ಷಣ ಕೇಂದ್ರಗಳಲ್ಲಿ ಈ ಶಿಬಿರ ನಡೆಯಲಿದ್ದು, ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳುವರು. ಡಾ| ಎಂ. ಈಶ್ವರ, ಡಾ| ಜೆ.ವೈ. ಕದಂ, ಶ್ರೀಧರ, ಡಾ| ಪ್ರಕಾಶ ಖಾನಗೌಡ್ರ ಅವರು ಯೋಗಾಸನ, ಸಾತ್ವಿಕ ಆಹಾರ, ಅತೀಂದ್ರಿಯ ಧ್ಯಾನ ಹಾಗೂ ಪ್ರಾಣಾಯಾಮ ತಿಳಿಸಿಕೊಡುವರು ಎಂದು ಸಂಯೋಜಕ ಪ್ರೊ| ವೀರೇಶ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next