ಕಲಬುರಗಿ: ಮಣಿಪಾಲ ಮಿಡಿಯಾ ನೆಟವರ್ಕ್ ಲಿಮಿಟೆಡ್ ನ ಉದಯವಾಣಿ ದಿನಪತ್ರಿಕೆಯು ಸಮಾಧಾನದ ಶ್ರೀ ಗುರುದೇವ ಸೇವಾ ಸಂಸ್ಥೆ ಹಾಗೂ ಧರ್ಮಸಿಂಗ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯೋಗ ಪ್ರದರ್ಶನ ಹಾಗೂ ಯೋಗ ಸ್ಪರ್ಧೆಯ ಯೋಗೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.
ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತದನಂತರ ಸಸಿಗೆ ನೀರು ಹಾಕುವ ಮುಖಾಂತರ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್ ಯುಗೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಡಾ. ಅಜಯಸಿಂಗ್, ಯೋಗವು ಆಗೊಮ್ಮೆ- ಈಗೊಮ್ಮೆ ಅದರಲ್ಲೂ ಯೋಗ ದಿನಾಚರಣೆ ಬಂದಾಗ ಯೋಗ ಮಾಡದೇ ನಿತ್ಯ ಅಭ್ಯಾಸವಾಗಬೇಕು ಎಂದರು.
ಇದನ್ನೂ ಓದಿ:ವಿಜಯಪುರ: ನಗರದಲ್ಲಿ ಹತ್ತು ಸಾವಿರ ಜನರಿಂದ ಯೋಗ ಶಿಬಿರ: ಯೋಗೇಶ್ವರಿ ಮಾತಾಜಿ
ಪ್ರತಿದಿನ ಒಂದು ಗಂಟೆ ಯೋಗ ಮಾಡಿದರೆ ಉಳಿದ 23 ಗಂಟೆ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ದಿನಾಲು ಒಂದು ಗಂಟೆ ಯೋಗಾಭ್ಯಾಸ ರೂಢಿಸಿಕೊಳ್ಖಬೇಕೆಂದು ಡಾ. ಅಜಯಸಿಂಗ್ ಕರೆ ನೀಡಿದರು.
ಸಮಾಧಾನದ ಶ್ರೀ ಗುರುದೇವ ಸೇವಾ ಸಂಸ್ಥೆಯ ಭಕ್ತರಾದ ಎ.ಬಿ.ಪಾಟೀಲ್ ಬಮ್ಮನಳ್ಳಿ ಅವರು ಪ್ರಾಸ್ತಾವಿಕ ಮಾತನಾಡಿ, ಆರೋಗ್ಯ ವೇ ಭಾಗ್ಯವಾಗಿದೆ. ಬೇಕಾದನ್ನು ಗಳಿಸಬಹುದು. ಆದರೆ ಆರೋಗ್ಯ ಭಾಗ್ಯ ಪಡೆಯುವುದು ಸುಲಭವಾದುದ್ದಲ್ಲ. ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ಬಾಮಿಗಳವರು ಧ್ಯಾನ ಹಾಗೂ ಮೌನಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಯೋಗವೂ ಇದಕ್ಕೆ ಪೂರಕವಾಗಿದೆ ಎಂದು ವಿವರಣೆ ನೀಡಿದರು.
ಸಮಾಧಾನ ಭಕ್ತರಾದ ಬಸವರಾಜ ಖಂಡೇರಾವ್, ಜಿ.ಎಚ್. ಪಾಟೀಲ್, ಸಂಗಪ್ಪ ಪತಂಗೆ, ಖ್ಯಾತ ವೈದ್ಯರಾದ ಡಾ. ವೀರಭದ್ರಪ್ಪ, ಡಾ. ವಿಶ್ವನಾಥ ರೆಡ್ಡಿ, ಹಣಮಂತ ಭೂಸನೂರ, ಉದಯವಾಣಿ ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ನಾಗಶೆಟ್ಟಿ ಡಾಕುಳಗಿ, ವರದಿಗಾರ ಸೂರ್ಯಕಾಂತ ಜಮಾದಾರ ಸೇರಿದಂತೆ ಮುಂತಾದವರಿದ್ದರು.
ಯೋಗ ಶಿಕ್ಷಕರಾದ ಲಕ್ಷ್ಮಣ ಚವ್ಹಾಣ, ಪ್ರಕಾಶ ದೇಗಲಮಡಿ, ಮಂಜುನಾಥ ಜುಮುನಾಳಮಠ, ನಾಗರಾಜ ಯೋಗಿ, ಡಾ.ಸ್ವಾತಿ ಯೋಗಾ ಸ್ಪರ್ಧೆಯನ್ನು ನಿರ್ವಹಿಸಿದರು.
ಉದಯವಾಣಿ ಹಿರಿಯ ವರದಿಗಾರ ಹಣಮಂತರಾವ ಭೈರಾಮಡಗಿ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ ನಿರೂಪಿಸಿದರು. ಯೋಗ ಸ್ಪರ್ಧೆಯಲ್ಲಿ ಕಲಬುರಗಿ ನಗರವಲ್ಲದೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲದೇ ನೆರೆಯ ಬೀದರ್, ಯಾದಗಿರಿ ಜಿಲ್ಲೆಯಿಂದಲೂ ಯೋಗಸ್ಪರ್ಧಿಗಳು ಪಾಲ್ಗೊಂಡಿದ್ದರು. ಶಾಸಕ ಡಾ.ಅಜಯಸಿಂಗ್ ಆರಂಭದಲ್ಲಿ ಯೋಗಾಸನದಲ್ಲಿ ಪಾಲ್ಗೊಂಡು ಯೋಗೋತ್ಸವಕ್ಕೆ ಹುರಿದುಂಬಿಸಿದರು.