ಚಿಕ್ಕೋಡಿ: ಯೋಗಕ್ಕೆ ಕ್ರೀಡೆಯ ರೂಪ ಕೊಟ್ಟು ರಾಜ್ಯದ ಮೂಲೆ ಮೂಲೆಗಳಲ್ಲಿ ಯೋಗದ ಬಗ್ಗೆ ಮಾಹಿತಿ ನೀಡಿ ದೇಶದ ಯುವಕರು ಆರೋಗ್ಯದಿಂದಿರಲು ಜಾಗೃತಿ ಮೂಡಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಮೇಚೂರ ಯೋಗ ನ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಗಂಗಾಧರಪ್ಪ ಹೇಳಿದರು.
ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿ ಮುರುಘೇಂದ್ರ ವಸತಿ ಶಾಲೆಯಲ್ಲಿ 38ನೇ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಮತ್ತು 7ನೇ ರಾಜ್ಯ ಶಾಲಾ ಮತ್ತು ಕಾಲೇಜು ಯೋಗಾಸನ ಚಾಂಪಿಯನ್‌ಶಿಪ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಅಮೆಚೂರ್ ಯೋಗ ನ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೂರನೇ ಬಾರಿಗೆ ಈ ಚಾಂಪಿಯನ್ ಶಿಪ್ ನಡೆಯುತ್ತಿದೆ. ಕಳೆದ 38 ವರ್ಷದಲ್ಲಿ ಅನೇಕ ಯೋಗಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಅಮೆಚೂರ್ ಯೋಗ ನ್ಪೋರ್ಟ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಎಂ.ಜಿ.ಅಮರನಾಥ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಯೋಗ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 600 ಜನ ಯೋಗಪಟುಗಳು ಬಂದಿದ್ದು, ಇಲ್ಲಿ ಆಯ್ಕೆಯಾದ ಯೋಗಪಟು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿಂಚಣಿ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಯೋಗದಿಂದ ದೇಹ ಮತ್ತು ಮನಸ್ಸು ಪರಿಶುದ್ಧವಾಗುತ್ತದೆ. ಆ ದಿಸೆಯಲ್ಲಿ ಪ್ರತಿ ಮಗು ಕೂಡಾ ಯೋಗ ಮಾಡಬೇಕು. ಯೋಗ ಸಾರ್ವತ್ರಿಕವಾದರೆ ಈ ನಾಡಿನಲ್ಲಿ ಇರುವ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ರತಿಯೊಬ್ಬರ ಅಂತರಂಗ ಮತ್ತು ಬಹಿರಂಗ ಸೌಂದರ್ಯಕ್ಕೆ ಯೋಗ ಅವಶ್ಯಕವಾಗಿದೆ ಎಂದರು.
ಚಿಕ್ಕೋಡಿ ಚರಮೂರ್ತಿಮಠದ ಶ್ರೀ ಸಂಪಾದನಾ ಸ್ವಾಮೀಜಿ, ಧರ್ಮಸ್ಥಳದ ಡಾ. ಶಶಿಕಾಂತ ಜೈನ್, ಕೃಷ್ಣಮೂರ್ತಿ ಮಾತನಾಡಿದರು. ಕುಪ್ಪಾನವಾಡಿ ಮುರಗೇಂದ್ರ ವಸತಿ ಶಾಲೆಯ ಅಧ್ಯಕ್ಷ ಕೆ.ಪಿ.ಧರಿಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುತ್ತಿಗೆದಾರ ಸೋಮು ಪಾಟೀಲ ವಂದಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಯೋಗ ಪಟುಗಳಾದ ಗಾನಶ್ರೀ, ಖುಷಿ ಎಚ್. ಮೈಸೂರ, ಸಂಧ್ಯಾ ಎಂ.ಎಸ್. ಮತ್ತು ಇತರರು ಯೋಗ ಪ್ರದರ್ಶನ ನೀಡಿದರು.