Advertisement

ಒತ್ತಡ ನಿವಾರಣೆಗೆ ಪ್ರೊ ಕಬಡ್ಡಿ ಆಟಗಾರರಿಂದ ಯೋಗ, ಧ್ಯಾನ

02:17 PM Aug 29, 2017 | |

ಮುಂಬೈ: ಫಿಟ್ನೆಸ್ ಕಾಯ್ದುಕೊಳ್ಳಲು ಕಬಡ್ಡಿ ಆಟಗಾರರು ಜಿಮ್‌ನಲ್ಲಿ ಗಂಟೆಗಟ್ಟಲೇ ಬೆವರಿಳಿಸುತ್ತಾರೆ. ಆದರೆ ಪಂದ್ಯದ ಸಂದರ್ಭದಲ್ಲಿ ಒತ್ತಡವನ್ನು ನಿಭಾಯಿಸುವುದು ಹೇಗೆ? ಏಕಾಗ್ರತೆ ಕಂಡುಕೊಳ್ಳುವುದು ಹೇಗೆ? ಮಾನಸಿಕವಾಗಿ ಧೈರ್ಯ ಕಂಡುಕೊಳ್ಳುವುದು ಹೇಗೆ? ಅನ್ನುವುದಕ್ಕೆ
ಕಬಡ್ಡಿಪಟುಗಳು ಯೋಗ, ಧ್ಯಾನದ ಮೊರೆ ಹೋಗಿದ್ದಾರೆ!

Advertisement

ಆವೃತ್ತಿಯಿಂದ ಆವೃತ್ತಿಗೆ ಪ್ರೊ ಕಬಡ್ಡಿ ರೋಚಕತೆ ಪಡೆಯುತ್ತಿದೆ. ಸ್ಪರ್ಧೆಯೂ ಹೆಚ್ಚಾ ಗುತ್ತಿದೆ. 5ನೇ ಆವೃತ್ತಿಯ ಅವಧಿಯೂ ದೀರ್ಘಾ ವಧಿಯಾಗಿದೆ.
ಹೀಗಾಗಿ ಆಟಗಾರರಿಗೆ ಫಿಟ್ನೆಸ್ ಕಾಯ್ದುಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಇದು ಆಟಗಾರರ ಮಾನಸಿಕ ಒತ್ತಡ ಹೆಚ್ಚಿಸಿದೆ. ಸುದೀರ್ಘ‌ ಕೂಟದಿಂದ ಆಟದಲ್ಲಿ ಏಕಾಗ್ರತೆ,  ಧೈರ್ಯ ಕುಸಿಯುವ ಸಾಧ್ಯತೆಯಿದೆ. ಇದಕ್ಕೆಲ್ಲ ಪರಿಹಾರ ರೂಪದಲ್ಲಿ ಕಂಡು ಬಂದಿರುವುದು ಯೋಗ, ಧ್ಯಾನ. ಇದನ್ನು ಮುಂಚಿತವಾಗಿ ಅರಿತ ಎಲ್ಲಾ ಫ್ರಾಂಚೈಸಿಗಳು ಪ್ರೊ ಕಬಡ್ಡಿಯ 5ನೇ ಆವೃತ್ತಿ ಆರಂಭಕ್ಕೂ ಮುನ್ನ ಆಟಗಾರರಿಗೆ ಯೋಗ, ಧ್ಯಾನ, ಪ್ರಾಣಾಯಾಮದ ಬಗ್ಗೆ ಕಾರ್ಯಾಗಾರ ನಡೆಸಿದ್ದಾರೆ. ಕಬಡ್ಡಿಪಟುಗಳು ಯೋಗದ ಕೆಲವು ಆಸನಗಳನ್ನು ಮಾಡುತ್ತಿದ್ದಾರೆ. ಏಕಾಗ್ರತೆಗಾಗಿ ಬೆಳಗ್ಗೆ, ಸಂಜೆ ಧ್ಯಾನದಲ್ಲಿ ಮಗ್ನರಾಗುತ್ತಿದ್ದಾರೆ. ಆಟಗಾರರಿಗೆ ಯೋಗ, ಧ್ಯಾನ, ಪ್ರಾಣಾ ಯಾಮ ಕಡ್ಡಾಯವಲ್ಲ. ಆದರೆ ಹಲವು ಆಟಗಾರರು ಸ್ವ ಇಚ್ಛೆಯಿಂದ ಮಾಡುತ್ತಿದ್ದಾರೆ. 

ಮುಂಜಾನೆ 4 ಗಂಟೆಗೆ ಧ್ಯಾನ: ಬೆಳಗ್ಗೆ 4 ಗಂಟೆಗೆ  ಎದ್ದೇಳುತ್ತಾರೆ. ಸಹ ಆಟಗಾರರ ಜತೆ ಕಬಡ್ಡಿ ಅಭ್ಯಾಸ ನಡೆಸುತ್ತಾರೆ. ಆ ನಂತರ ಆಟಗಾರರೆಲ್ಲ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ನಂತರ ಕೆಲವರು ಯೋಗ, ಧ್ಯಾನ ಮಾಡುತ್ತಾರೆ. ಕೆಲವರು ವಾರಕ್ಕೆ ಒಮ್ಮೆ ಧ್ಯಾನ ರೂಢಿಸಿ ಕೊಂಡಿದ್ದಾರೆ.

ಧ್ಯಾನದಿಂದ ಏನು ಪ್ರಯೋಜನ?: ಸ್ವತಃ ಆಟಗಾರರು, ಕೋಚ್‌ಗಳು ಹೇಳುವ ಪ್ರಕಾರ ಎಲ್ಲವೂ ಯೋಗ, ಧ್ಯಾನ, ಪ್ರಾಣಾಯಾಮದಿಂದ ಆಗುತ್ತಿದೆ ಎಂದಲ್ಲ. ಆದರೆ ಪಂದ್ಯದ ಸಂದರ್ಭ ದಲ್ಲಿ ಏಕಾಗ್ರತೆ ಸಿಗುತ್ತಿದೆ. ಅದೆಲ್ಲದಕ್ಕಿಂತಲೂ ಹೆಚ್ಚಿನದಾಗಿ ಮಾನಸಿಕ ಧೈರ್ಯ ಬರುತ್ತಿದೆ. ಯಾವ
ಸಂದರ್ಭದಲ್ಲಿಯೂ ತಾಳ್ಮೆ ಕಳೆದು ಕೊಳ್ಳದಂತೆ , ಒತ್ತಡಕ್ಕೆ ಒಳ ಗಾಗದೇ ಆಡುವ ಕೌಶಲ್ಯ ಬರುತ್ತಿದೆ. ಸೋಲುವ ಹಂತದಲ್ಲಿದ್ದರೂ ಆತಂಕದಿಂದ ದೂರ ಇರುವಲ್ಲಿ ಸಹಾಯ ಮಾಡುತ್ತಿದೆ. 

ದಿನಕ್ಕೆ 4 ಲೀ. ಹಾಲು, ಮೊಟ್ಟೆ, ಡ್ರೈಪ್ರೂಟ್ಸ್ ಸೇವನೆ ಫಿಟ್ನೆಸ್ ಕಾಯ್ದುಕೊಳ್ಳಲು ತಿನ್ನುವ ಆಹಾರವೂ ಮುಖ್ಯ. ಹೀಗಾಗಿ ಹಾಲು ಸೇವನೆ ಎಲ್ಲಾ ತಂಡದಲ್ಲಿಯೂ ಆಟಗಾರರಿಗೆ ಕಡ್ಡಾಯ. ಬಹುತೇಕ ಆಟಗಾರರು ಪ್ರತಿದಿನ 2 ರಿಂದ 4 ಲೀ.ಹಾಲು ಸೇವಿಸುತ್ತಾರೆ. ಬೆಳಗ್ಗೆ ತಿಂಡಿಯ ನಂತರ ಮತ್ತು ಸಂಜೆ ಊಟದ ನಂತರ ಹಾಲು ಸೇವಿಸುತ್ತಾರೆ. ಹಾಲು ಸೇವಿಸದವರು ಹಣ್ಣು, ಡ್ರೈಪ್ರೂಟ್ಸ್ಗಳನ್ನು ತಿನ್ನುತ್ತಾರೆ..

Advertisement

ಫಿಟ್ನೆಸ್ಗಾಗಿ ಮಿತವಾದ ಆಹಾರ: ಉಳಿದಂತೆ ಫಿಟ್ನೆಸ್ಗಾಗಿ ಆಟಗಾರರು ಮಿತವಾದ ಆಹಾರ ಸೇವಿಸಬೇಕು. ಸಕ್ಕರೆ ಸೇರಿದಂತೆ ಸಿಹಿ ಪದಾರ್ಥದಿಂದ ದೂರ ಇರಬೇಕು. ಮಸಾಲೆ ಪದಾರ್ಥಗಳನ್ನು ಹೆಚ್ಚಿನದಾಗಿ ಸೇವಿಸುವಂತಿಲ್ಲ. ಹಣ್ಣು, ಡ್ರೈಫ್ರುಟ್ಸ್‌ ಸೇವನೆ ಇರುತ್ತದೆ. ಮಾಂಸ ಆಹಾರ ಸಾಮಾನ್ಯ. ಆದರೆ ಪಂದ್ಯ ಇರುವ ದಿನ ಮಾಂಸ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತಿಲ್ಲ. ಕೋಳಿ ಮೊಟ್ಟೆ ಕಡ್ಡಾಯವೆಂದು ಆಟಗಾರರಿಗೆ ಕೋಚ್‌ಗಳು ತಿಳಿಸಿದ್ದಾರೆ.

ಯೋಗ ಮತ್ತು ಧ್ಯಾನ ಮಾಡಲು ಸೂಚನೆ ನೀಡಿದ್ದಾರೆ. ಆದರೆ ಅದು ಕಡ್ಡಾಯವಲ್ಲ. ಆದರೂ ಹೆಚ್ಚಿನ ಆಟಗಾರರು ಮಾಡುತ್ತಾರೆ. ನಾನು ಪ್ರತಿದಿನ ತಪ್ಪದೇ ಯೋಗ ಮತ್ತು ಧ್ಯಾನ ಮಾಡುತ್ತೇನೆ. ಇದು ನನಗೆ ಏಕಾಗ್ರತೆ ಮತ್ತು ತಾಳ್ಮೆಯನ್ನು ಕಲಿಸಿದೆ. ಕಬಡ್ಡಿಯಲ್ಲಿ ನನ್ನ ಸಾಧನೆಯ ಹಿಂದೆ
ಯೋಗ ಮತ್ತು ಧ್ಯಾನವಿದೆ.

ರಿಷಾಂಕ್‌ ದೇವಾಡಿಗ, ಯೋಧಾ ರೈಡರ್‌

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next