Advertisement

ಹೀಗಿರಲಿ ತಾಯಂದಿರ ನವ ಮಾಸದ ಪಯಣ : ಆಹಾರ, ಯೋಗಾಭ್ಯಾಸ

02:15 PM Apr 14, 2021 | Team Udayavani |

ಐರ್ಲೆಂಡ್‌ ದೇಶಾದ್ಯಂತ ಇತ್ತೀಚೆಗಷ್ಟೇ  ತಾಯಂದಿರ ದಿನವನ್ನು ಆಚರಿಸಲಾಯಿತು.  ತಾಯ್ತನ ಎನ್ನುವುದು ಪ್ರತಿಯೊಂದು ಹೆಣ್ಣಿಗೂ ವಿಶೇಷ ಅನುಭೂತಿ ಕೊಡುವಂಥದ್ದು. 9 ತಿಂಗಳ ಸುದೀರ್ಘ‌ ಪಯಣದಲ್ಲಿ ನೂರಾರು ಗೊಂದಲಗಳು  ಮೂಡುವುದು ಸಹಜ. ಗರ್ಭಿಣಿಯಾದಾಗ ಏನು ಮಾಡಬಹುದು ಎನ್ನುವುದನ್ನು ಆಯುರ್ವೇದ ಮತ್ತು  ಯೋಗಶಾಸ್ತ್ರಗಳು ಹೀಗೆ ತಿಳಿಸಿವೆ.

Advertisement

ಸೌಮನ್ಯಸಂ ಗರ್ಭಧಾರಣಾನಂ ಶ್ರೇಷ್ಠ ಎನ್ನುತ್ತಾರೆ ಆಯುರ್ವೇದ ಆಚಾರ್ಯರು. ಅಂದರೆ ಬೇರೆ ಎಲ್ಲ ಅಂಶಗಳಿಗಿಂತಲೂ ತಾಯಿಯಾಗಲು ಒಂದು ಹೆಣ್ಣು ಸುಂದರ ಮನಸ್ಸು ಹೊಂದಿರುವುದು ಬಹುಮುಖ್ಯ ಎಂದರ್ಥ. ಸೇವಿಸುವ ಆಹಾರದಿಂದ ಬೆಳೆಯುತ್ತಿರುವ ಗರ್ಭದ ಪೋಷಣೆ ಮಾತ್ರವಲ್ಲ  ತಾಯಿಯ ಶಾರೀರಿಕ ಪೋಷಣೆಯೂ ಆಗುತ್ತದೆ. ಹೀಗಾಗಿ ಸರಿಯಾದ ಆಹಾರ ರಕ್ತ, ಧಾತು, ಮಾಂಸ, ಮೂಳೆಗಳ ಪೋಷಣೆ ಮಾಡುವುದು ಮಾತ್ರವಲ್ಲ ಔಷಧದಂತೆಯೂ ಕೆಲಸ ಮಾಡುತ್ತದೆ. ಇದಕ್ಕಾಗಿ ಆಯುರ್ವೇದ ಶಾಸ್ತ್ರದಲ್ಲಿ ಪ್ರತಿಯೊಂದು ಮಾಸದಲ್ಲಿ ಯಾವ ರೀತಿಯ ಆಹಾರ ಸೇವನೆ ಅಗತ್ಯ ಎಂಬುದನ್ನು ಹೇಳುತ್ತದೆ.

ಮೊದಲನೇ ಮಾಸದಲ್ಲಿ ಜೇಷ್ಠ ಮಧು, ಚಂದನದೊಂದಿಗೆ ಸಿದ್ಧಪಡಿಸಿದ ತಣ್ಣನೆಯ ಹಾಲು, ದ್ರವ ಆಹಾರ ಸೇವಿಸಬಹುದು. ಎರಡನೇ ಮಾಸದಲ್ಲಿ ಸಕ್ಕರೆಯ ಜತೆಗೆ ತಣ್ಣನೆಯ ಹಾಲು, ಎಳನೀರು, ಹಣ್ಣಿನ ರಸ, ಗಂಜಿಯನ್ನು ಸೇವಿಸಬಹುದು. ಆದರೆ ಹುಳಿ ಪದಾರ್ಥಗಳೊಂದಿಗೆ ಅನಾನಸ್‌, ಪಪ್ಪಾಯ, ಕಬ್ಬಿನ ರಸವನ್ನು ವರ್ಜಿಸುವುದು ಉತ್ತಮ.

ಮೂರನೇ ಮಾಸದಲ್ಲಿ ತುಪ್ಪ, ಹಾಲು, ಜೇನು ತುಪ್ಪದೊಂದಿಗೆ ಅನ್ನವನ್ನು ಮಿಶ್ರ ಮಾಡಿ ಸೇವಿಸಬಹುದು. ಆದರೆ ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ ತುಪ್ಪ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಕೂಡದು. ಇದಲ್ಲದೇ ಎರಡನೇ ಮಾಸದಲ್ಲಿ  ಹೇಳಿರುವ ಹಣ್ಣುಗಳ ಸೇವನ ಕ್ರಮವನ್ನು ಪಾಲಿಸಬಹುದು.

ನಾಲ್ಕನೇ ಮಾಸದಲ್ಲಿ ಬೆಣ್ಣೆ, ಮೊಸರನ್ನ, ಎಳೆನೀರು, ಹಣ್ಣಿನ ರಸ ಅದರಲ್ಲೂ ಹೃದ್ಯ ಹಣ್ಣುಗಳಾದ ಮಾವಿನಕಾಯಿ, ಬದರ, ದಾಳಿಂಬೆ, ತರಕಾರಿಗಳಾದ ಕುಂಬಳಕಾಯಿ, ಬೂದುಕುಂಬಳಕಾಯಿ, ಸೋರೆಕಾಯಿ ಇತ್ಯಾದಿಗಳನ್ನು ಸೇವಿಸಬಹುದು. ಮಾಂಸವನ್ನು ಸೇವಿಸುವವರು ಮೀಟ್‌ ಸೂಪ್‌ ಮತ್ತು ಕೋಳಿ ಮಾಂಸವನ್ನು ಸೇವಿಸಬಹುದು.

Advertisement

5ನೇ ತಿಂಗಳಲ್ಲಿ ಹಾಲು, ಬೆಣ್ಣೆ, ಅಕ್ಕಿ ಹಾಲು, ತುಪ್ಪ, ಮಾಂಸವರ್ಧಕ ಆಹಾರಗಳಾದ ಮೀಟ್‌ ಸೂಪ್‌, ಉದ್ದಿನ ಬೇಳೆ ಉಪಯೋಗಿಸಿ ಮಾಡಿದ ಆಹಾರ, ರಕ್ತವರ್ಧಕ ಆಹಾರ ಅಂದರೆ ದಾಳಿಂಬೆ, ಸಪೋಟ, ಸೇಬು, ಪಾಲಕ್‌, ಬೀಟ್‌ರೂಟ್‌, ಪಾಲಕ್‌, ಸೀಬೆ ಹಣ್ಣು, ಬೆಟ್ಟದ ನೆಲ್ಲಿಕಾಯಿ ಇತ್ಯಾದಿಗಳನ್ನು ಸೇವಿಸಬಹುದು.

6ನೇ ಮಾಸದಲ್ಲಿ ತುಪ್ಪ ಅನ್ನ, ಅನ್ನದ ಗಂಜಿ, ಗೋ ಕ್ಷೀರದೊಂದಿಗೆ ಸಿದ್ಧಪಡಿಸಿದ ತುಪ್ಪ, ಬಲ್ಯ ಮತ್ತು ವರ್ಣ ಮೂಲಿಕೆಗಳು ಸೇವಿಸಬಹುದು.  7ನೇ ಮಾಸದಲ್ಲಿ ಅತಿಯಾಗಿ ಉಪ್ಪು ಮತ್ತು ನೀರನ್ನು ಸೇವಿಸಬಾರದು. ನವೆಯಂಥ ತೊಂದರೆಗಳಿದ್ದರೆ ಮಜ್ಜಿಗೆಯ ಜತೆಗೆ ಬದರು ಕಷಾಯ ಸೇವನೆ ಉತ್ತಮ.  8ನೇ ಮಾಸದಲ್ಲಿ ಬಾರ್ಲಿ ಮತ್ತು ಹಾಲಿನ ಮಿಶ್ರಣವನ್ನು ಸೇವಿಸಬಹುದು. ಲೋದ್ರಮೂಲಿಕೆಯ ಪ್ರಯೋಗವನ್ನು ಮಾಡಬಹುದು. ಎಲ್ಲ ತಿಂಗಳೂ ಮತ್ತು ಕೊನೆಯ ತಿಂಗಳಿನಲ್ಲಿ  ಲಕ್ಷಣಗಳಿಗೆ ಅನುಗುಣವಾದ ಔಷಧ ಮೂಲಿಕೆಗಳ ಪ್ರಯೋಗವನ್ನು ಆಯುರ್ವೇದದಲ್ಲಿ  ಮಾಡಲಾಗುತ್ತದೆ.

 

-ಡಾ| ಮೇಘನಾ, ಡಬ್ಲಿನ್‌, ಐರ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next