Advertisement

ಯೋಗವೇ ಬೇರೆ, ವ್ಯಾಯಾಮವೇ ಬೇರೆ…

11:09 AM Jul 01, 2019 | keerthan |

ಯೋಗವೇ ಬೇರೆ, ವ್ಯಾಯಾಮವೇ ಬೇರೆ. ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಯೋಗವನ್ನು ವ್ಯಾಯಾಮದಂತೆ ಮಾಡಿಸುತ್ತಿದ್ದಾರೆ ಎನ್ನುತ್ತಾರೆ ಉಡುಪಿಯ ಹಿರಿಯ ಯೋಗ ಶಿಕ್ಷಕ ವಿಘ್ನೇಶ್ವರ ಮರಾಠೆ.

Advertisement

ಯೋಗ ಜನಪ್ರಿಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಅದರ ಮೂಲದ ನೆಲೆಯನ್ನು ಕೈಬಿಡುತ್ತಿರುವಂತೆ ಭಾಸವಾಗುತ್ತಿದೆ. ಈಗ ಯೋಗಾಭ್ಯಾಸವು ವ್ಯಾಯಾಮದ ತರಹ ಬೆಳವಣಿಗೆ ಹೊಂದುತ್ತಿದೆ ಎಂದು ಭಾಸವಾಗುತ್ತಿದೆ. ಯೋಗವೇ ಬೇರೆ, ವ್ಯಾಯಾಮವೇ ಬೇರೆ. ಯೋಗದಲ್ಲಿ ಶರೀರಕ್ಕೆ ಬಲ ಹಾಕಬಾರದು. ಪತಂಜಲಿಯು “ಸ್ಥಿರಂ ಸುಖಂ’ ಎಂದು ಹೇಳಿದ್ದಾನೆ. ಇದರರ್ಥ ಅಲ್ಲಾಡಬಾರದು, ಸುಖವಾಗಿರಬೇಕು. ಇನ್ನೊಂದು ಪ್ರಯತ್ನ ಶೈಥಿಲ್ಯ ಎಂಬ ಸೂತ್ರವಿದೆ. ಇಲ್ಲಿ ಪ್ರಯತ್ನ ಕೂಡದು, ಬಲ ಹಾಕಬಾರದು.

ಯೋಚನೆಗಳಾವುವೂ ಇರಬಾರದು. “ಅನಂತ’ವನ್ನು ಯೋಚಿಸುತ್ತಿರಬೇಕು. ಯೋಗ ಸ್ಟಾಟಿಕ್‌, ವ್ಯಾಯಾಮ ಡೈನಾಮಿಕ್‌. ಯೋಗದಿಂದ ಎನರ್ಜಿಯನ್ನು (ಶಕ್ತಿ) ಪಡೆಯುವುದು, ವ್ಯಾಯಾಮದಿಂದ ಎನರ್ಜಿಯನ್ನು ಕಳೆದುಕೊಳ್ಳುವುದು.

ಯೋಗದಿಂದ ದೇಹಕ್ಕೆ ಸಿಗುವ ಅವರ್ಣನೀಯ ಅನುಭವ ಯಾವತ್ತೂ ವ್ಯಾಯಾಮದಿಂದ ಸಿಗಲಾರದು. ಜಿಮ್‌ನಲ್ಲಿ ದೇಹ ದಂಡಿಸುವುದರಿಂದ ರನ್ನಿಂಗ್‌, ವಾಕಿಂಗ್‌ ಸಹಿತ ಯಾವುದೇ ವ್ಯಾಯಾಮಗಳು ಎಂದಿಗೂ ಯೋಗಕ್ಕೆ ಸಮನಾಗಲಾರವು. ಯೋಗಕ್ಕೆ ಇರುವ ಶಕ್ತಿಯೇ ಅಂತಹದ್ದು.

ಯೋಗ ಆರಂಭವಾದ ಮೂಲ ಉದ್ದೇಶವೇ ಆತ್ಮಸಾಕ್ಷಾತ್ಕಾರ. ಇದರ ಉಪ ಉತ್ಪನ್ನ (ಸೈಡ್‌ ಪ್ರಾಡಕ್ಟ್) ದೈಹಿಕ ಮತ್ತು ಮಾನಸಿಕ ಆರೋಗ್ಯ ಲಾಭ. ಯೋಗಾಸನದ ಬಳಿಕ ಸಮಾಧಿ ಸ್ಥಿತಿ ತಲುಪಬೇಕೆಂದಿದೆ. ಈಗ ಆತ್ಮಸಾಕ್ಷಾತ್ಕಾರ, ಸಮಾಧಿ ಸ್ಥಿತಿ ಯಾರಿಗೂ ಬೇಡವಾಗಿದೆ. ಈಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಾಭಕ್ಕಾಗಿ ಮಾತ್ರ ಯೋಗ ಬಳಕೆಯಲ್ಲಿದೆ.
ವೇದಗಳಲ್ಲಿ ಯೋಗದ ಪರಿಕಲ್ಪನೆ ಗಳಿವೆ. ವಾಸಿಷ್ಟ ಸಂಹಿತೆಯಲ್ಲಿ ಯೋಗದ ವಿಷಯಗಳಿವೆ. ವೇದ ಕಾಲದಲ್ಲಿ ಇದ್ದ ಪರಿಕಲ್ಪನೆ ಬಳಿಕ ಯೋಗ, ಆಧ್ಯಾತ್ಮಿಕ ಇತ್ಯಾದಿ ವಿಷಯಗಳು ಸೇರಿ ಸಂಗ್ರಹ ರೂಪದಲ್ಲಿ ಉಪನಿಷತ್ತುಗಳಾದವು. ಯೋಗದಲ್ಲಿ ಹಠಯೋಗ, ರಾಜ ಯೋಗ, ಭಕ್ತಿಯೋಗ, ಜ್ಞಾನ ಯೋಗ ಇತ್ಯಾದಿ ವಿಭಾಗಗಳಾದವು. ನಾವು ಈಗ ಮಾಡುತ್ತಿರುವ ಆಸನ, ಪ್ರಾಣಾಯಾಮಗಳು ರಾಜಯೋಗ ಮತ್ತು ಹಠಯೋಗದ ಪ್ರಕ್ರಿಯೆಗಳು. ಪತಂಜಲಿ ಯೋಗಸೂತ್ರದಲ್ಲಿ ರಾಜಯೋಗದ ಲಕ್ಷಣಗಳನ್ನು (ಕ್ಯಾರೆಕ್ಟರ್‌) ತಿಳಿಸಿದ್ದಾರೆ. ಇವುಗಳನ್ನು ಮಾಡುವ ಬಗೆಯನ್ನು ಹಠಯೋಗದಲ್ಲಿ ತಿಳಿಸಲಾಗಿದೆ. ಹಠಯೋಗವು ರಾಜಯೋಗಕ್ಕೆ ಬೆಂಬಲ ನೀಡುವಂಥದ್ದು.

Advertisement

ಶಿಕ್ಷಕರಾದ ಬಳಿಕ ಪದವೀಧರ!
ವಿಘ್ನೇಶ್ವರ ಮರಾಠೆ ಎಲ್ಲರಂತಲ್ಲ. ಪದವಿಗಳಿಸಿದ ಬಳಿಕ ಬೋಧಕರಾದದ್ದಲ್ಲ; ಬೋಧಕರಾದ ಬಳಿಕ ಪದವಿಗಳಿಸಿದ್ದು. ಮೂಲತಃ ಕಾರ್ಕಳ ತಾ| ಮಾಳದವರಾದ ಅವರು ಮೈಸೂರಿನ ಸರಕಾರಿ ಸಂಸ್ಕೃತ ಕಾಲೇಜಿನಲ್ಲಿ ಋಗ್ವೇದ ಘನಾಂತ ಅಧ್ಯಯನ ಮಾಡಿದರು. ಅದೇ ಕಾಲೇಜಿನಲ್ಲಿ 1960ರ ದಶಕದಲ್ಲಿ ಯೋಗ ವಿಭಾಗವಿತ್ತು. ಅಲ್ಲಿ ಯೋಗಾಭ್ಯಾಸ ಮಾಡಿದರು. ಆದರೆ ಪರೀಕ್ಷಾ ಪದ್ಧತಿ ಇದ್ದಿರಲಿಲ್ಲ. ಅಲ್ಲಿನ ಹಾಜರಾತಿ ಪ್ರಮಾಣಪತ್ರದ ಆಧಾರದಲ್ಲಿ ಮಣಿಪಾಲ ಕೆಎಂಸಿ ಯೋಗ ವಿಭಾಗಕ್ಕೆ ಶಿಕ್ಷಕರಾಗಿ ಸೇರಿದರು. 1995ರಲ್ಲಿ ತಾವೇ ಕಲಿಸುತ್ತಿದ್ದ ಸಂಸ್ಥೆ ಕೆಎಂಸಿ ಯೋಗ ವಿಭಾಗದ ಮೂಲಕವೇ ಪರೀಕ್ಷೆಗೆ ಬರೆದು ಪಾಸಾದರು. 30 ವರ್ಷ ಸೇವೆ ಸಲ್ಲಿಸಿ 2011ರಲ್ಲಿ ನಿವೃತ್ತರಾದರು. ಈಗ ಕೊಡವೂರು ಲಕ್ಷ್ಮೀನಗರದ ಗರಡೆಯಲ್ಲಿರುವ ಮನೆಯಲ್ಲಿ ಆಸಕ್ತರಿಗೆ ಯೋಗ ಕಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next