Advertisement

NRI: ವೈ.ಎಂ.ಸಿ ಟ್ರೋಫಿ -2023: ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಸಾಚಿ, ಹೆಚ್‌ಪಿಸಿಎ ತಂಡ

05:41 PM Dec 02, 2023 | Team Udayavani |

ಬಹ್ರೈನ್‌:ದ್ವೀಪದ ವೈ.ಎಂ .ಸಿ ಸಂಘಟನೆಯು “ನಿಸರ್ಗ ಬಹ್ರೈನ್‌’ ಆಶ್ರಯದಲ್ಲಿ ಇಲ್ಲಿನ ಜುಫೇರ್‌ ಪರಿಸರದಲ್ಲಿರುವ ಅಲ್‌ ನಜ್ಮಾ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾಟವೊಂದನ್ನು ಆಯೋಜಿಸಿದ್ದು, ಆಟಗಾರರೂ, ವೀಕ್ಷಕರೂ ಸೇರಿದಂತೆ ದ್ವೀಪದ ನೂರಾರು ಕ್ರಿಕೆಟ್‌ ಪ್ರೇಮಿಗಳು ಈ ಪಂದ್ಯಾಟವನ್ನು ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Advertisement

ದ್ವೀಪದ ಪ್ರಸಿದ್ಧ ಸಂಸ್ಥೆಯಾದ ಆರ್‌ಆ್ಯಂಡ್‌ಆರ್‌ ಸಂಸ್ಥೆಯು ಈ ಪಂದ್ಯಾಟದ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದ್ದು ಈ ಪಂದ್ಯಾಟವು ಬೆಳಗ್ಗೆ 6 ಗಂಟೆಗೆ ವಿದ್ಯುಕ್ತ ಚಾಲನೆ ಕಂಡು ತಡರಾತ್ರಿ ವರ್ಣರಂಜಿತ ಸಮಾರೋಪ ಸಮಾರಂಭದದೊಂದಿಗೆ ಮುಕ್ತಾಯಗೊಂಡಿತು.30 ಗಜಗಳ ಮೃದು ಚೆಂಡಿನ ಈ ಕ್ರಿಕೆಟ್‌ ಪಂದ್ಯಾಟದಲ್ಲಿ ದ್ವೀಪದ ಕರ್ನಾಟಕ ಮೂಲದ ಪುರುಷರ 14 ಹಾಗೂ ವನಿತೆಯರ 4 ಬಲಿಷ್ಠ ತಂಡಗಳು ಸೆಣೆಸಾಡಿದವು.

ವಿಜೇತರು:
ಪುರುಷರ ವಿಭಾಗದಲ್ಲಿ “ಸಾಚಿ’ ತಂಡವು ಪಂದ್ಯಾಟದ ಚಾಂಪಿಯನ್ಸ್‌ ಆಗಿ ಮೂಡಿಬಂದರೆ,”ಕುಡ್ಲ ಸೂಪರ್‌ ಕಿಂಗ್ಸ್‌’ ದ್ವಿತೀಯ ಸ್ಥಾನ, “ಆರ್‌ಡಿ’ ಗ್ರೂಪ್‌ ತೃತೀಯ ಸ್ಥಾನ, “ಸೂಪರ್ನೋವಾಸ್‌’ ತಂಡ ನಾಲ್ಕನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ವನಿತಾ ವಿಭಾಗದಲ್ಲಿ “ಹೆಚ್‌ಪಿಸಿಎ’ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದರೆ, “ಜೈ ಕರ್ನಾಟಕ’ ತಂಡವು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಸೂರಜ್‌ ಶೆಟ್ಟಿ ಸರಣಿ ಶ್ರೇಷ್ಠ ಹಾಗೂ ಅತ್ಯುತ್ತಮ ಎಸೆತಗಾರ ಪ್ರಶಸ್ತಿಗೆ ಭಾಜನರಾದರು. ನಿತಿನ್‌ ಟಿ. ಪಿ. ಅತ್ಯುತ್ತಮ ದಾಂಡಿಗ, ರಿಯಾಜ್‌ ಅತ್ಯುತ್ತಮ ಕ್ಷೇತ್ರ ರಕ್ಷಕ, ಅನಿಲ್‌ ಕುಮಾರ್‌ ಅತ್ಯುತ್ತಮ ವಿಕೆಟ್‌ ಕೀಪರ್‌, ವಿಪಿನ್‌ ರಾಜ್‌ ಅಂತಿಮ ಪಂದ್ಯಾಟದ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮಹಿಳೆಯರ ವಿಭಾಗದಲ್ಲಿ ಕಬಿಯಾ ಬದೋನಿ ಸರಣಿ ಶ್ರೇಷ್ಠ, ಅತ್ಯುತ್ತಮ ದಾಂಡಿಗಿತ್ತಿ, ಅತ್ಯುತ್ತಮ ವಿಕೆಟ್‌ ಕೀಪರ್‌, ಅಂತಿಮ ಪಂದ್ಯಾಟದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರೆ, ರೇಶಲ್‌ ಅತ್ಯುತ್ತಮ ಬೌಲರ್‌, ಸ್ವರ್ಣ ಅತ್ಯುತ್ತಮ ಕ್ಷೇತ್ರ ರಕ್ಷಕಿ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡರು.

Advertisement

ಮನೋಜ್‌ ಶೆಟ್ಟಿ, ಸಂಪತ್‌ ಶೆಟ್ಟಿ ಹಾಗೂ ಯಜ್ನೆàಶ್‌ ಪೂಜಾರಿ ಈ ಪಂದ್ಯಾಟವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಗಳಾಗಿ ತಾಯ್ನಾಡಿನಿಂದ ಆಗಮಿಸಿದ, ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ವಿಜೇತ, ಪ್ರೋ ಕಬ್ಬಡಿ ಖ್ಯಾತಿಯ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಸುಕೇಶ್‌ ಹೆಗ್ಡೆ ಹಾಗೂ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ವಿಜೇತೆ, ಅಂತರಾಷ್ಟ್ರೀಯ ಪವರ್‌ ಲಿಫ್ಟರ್‌, ಬೋಳ ಅಕ್ಷತಾ ಪೂಜಾರಿಯವರು ವಿಶೇಷವಾಗಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಹೆಚ್ಚಿನ ಮೆರುಗು ನೀಡಿದರು.

ತಡರಾತ್ರಿ ಜರಗಿದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಹ್ರೈನ್‌ ಕ್ರಿಕೆಟ್‌ ಮಂಡಳಿಯ ಸಲಹಾ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್‌ ಮನ್ಸೂರ್‌, ಕನ್ನಡ ಸಂಘದ ಅಧ್ಯಕ್ಷರಾದ ಅಮರ್‌ನಾಥ್‌ ರೈ, ಆರ್‌ಆ್ಯಂಡ್‌ಆರ್‌ ಸಂಸ್ಥೆಯ ಆಡಳಿತ ನಿರ್ದೇಶಕರಾದ ರೋಯ್‌ ಸ್ಟನ್‌ ಫೆರ್ನಾಂಡಿಸ್‌, ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಪ್ರದೀಪ್‌ ಶೆಟ್ಟಿ, ವೆಬ್‌ ಟ್ರಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ವೆಂಕಟೇಶ್‌ ಭಟ್‌, ಇಂಡಿಯನ್‌ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಆನಂದ್‌ ಲೋಬೊ, ಬಹ್ರೈನ್‌ ಬಿಲ್ಲವಾಸ್‌ನ ಅಧ್ಯಕ್ಷರಾದ ಹರೀಶ್‌ ಪೂಜಾರಿ, ಮಾಜಿ ಅಧ್ಯಕ್ಷರಾದ ಅಜಿತ್‌ ಬಂಗೇರ, ಬಹ್ರೈನ್‌ ಕುಲಾಲ್ಸ್ ನ ನಿಕಟಪೂರ್ವ ಅಧ್ಯಕ್ಷರಾದ ಗಣೇಶ್‌ ಮಾಣಿಲ, ರೇಡಿಯೋ ನಿರೂಪಕ ಕಮಲಾಕ್ಷ ಅಮೀನ್‌ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಯ್ನಾಡಿನಿಂದ ಆಗಮಿಸಿದ ಮುಖ್ಯ ಅತಿಥಿಗಳಾದ ಸುಕೇಶ್‌ ಹೆಗ್ಡೆ ಮತ್ತು ಬೋಳ ಅಕ್ಷತಾ ಪೂಜಾರಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಗೌರವ ಅತಿಥಿಗಳಾಗಿ ಆಗಮಿಸಿದ್ದ, ಇತ್ತೀಚೆಗೆ ಗಲ್ಫ್‌ ರತ್ನ ಪ್ರಶಸ್ತಿ ಪಡೆದ ಮೊಹಮ್ಮದ್‌ ಮನ್ಸೂರ್‌ ಹೆಜಮಾಡಿಯವರನ್ನು ಗೌರವಿಸಲಾಯಿತು.

ವಿಜೇತರೆಲ್ಲರಿಗೂ ಟ್ರೋಫಿಗಳನ್ನು ಹಾಗೂ ನಗದು ಬಹುಮಾನವನ್ನು ನೀಡಲಾಯಿತು. ಈ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಶೈನಿಂಗ್‌ ಸ್ಟಾರ್‌ ನೃತ್ಯ ತಂಡದವರಿಂದ ಪ್ರೀತಮ್‌ ಆಚಾರ್ಯರವರ ನೃತ್ಯ ನಿರ್ದೇಶನದಲ್ಲಿ ವೈವಿಧ್ಯಮಯ ನೃತ್ಯಗಳು, ನಾಸಿಕ್‌ ಡೋಲ್‌ ತಂಡದವರ ಲಯಬದ್ಧವಾದ ಡೋಲು ಬಾರಿಸುವಿಕೆ ಹಾಗೂ ಮೈನವಿರೇಳಿಸುವ ಬೆಂಕಿಯಾಟದ ಪ್ರದರ್ಶನ ಕ್ರೀಡಾಂಗಣದಲ್ಲಿ ಪ್ರದರ್ಶನಗೊಂಡು ಕ್ರೀಡಾಪ್ರೇಮಿಗಳ ಮನಸೂರೆಗೊಂಡಿತು.

ಈ ಪಂದ್ಯಾಟದ ತೀರ್ಪುಗಾರರಾಗಿ ಕಮಲ್‌ ಹಾಗೂ ಸುರೇಂದ್ರ ಅವರು ಆಗಮಿಸಿದ್ದರು. ವೀಕ್ಷಕ ವಿವರಣೆಗಾರರಾಗಿ ಮನ್ಸೂರ್‌ ಹಾಗೂ ಫ್ರೀಡಾ ಸಹಕರಿಸಿದರು. ಧನುಷ್‌ ಕುಲಾಲ್‌ , ಶಶಿಕಾಂತ್‌ ಆಚಾರ್ಯ, ರತೀಶ್‌ ಭಂಡಾರಿ, ದೀಕ್ಷಿತ್‌ ಸಾಲ್ಯಾನ್‌, ಸಾಗರ್‌ ಶೆಟ್ಟಿ , ನವೀನ್‌ ಕುಮಾರ್‌, ಶಶಿಧರ್‌ ಕುಲಾಲ್‌, ಭರತ್‌ ನಾಯಕ್‌, ಅತುಲ್‌ ಪೂಜಾರಿ, ವಿವಿನ್‌ ಜೀತ್‌ ಡಿ’ಸೋಜಾ, ಶರಣ್‌ ರಾವ್‌, ನಿತ್ಯ ನಾಯಕ್‌ ಉಪಸ್ಥಿತರಿದ್ದು ಪಂದ್ಯಾಟವು ಯಶಸ್ವಿಯಾಗಿ ಜರಗುವಲ್ಲಿ ಸಹಕರಿಸಿದ್ದರು. ರೂಪೇಶ್‌ ಸುವರ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಳೆದ ಎರಡು ವರುಷಗಳಿಂದ ಈ ಕ್ರಿಕೆಟ್‌ ಪಂದ್ಯಾಟವನ್ನು ದ್ವೀಪದಲ್ಲಿ ಆಯೋಜಿಸುತ್ತಾ ಬಂದಿರುವ ವೈ.ಎಮ್‌.ಸಿ ತಂಡವು ದ್ವೀಪದ ಕ್ರಿಕೆಟ್‌ ಆಟಗಾರರಿಗೆ ವೇದಿಕೆ ಒದಗಿಸುತ್ತಾ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next