ನೋಡು, ಸಿನಿಮಾಗಳಲ್ಲಿ ತೋರಿಸುವಂತೆ ನಾವಿಬ್ಬರೂ ಎಂದೂ ಪಾರ್ಕ್, ಹೋಟೆಲ್, ಥಿಯೇಟರ್ ಸುತ್ತಲಿಲ್ಲ. ನನ್ನ ಮುಂಗುರುಳಲ್ಲಿ ನಿನ್ನ ಬೆರಳುಗಳೆಂದೂ ಆಟವಾಡಿಲ್ಲ. ನನ್ನ ಕೈತುಂಬಾ ಬಿಡಿಸಿದ್ದ ಗೋರಂಟಿಯ ಘಮಲನ್ನೂ ನೀನು ಆಘ್ರಾಣಿಸಲಿಲ್ಲ. ಆದರೂ ನಮ್ಮಿಬ್ಬರದು ಗಟ್ಟಿ ಪ್ರೇಮ..
ಹೇ ಹುಡುಗ, ನೀನು ಅದೆಷ್ಟು ಸ್ವಾರ್ಥಿ, ಅದೆಷ್ಟು ನಿಷ್ಠುರವಾದಿ, ಅದೆಷ್ಟು ನಿರ್ದಯಿ? ಒಮ್ಮೊಮ್ಮೆ ಅನಿಸುತ್ತದೆ: ನಿನ್ನ ಬದಲು, ಯಾವುದಾದ್ರೂ ಹೆಬ್ಬಂಡೆಯನ್ನು ಪ್ರೀತಿಸಿದ್ದರೆ ಬಹುಶಃ ಅದೂ ನನ್ನ ಪ್ರೀತಿಗೆ ಕರಗಿ ಬಿಡುತ್ತಿತ್ತೇನೋ? ನೀನೊಂದು ಅರ್ಥವೇ ಆಗದ ಕವಿತೆ, ಕಬ್ಬಿಣದ ಕಡಲೆಯಂತೆ. ಈಗಿರುವ ಮನಸ್ಥಿತಿ ಮತ್ತೂಂದು ಕ್ಷಣಕ್ಕೆ ಇರೋದಿಲ್ಲ. ಹೆಣ್ಣು ಚಿತ್ತ ಚಂಚಲೆ. ನೀರಿನಲ್ಲಿ ಮೀನಿನ ಹೆಜ್ಜೆಯನ್ನ ಹೇಗೆ ಗುರುತಿಸೋಕೆ ಆಗಲ್ವೋ, ಅದೇ ರೀತಿ ಅವಳ ಒಳಮನಸ್ಸು ಅಂತಾರೆ.. ಆದರೆ, ನೀನದಕ್ಕೆ ತದ್ವಿರುದ್ಧ. ಅದೆಷ್ಟು ಚಂಚಲ ನಿನ್ನ ಮನಸ್ಸು? ಸಿನಿಮಾಗೆ ಹೋಗೋಣ ಅಂದವನೂ ನೀನೇ, ಮತ್ತೀಗ ನಿಮ್ಮ ಮನೆಯವರ ಕಣ್ಣಿಗೆ ಬಿದ್ದರೆ ಕಷ್ಟ. ಇನ್ಯಾವತ್ತಾದ್ರೂ ಹೋಗೋಣ ಅಂತ ಪ್ರತಿ ಬಾರಿ ಮುಂದೂಡುವವನೂ ನೀನೇ..ಹೋಗಲಿ, ಈಗ ಸುತ್ತಾಡೋಣ ಅಂದರೆ, ಸಮಯವಿಲ್ಲ. ಕೈತುಂಬಾ ಕೆಲಸ ಅನ್ನೋ ಸಮಜಾಯಿಷಿ ಬೇರೆ…
ಎಲ್ಲಾ ಪ್ರೇಮಿಗಳಂತೆ, ನನಗೂ ನಂದಿಬೆಟ್ಟದ ತಪ್ಪಲಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಾ,ತಂಗಾಳಿಯಲ್ಲಿ ಮೈಮರೆಯುತ್ತಾ ನಿನ್ನ ಕಣಳಲ್ಲಿ ಕಣೂಡಿಸುವಾಸೆ. ನಿನ್ನ ಡಕೋಟಾ ಗಾಡಿಯಲ್ಲೇ ಒಂದು ಲಾಂಗ್ ಡ್ರೈವ್ ಹೋಗುವಾಸೆ. ಹಾಗೆ ಹೋಗುವಾಗ, ಅಚಾನಕ್ಕಾಗಿ ನಿನ್ನೊಮ್ಮೆ ಬಿಗಿದಪ್ಪುವಾಸೆ…ಬಿಡು, ಆಸೆಗಳಿಗೇನು? ಕೋಟಿ ಇವೆ… ಆದ್ರೆ, ನನ್ನ ಹುಟ್ಟು ಹಬ್ಬದ ದಿನ ನಿನ್ನಿಂದ ಉಡುಗೊರೆ ನಿರೀಕ್ಷಿಸಿದ್ದು ತಪ್ಪಾ? ಅವತ್ತು ನೀನು ಮಾಡಿದ್ದೇನು? ನನ್ನೆಲ್ಲಾ ನಿರೀಕ್ಷೆಗಳನ್ನು ಹುಸಿಯಾಗಿಸಿ, “ಹ್ಯಾಪಿ ಬರ್ತ್‌ಡೇ’ ಅಂತೊಂದು ಸಂದೇಶ ಕಳಿಸಿ ಕೈ ತೊಳೆದುಕೊಂಡೆ. ಗಿಫ್ಟ್ ಕೊಡೋಕೆ ಮರೆತಿರಬೇಕು ಅಂತ ಸುಮ್ಮನಾದೆ.
ಮತ್ತೆ ಬಂದದ್ದು ವ್ಯಾಲೆಂಟೈನ್ಸ್ ಡೇ! ನಾನೆಷ್ಟು ಹುಮ್ಮಸ್ಸಿನಲ್ಲಿದ್ದೆ ಗೊತ್ತಾ? ಗೆಳತಿಯರೆಲ್ಲಾ ಅವತ್ತು ಕಾಲೇಜ್‌ಗೆ ಬಂಕ್ ಹೊಡೆದು, ಅವರವರ ಬಾಯ್‌ಫ್ರೆಂಡ್ ಕೊಡಿಸಿದ ಡ್ರೆಸ್ ತೊಟ್ಟು, ಸುತ್ತಾಡೋಕೆ ಹೋಗಿದ್ದರು. ನಾನೋ ಮನೆಯವರ ಕಣ್ಣಿಗೆ ಮಣ್ಣೆರಚಿ, ನಮ್ಮಣ್ಣನ ಸರ್ಪಗಾವಲಿನಿಂದ ಹೇಗೋ ತಪ್ಪಿಸಿಕೊಂಡು ಕೆಂಪು ಚೂಡಿ ಹಾಕಿ ಹೊರಬಂದಿದ್ದೆ. ಅಂದು ಕಾಲೇಜ್‌ಗೆ ಹೋಗೋ ಮೂಡ್ ಖಂಡಿತಾ ಇರಲಿಲ್ಲ.. ನೀನು ಕೂಡ ಕೆಂಪು ಬಣ್ಣದ ಶರ್ಟ್‌ನಲ್ಲಿ ಬರ್ತೀಯಾ ಅಂತ ಅಂದುಕೊಂಡಿದ್ದೆ. ಆದರೆ ನೀನು, ಈ ಆಚರಣೆ ನಮ್ಮದಲ್ಲ. ನಮಗೆ ದಿನವೂ ಪ್ರೇಮಿಗಳ ದಿನವೇ ಎಂದು ಸಬೂಬು ಹೇಳಿ ಜಾರಿಕೊಂಡಿದ್ದೆ. ಅವತ್ತು ಎಷ್ಟು ಅತ್ತಿದ್ದೆ ನಿಂಗೊತ್ತಾ? ಗಿಫ್ಟ್ ಬೇಡ, ಕೊನೇ ಪಕ್ಷ ಒಂದು ಗುಲಾಬಿ ಹೂವು ಕೊಟ್ಟು “ಐ ಲವ್ ಯು’ ಅಂದಿದ್ದರೂ ಸಾಕಿತ್ತು; ಬಾನಿನಲ್ಲಿ ಹಕ್ಕಿಯಂತೆ ಹಾರಿ ಹೋಗಿಬಿಡುತ್ತಿದ್ದೆ.
ನೋಡು, ಸಿನಿಮಾಗಳಲ್ಲಿ ತೋರಿಸುವಂತೆ ನಾವಿಬ್ಬರೂ ಎಂದೂ ಪಾರ್ಕ್, ಹೋಟೆಲ್, ಥಿಯೇಟರ್ ಸುತ್ತಲಿಲ್ಲ. ನನ್ನ ಮುಂಗುರುಳಲ್ಲಿ ನಿನ್ನ ಬೆರಳುಗಳೆಂದೂ ಆಟವಾಡಿಲ್ಲ. ನನ್ನ ಕೈತುಂಬಾ ಬಿಡಿಸಿದ್ದ ಗೋರಂಟಿಯ ಘಮಲನ್ನೂ ನೀನು ಆಘ್ರಾಣಿಸಲಿಲ್ಲ. ಆದರೂ ನಮ್ಮಿಬ್ಬರದು ಗಟ್ಟಿ ಪ್ರೇಮ.. ಓದುವುದರಲ್ಲೇ ನೀನು ಮುಳುಗಿದ್ದೆ. ಆದರೆ ನಾನು ನಿನ್ನ ಪ್ರೀತಿಯಲ್ಲಿ ಮುಳುಗಿದ್ದೆ. ಇಷ್ಟಾದರೂ, ನೀನೇ ಬೇಕೆನ್ನುವ ಹಟ ಎಳ್ಳಷ್ಟೂ ಕಡಿಮೆಯಾಗಲಿಲ್ಲ.. ಡಿಗ್ರಿ ಮುಗಿದ ಮೇಲೆ ಬಂದ ವರಮಹಾಶಯರನ್ನೆಲ್ಲಾ ತಿರಸ್ಕರಿಸಿ, ನೀನೇ ಬೇಕೆಂದು ದುಂಬಾಲು ಬಿದ್ದು, ಹೆತ್ತವರ ಕೈಕಾಲು ಹಿಡಿದು ನಿನ್ನನ್ನೇ ಕಟ್ಟಿಕೊಂಡೆ. ನಿನ್ನ ಪ್ರೀತಿಯ ಸುಳಿಗಾಳಿಗೆ ಸಿಕ್ಕ ತರಗೆಲೆಯಂತೆ ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಾ ಜೀವನವೆಂಬ ಮಹಾಮಾರುತದಲ್ಲಿ ಸಿಲುಕಿ ಈಗ ಬಹದೂರ ಸಾಗಿ ಬಂದಿದ್ದೇನೆ.
ನಿನಗೆ ಎಷ್ಟೋ ಬಾರಿ ಹೇಳಿದ್ದೇನೆ. ಆದರೂ, ನಾಚಿಕೆ ಸಂಕೋಚವನ್ನೆಲ್ಲಾ ಮೂಟೆ ಕಟ್ಟಿಟ್ಟು ಮತ್ತೂಮ್ಮೆ ಹೇಳುತ್ತೇನೆ ಕೇಳು: ನಿನ್ನ ಜೊತೆ ಸುತ್ತಾಡೋಕೆ, ಲೇಟ್ ನೈಟ್ ಮೂವಿ ನೋಡೋಕೆ ತುಂಬಾ ಇಷ್ಟ. ನನ್ನ ಹುಟ್ಟಿದಬ್ಬಕ್ಕೆ ಬೇಡ. ನಮ್ಮ ಆ್ಯನಿವರ್ಸರಿಗಾದರೂ ಒಂದು ಗಿಫ್ಟ್ ನಿರೀಕ್ಷಿಸುತ್ತೇನೆ. ನಂಗೊತ್ತು, ನಿನಗಿಷ್ಟವಿಲ್ಲ ಅದೆಲ್ಲಾ ಆದರೆ ನನಗಿಷ್ಟ! ನನ್ನ ಖುಷಿಗಾಗಿ ಒಂದನ್ನಾದರೂ ಮಾಡು…ಹಂ…. ಆದಷ್ಟು ಬೇಗ ಬದಲಾಗು, ನನಗಾಗಿ ಪ್ಲೀಸ್ ….
ಇಂತಿ ನಿನ್ನವಳು,
ಅರ್ಚನಾ.ಎಚ್, ಬೆಂಗಳೂರು