ವಿಧಾನಸಭೆ: ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ ನೀರು ಕೊಡುವ ಕೆಲಸ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ವೆಂಕಟರಮಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎತ್ತಿನಹೊಳೆ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಹೇಳಿದರು.
ಎತ್ತಿನಹೊಳೆ ಮುಖ್ಯ ನಾಲೆಯ ಸರಪಳಿ 258.570 ಕಿ.ಮೀ.ನಲ್ಲಿ ಕವಲೊಡೆಯುವ ಗೌರಿಬಿದನೂರು ಗುರುತ್ವ ಫೀಡರ್‌ನಿಂದ 1.826 ಟಿಎಂಸಿ ನೀರಿನ ಬಳಕೆಯೊಂದಿಗೆ ಗೌರಿಬಿದನೂರು ತಾಲೂಕಿನ ಕುಡಿಯುವ ನೀರು ಮತ್ತು ಅಲ್ಲಿನ 86 ಕೆರೆ, ಮಧುಗಿರಿಯ 14 ಕೆರೆ, ಕೊರಟಗೆರೆಯ 2 ಕೆರೆ, ದೊಡ್ಡಬಳ್ಳಾಪುರ ತಾಲೂಕಿನ 5 ಕೆರೆ ಸೇರಿ 107 ಕೆರೆಗಳನ್ನು ಶೇ.50 ರಷ್ಟು ತುಂಬಿಸಲು ಉದ್ದೇಶಿಸಲಾಗಿದ್ದು ಫೀಡರ್ ಪೈಪ್‌ಲೈನ್ 81.60 ಕಿ.ಮೀ. ಉದ್ದವಿದ್ದು ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ 27 ಕಿ.ಮೀ. ಹಾದು ಹೋಗುತ್ತಿದ್ದು 35 ಕಿ.ಮೀ. ಕಾಮಗಾರಿ ಮುಗಿದಿದೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಪ್ರಾರಂಭ ಅರಸೀಕೆರೆ ತಾಲೂಕಿನಲ್ಲಿ, ಆದರೆ ಅಲ್ಲೇ ಕೆಲಸ ಆಗಿಲ್ಲ. ಹೀಗೇ ಆದರೆ ಹತ್ತು ವರ್ಷ ಆದರೂ ನೀರು ಕೊಡಲು ಆಗಲ್ಲ ಎಂದು ಜೆಡಿಎಸ್‌ನ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಸಚಿವ ಮಾಧುಸ್ವಾಮಿ, ಎರಡು ವರ್ಷದಲ್ಲಿ ಪೂರ್ಣಗೊಳಿಸುವುದು ನಮ್ಮ ಸಂಕಲ್ಪ. ಅದರಂತೆ ನಾವು ಕೆಲಸ ಮಾಡುತ್ತಿದ್ದೇವೆ. ಕಾದು ನೋಡಿ ಎಂದು ಹೇಳಿದರು.