ಸಕಲೇಶಪುರ: ಎತ್ತಿನಹೊಳೆ ಯೋಜನೆಗಾಗಿ ಜಮೀನು ಕೊಟ್ಟ ರೈತರು ಪರಿಹಾರ ಕೇಳಿದ್ದಕ್ಕೆ ಯೋಜನೆ ಅಧಿಕಾರಿಗಳು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐವರ ಮೇಲೆ ದೂರು ದಾಖಲಿಸಿರುವ ಘಟನೆ ನಡೆದಿದೆ.
ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಗಾಗಿ ಸುರಂಗ ಮಾರ್ಗ ಮಾಡಲು ಕಳೆದ 3 ವರ್ಷದ ಹಿಂದೆ ಕಾಮಗಾರಿ ಆರಂಭಿಸಲಾಗಿದೆ. ಗುತ್ತಿಗೆ ಪಡೆದಿರುವ ಕಂಪನಿಯವರು ರೈತರಿಂದ ಸ್ವಾಧೀನಕ್ಕೆ ಪಡೆದ ಭೂಮಿಗೆ ತಾತ್ಕಾಲಿಕವಾಗಿ 10,000 ರೂ., 20,000 ರೂ.ನಂತೆ ಗುಡ್ ವಿಲ್ ಹಣ ನೀಡಿ ಕಾಮಗಾರಿ ಆರಂಭಿಸಿದ್ದಾರೆ ಎಂದು ಹೇಳಿದರು.
ಪ್ರತಿದೂರು ದಾಖಲು: ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರು, ಪರಿಹಾರ ಇಂದು ಸಿಗುತ್ತೆ, ನಾಳೆ ಸಿಗಬಹುದು ಎಂದು ಕಳೆದ 3 ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಇದೀಗ ಸುರಂಗ ಮಾರ್ಗದ ಕಾಮಗಾರಿಮುಗಿಯುತ್ತ ಬಂದಿದೆ. ಇದರಿಂದ ಆತಂಕಗೊಂಡ ಸಂತ್ರಸ್ತರು ಪರಿಹಾರದ ಹಣ ನೀಡುವವರೆಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಅಡ್ಡಿ ಪಡಿಸಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡ ಯೋಜನೆಯ ಅಧಿಕಾರಿಗಳು, ಐವರು ಸಂತ್ರಸ್ತರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಸಹ ಯೋಜನೆಯ ಅಧಿಕಾರಿಗಳ ಮೇಲೆ ಪ್ರತಿದೂರು ದಾಖಲಿಸಿದ್ದಾರೆ.
ಪರಿಹಾರ ನೀಡಿಲ್ಲ: ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಭುವನಾಕ್ಷ ಮಾತನಾಡಿ, ಬಯಲು ಸೀಮೆ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ಕೈಗೊಳ್ಳಲಾಗಿರುವ ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ಕಾಮಗಾರಿ ಪ್ರಾರಂಭವಾಗಿ 3 ವರ್ಷಗಳಾಗುತ್ತ ಬಂದಿದ್ದರೂ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ದೂರಿದರು.
ಉಗ್ರ ಪ್ರತಿಭಟನೆ: ಇದಕ್ಕೆ ಸೊಪ್ಪು ಹಾಕದ ಯೋಜನೆ ಅಧಿಕಾರಿಗಳು ರೈತರ ವಿರೋಧದ ನಡುವೆ ಕಾಮಗಾರಿ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪರಿಹಾರ ನೀಡುವವರೆಗೂ ಕಾಮಗಾರಿ ಆರಂಭಿಸುವುದು ಬೇಡ ಎಂದಿದ್ದೇವೆ. ಇದನ್ನು ವಿರೋಧಿಸಿದ್ದಕ್ಕೆ ಐವರು ಸಂತ್ರಸ್ತರ ಮೇಲೆ ಯೋಜನೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಬಹುತೇಕ ಸಂತ್ರಸ್ತರು ಬಡ ದಲಿತರಾಗಿದ್ದು, ಕೂಡಲೇ ದೂರನ್ನು ಹಿಂಪಡೆದು ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಸಂತ್ರಸ್ತರಿಂದ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ. ಈ ಕುರಿತು ಡಿವೈಎಸ್‌ಪಿ ಗೋಪಿ ಸೋಮವಾರ ಕಚೇರಿಗೆ ಬಂದು ಚರ್ಚೆ ಮಾಡಲು ಹೇಳಿದ್ದಾರೆ ಎಂದು ಹೇಳಿದರು. ಈ ವೇಳೆ ಸಂತ್ರಸ್ತರಾದ ನಾಗರಾಜ್, ಮಧುಕುಮಾರ್, ಹುಚ್ಚಯ್ಯ, ವಿರೇಶ್ ಮುಂತಾದವರು ಹಾಜರಿದ್ದರು.