Advertisement
ಸರಳವಾಗಿ ಹೇಳುವುದಾದರೆ ನಿನ್ನೆಯ ಅಡುಗೆಯನ್ನು ಅದು ಇದ್ದಂತೆಯೇ ಅಥವಾ ಅದಕ್ಕೆ ಒಂದು ಹೊಸರೂಪವನ್ನು ಕೊಟ್ಟು ಮರುದಿನ ತಿನ್ನುವುದನ್ನೇ ನಾವು “ನಿನ್ನೆದ್ದು ಇವತ್ತಿಗೆ…’ ಎಂದು ಹೇಳುವುದು.
Related Articles
Advertisement
ಇನ್ನು ಕೆಲವು ವಿಚಾರಗಳಲ್ಲಿ ನಿನ್ನೆಗಿಂತ ನಿನ್ನೆದ್ದು ಇವತ್ತಿಗೆ ಹೆಚ್ಚು ರುಚಿಯಾಗಿರುತ್ತವೆ. ಉದಾಹರಣೆಗೆ ಹೇಳುವುದಾದರೆ ಬೆಲ್ಲ ಹಾಕಿ ಮಾಡುವ ಯಾವುದೇ ಪಾಯಸ. ಮಾಡಿದ ದಿನಕ್ಕಿಂತ ಮರುದಿನ ಅದರ ರುಚಿ ದುಪ್ಪಟ್ಟಾಗಿರುತ್ತದೆ. ನಾನಂತೂ ನಮ್ಮ ಮನೆಯಲ್ಲಿ ಯಾರದ್ದೇ ಬರ್ತ್‌ಡೇ ಇರಲಿ, ಹಿಂದಿನ ದಿನ ಸಂಜೆಯೇ ಎಲ್ಲರ ಇಷ್ಟದ ಗುಲಾಬ್ ಜಾಮೂನ್ ಮಾಡಿಡುತ್ತೇನೆ. ಜಾಮೂನಿನ ಪ್ಯಾಕೆಟ…ನಲ್ಲೇನೋ ಕರಿದ ಜಾಮೂನನ್ನು ಬಿಸಿಯಾದ ಸಕ್ಕರೆ ಪಾಕದಲ್ಲಿ ಮುಳುಗಿಸಿ ಅರ್ಧ ಗಂಟೆ ಬಿಟ್ಟು ತಿನ್ನಿ ಎಂದಿರುತ್ತದೆ. ಆದರೆ, ನಮಗೆಲ್ಲರಿಗೋ ಅದನ್ನು ರಾತ್ರಿಯಿಡೀ ಪಾಕದಲ್ಲಿ ತೇಲಿಸಿ ಮುಳುಗಿಸಿ ಮರುದಿನ ನಿನ್ನೆದ್ದು ಇವತ್ತಿಗೆ ಮಾಡಿ ತಿಂದರೇ ಖುಷಿ !
ಇನ್ನು ನಮ್ಮಲ್ಲೆಲ್ಲ ಬಳಕೆಯಲ್ಲಿರುವ ಕ್ರಮವೆಂದರೆ ಹಿಂದಿನ ದಿನದ ಅನ್ನ ಉಳಿದಿದ್ದರೆ ಮರುದಿನ ಬೆಳಿಗ್ಗೆ ತಿಂಡಿಗೆ ಚಿತ್ರಾನ್ನ ಮಾಡುವುದು. ಹೀಗೆ ಒಮ್ಮೆ ಗೆಳತಿಯೊಡನೆ ಮಾತನಾಡುವಾಗ ತಾನು ಆ ದಿನ ತಿಂಡಿಗೆ “”ಲೆಮನ್ ರೈಸ್ ಮಾಡಿದ್ದೇನೆ” ಎಂದಳು. ಲೆಮನ್ ರೈಸ್ ಎಂದರೆ ನಮ್ಮ ಚಿತ್ರಾನ್ನ ಎಂದು ನನಗೆ ಗೊತ್ತಿಲ್ಲವೇ? “”ಓ, ನಿನ್ನೇದು ಅನ್ನ ತುಂಬಾ ಉಳಿದಿತ್ತೆಂದು ಕಾಣುತ್ತದೆ ಅಲ್ಲವಾ?” ಎಂದು ಸಹಜವಾಗೇ ಕೇಳಿದೆ. ಅದಕ್ಕೆ ಆಕೆ, ನಾವೆಲ್ಲ ಹಿಂದಿನ ದಿನದ್ದು ಉಳಿದಿದ್ದು ಏನೂ ತಿನ್ನುವುದೇ ಇಲ್ಲವೆಂದೂ, ಹಿಂದಿನ ದಿನದ್ದೇಕೆ ಮಧ್ಯಾಹ್ನ ಮಾಡಿದ್ದು ರಾತ್ರಿ ತಿನ್ನಲ್ಲವೆಂದೂ, ಚಿತ್ರಾನ್ನಕ್ಕೆ ಎಂದೇ ಬೆಳಿಗ್ಗೆ ಫ್ರೆಶ್ ಆಗೇ ಅನ್ನ ಮಾಡಿ¨ªೆಂದೂ ದುರುಗುಟ್ಟಿ ಹೇಳಿದಳು. ಅಯ್ಯಬ್ಟಾ! ನನಗೋ ಫ್ರೆಶ್ ಅನ್ನದಲ್ಲಿ ಚಿತ್ರಾನ್ನ ಏಕೋ ಊಹಿಸಿಕೊಳ್ಳಲಾಗಲಿಲ್ಲ.
ನನ್ನ ಅಜ್ಜಿಯೋ ಈಗಲೂ ಹಿಂದಿನ ದಿನದ ಅನ್ನವಿದ್ದರೆ ಅದಕ್ಕೆ ತೆಂಗಿನೆಣ್ಣೆ ಉಪ್ಪು ಹಾಕಿ ತಿನ್ನುತ್ತಾರೆ. “”ಬೇಡ ಅಜ್ಜಿ, ಆ ಅನ್ನ ನಿನಗೆ ಗ್ಯಾಸ್ಟ್ರಿಕ್ ಆಗುತ್ತದೆ, ಬೇಕಿದ್ದರೆ ಇವತ್ತಿನ ಬಿಸಿ ಅನ್ನಕ್ಕೆ ಎಣ್ಣೆ, ಉಪ್ಪು ಹಾಕಿ ಊಟಮಾಡು” ಎಂದರೆ, “”ಹೋಗಿರೋ, ತಂಗಳನ್ನದ ರುಚಿ ಬಿಸಿ ಅನ್ನಕ್ಕೆ ಬರಲ್ಲ” ಎಂದು ನಮ್ಮ ನಿನ್ನೆದ್ದು ಇವತ್ತಿಗೆ ಗುಂಪಿಗೆ ಸೇರಿ ಬಿಡುತ್ತಾರೆ.
ನಮ್ಮಲ್ಲಿ ಇಡ್ಲಿ ಅಥವಾ ದೋಸೆಗೆ ಚಟ್ನಿ ತಯಾರಿಸಿದ್ದು ತುಂಬ ಉಳಿದಿದ್ದಲ್ಲಿ ನಾನು ಅದಕ್ಕೆ ಮರುದಿನ ಅಕ್ಕಿಹಿಟ್ಟು, ನೀರುಳ್ಳಿ ಸೇರಿಸಿ “ಸಾನ್ನಾ ಪೊಳ್ಳೋ’ ಎಂಬ ಸಣ್ಣ ಸಣ್ಣ ದೋಸೆಯನ್ನು ಊಟಕ್ಕೆ ಸೈಡ್ ಡಿಶ್ ಆಗಿ ತಯಾರಿಸುವುದಿದೆ. ಇದು ನನ್ನ ಮಗನಿಗೆ ತುಂಬಾ ಇಷ್ಟ. ಅದಕ್ಕೆ ಅವನು ಇಡ್ಲಿ , ದೋಸೆ ಮಾಡುವಾಗ “”ಅಮ್ಮಾ, ಚಟ್ನಿ ತುಂಬಾ ಮಾಡಮ್ಮ, ನಾಳೆ ಸಾನ್ನಾ ಪೊಳ್ಳೋ ಮಾಡಬಹುದು” ಎನ್ನುತ್ತಾನೆ, ಅದನ್ನು ಹಿಂದಿನ ದಿನದ ಚಟ್ನಿ ಇಲ್ಲದೇ ಫ್ರೆಶ್ ಆಗೇ ಮಾಡಬಹುದು ಎಂಬ ಕಲ್ಪನೆಯೇ ಇಲ್ಲದೆ!
ಹಿಂದೆಲ್ಲ ಮನೆ ತುಂಬಾ ಜನ, ಅನ್ನ, ತಿಂಡಿ ಏನಾದರೂ ಹೆಚ್ಚಾಗಿ ಉಳಿದರೆ ಮನೆಯ ದನಕ್ಕೋ, ನಾಯಿಗೋ ಹಾಕುತ್ತಿದ್ದರು. ಆದರೆ, ಈಗಿನ ಕಾಲದಲ್ಲಿ ನಾಯಿ, ದನ ಹುಡುಕಿಕೊಂಡು ಹೋಗಬೇಕು. ಪರಿಸ್ಥಿತಿ ಹೀಗಿರುವಾಗ ಎಲ್ಲರೂ ನಿನ್ನೆದ್ದು ಇವತ್ತಿಗೆ ಎನ್ನದೇ ಬೇರೆ ಉಪಾಯ ವಿಲ್ಲವಾಗಿದೆ. ಆದರೆ, ವೈದ್ಯರು ಹೇಳುವ ಪ್ರಕಾರ ಆದಷ್ಟು ತಾಜಾ ಆಹಾರ ಸೇವಿಸುವುದು ದೇಹಾರೋಗ್ಯಕ್ಕೆ ಉತ್ತಮ. ಹಾಗಾಗಿ ನಾವು ಕೂಡ ಈಗ ನಮ್ಮ “ನಿನ್ನೆದ್ದು ಇವತ್ತಿಗೆ’ ಹಾಡನ್ನು “ಇವತ್ತಿದ್ದು ಇವತ್ತಿಗೆ’ ಎಂದು ಬದಲಾಯಿಸಿದ್ದೇವೆ. ನೀವು ಕೂಡ ತಾಜಾ ತಿನ್ನಿ ತಾಜಾ ಆಗಿರಿ!
ಶಾಂತಲಾ ಎನ್. ಹೆಗ್ಡೆ