Advertisement

ಸೋಮಶೇಖರ್‌ ವಿರುದ್ಧ ಯಾರಿಗೆ ಸಿಗಲಿದೆ ಯಶಸ್ಸು?

12:46 AM Mar 01, 2023 | Team Udayavani |

ಬೆಂಗಳೂರು: ಪಕ್ಷಗಳಿಗಿಂತ ವ್ಯಕ್ತಿ ವರ್ಚಸ್ಸು ಯಶವಂತಪುರದಲ್ಲಿ ನಿರ್ಣಾಯಕ. ಅಂತಹ ವರ್ಚಸ್ಸು ಇರುವ ವ್ಯಕ್ತಿಯ ಹುಡುಕಾಟ ರಾಜಕೀಯ ಪಕ್ಷಗಳು ನಡೆಸಿವೆ.

Advertisement

ಜೆಡಿಎಸ್‌ನಲ್ಲಂತೂ ಸದ್ಯಕ್ಕೆ ಈ “ಹುಡುಕಾಟ’ದ ಚಿಂತೆ ಇಲ್ಲ. ಈಗಾಗಲೇ ಅಭ್ಯರ್ಥಿಯ ಆಯ್ಕೆ ಆಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು, ಒಕ್ಕಲಿಗರ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಟಿ.ಎನ್‌. ಜವರಾಯಿಗೌಡ ಅವರನ್ನು ಮತ್ತೆ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೊಡ್ಡಲು ಆ ಪಕ್ಷ ಉದ್ದೇಶಿಸಿದೆ. ಆದರೆ ಉಳಿದೆರಡೂ ರಾಷ್ಟ್ರೀಯ ಪಕ್ಷಗಳ ಮುಂದೆ ತತ್‌ಕ್ಷಣಕ್ಕೆ ಇರುವ ಆಯ್ಕೆಯೊಂದೇ. ಅದು- ಎಸ್‌.ಟಿ. ಸೋಮಶೇಖರ್‌!

ಕಾಂಗ್ರೆಸ್‌ನಲ್ಲಿದ್ದ ಇವರು ಬಿಜೆಪಿಗೆ ಹಾರಿದರು. ಕ್ಷೇತ್ರವೂ ಅವರನ್ನು ಹಿಂಬಾಲಿಸಿತು. ಹಾಗಾಗಿ ಬಿಜೆಪಿ ತೆಕ್ಕೆಗೆ ಹೋಯಿತು. ಈಗ ಅವರನ್ನು ಮತ್ತೆ ತಮ್ಮ ಕಡೆ ಎಳೆತರುವ ಮೂಲಕ ಯಶವಂತಪುರದಲ್ಲಿ ಹಿಡಿತ ಸಾಧಿಸುವ ಕಸರತ್ತು ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ಸಾಧ್ಯವಾದರೆ ಎರಡನೇ ಆಯ್ಕೆ ಕಾಣುತ್ತಿಲ್ಲವಾದ್ದರಿಂದ ಬಿಜೆಪಿಗೆ ಮತ್ತೂಂದು ತಲೆನೋವು ಶುರುವಾಗಲಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಅದು ಅಷ್ಟು ಸುಲಭ ಇಲ್ಲ. ಉಪಚುನಾವಣೆಯಲ್ಲಿ ಗೆದ್ದು ಬಂದ ಅವರಿಗೆ ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಕ್ಕಿದೆ.

ಕಾಂಗ್ರೆಸ್‌ನಿಂದ ಕಣಕ್ಕಿಳಿದರೆ ಕ್ಷೇತ್ರವೇನೋ “ಕೈ’ ತೆಕ್ಕೆಗೆ ಬರಬಹುದು. ಬಳಿಕ ತಮಗೇನು ಲಾಭ ಎಂಬ ಲೆಕ್ಕಾಚಾರ ಸೋಮಶೇಖರ್‌ ಅವರದ್ದಾಗಿದೆ. ಇನ್ನು ಬಿಜೆಪಿಗೆ ಇಲ್ಲಿ ಮೊದಲ ಗೆಲುವು ತಂದುಕೊಟ್ಟಿದ್ದ ಶೋಭಾ ಕರಂದ್ಲಾಜೆ ಈಗ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಚಿವೆ ಆಗಿದ್ದಾರೆ. ಇನ್ನು 2018ರ ಚುನಾವಣೆಯಲ್ಲಿ ಸುಮಾರು 60 ಸಾವಿರ ಮತ ಗಳಿಸಿದ್ದ ಜಗ್ಗೇಶ್‌ ಅವರೂ ರಾಜ್ಯಸಭೆ ಸದಸ್ಯರಾಗಿದ್ದಾರೆ. ಈ ದೃಷ್ಟಿಯಿಂದಲೂ ಸೋಮಶೇಖರ್‌ ಅವರ ಮುಂದಿನ ದಾರಿ ಸುಗಮವಾಗಿದೆ.

ಆದರೆ ಕಾಂಗ್ರೆಸ್‌ಗೆ ಅಭ್ಯರ್ಥಿಯ ಆಯ್ಕೆಯೇ ಸವಾಲಾಗಿದ್ದು, ಹಿಂದಿನ ಉಪಚುನಾವಣೆಯಲ್ಲಿ ಎದುರಿಸಿದ ಸಮಸ್ಯೆಯನ್ನೇ ಈಗಲೂ “ಕೈ’ ಎದುರಿಸುತ್ತಿದೆ. ಸದ್ಯಕ್ಕೆ ಆಕಾಂಕ್ಷಿಗಳ ಪಟ್ಟಿಯಲ್ಲಿ ನಟಿ ಭಾವನಾ ಅವರ ಹೆಸರು ಇಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು ಭಾವನಾ ಕ್ಷೇತ್ರದ ನಿವಾಸಿಯಾಗಿದ್ದಾರೆ. ಮತ್ತೊಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬೆನ್ನಿಗಿದ್ದಾರೆ ಎಂಬುದು. ಇವರ ಜತೆಗೆ ಬೆಂಗಳೂರು ಉತ್ತರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಜಕುಮಾರ್‌ ಅವರ ಮಗ ಕೃಷ್ಣಂ ರಾಜು, ಮುಖಂಡ ಬಾಲರಾಜುಗೌಡ ಕೂಡ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದಾರೆ ಎನ್ನಲಾಗಿದೆ. ಆದರೆ ಇವರು ಸೋಮಶೇಖರ್‌ ಅವರಿಗೆ ಪ್ರಬಲ ಪೈಪೋಟಿ ನೀಡಬಹುದೇ ಎಂಬುದು ಸ್ವತಃ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ.

Advertisement

ಈ ಮಧ್ಯೆ ಮೂರು ಬಾರಿ ಪೈಪೋಟಿ ನೀಡಿ ಸೋತಿರುವ ಜೆಡಿಎಸ್‌ ಈ ಬಾರಿ ಪುಟಿದೇಳುವ ತವಕದಲ್ಲಿದೆ. ಕಳೆದ ಬಾರಿಗೆ ಹೋಲಿಸಿದರೆ ಮೂರು ಬಾರಿ ಸೋತಿರುವ ಬಗ್ಗೆ ಸ್ಥಳೀಯವಾಗಿ ಅನುಕಂಪ ಇದೆ. ಇದೆಲ್ಲವೂ ಜೆಡಿಎಸ್‌ ಕೈಹಿಡಿಯಬಹುದು ಎಂಬ ಲೆಕ್ಕಾಚಾರ ನಡೆದಿದೆ. ಆದರೆ ಕೋವಿಡ್‌ ಸಂದರ್ಭವೂ ಸಹಿತ ಕಳೆದ ನಾಲ್ಕು ವರ್ಷಗಳಲ್ಲಿ ಅವರು ಕಾಣಿಸಿಕೊಂಡಿದ್ದು ತುಂಬಾ ಕಡಿಮೆ ಎನ್ನಲಾಗಿದೆ. ಇನ್ನು ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಶಶಿಧರ್‌ ಆರಾಧ್ಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. 2018ರ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಯಶವಂತಪುರ ಬಿಬಿಎಂಪಿ ವಾರ್ಡ್‌ಗಳು, ಜಿಲ್ಲಾ ಪಂಚಾಯತ್‌ಗಳು, ಗ್ರಾಮ ಪಂಚಾಯತ್‌ಗಳು ಬರುವ ವಿಶಿಷ್ಟ ಕ್ಷೇತ್ರ. ಐದು ವಾರ್ಡ್‌ಗಳಲ್ಲಿ ನಾಲ್ಕು ಬಿಜೆಪಿಯಲ್ಲಿದ್ದರೆ, ಉಳಿದೊಂದು ಕಾಂಗ್ರೆಸ್‌ ತೆಕ್ಕೆಗಿತ್ತು. ಆದರೆ ಪಾಲಿಕೆ ಸದಸ್ಯರ ಅವಧಿ ಮುಗಿದೇ ಎರಡು ವರ್ಷಗಳಾಗಿವೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ಥಳೀಯವಾಗಿರುವ ಅಪಸ್ವರಗಳನ್ನು ಶಮನಗೊಳಿಸುವ ಕೆಲಸ ಈಗಿನಿಂದಲೇ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಥಳೀಯ ಕಾರ್ಯಕ ರ್ತರ ಪಕ್ಷಾಂತರ ಕಾರ್ಯಕ್ರಮಗಳು ಮಾತ್ರ ನಿರಂತರವಾಗಿವೆ.

ಮೊದಲು ಅರಳಿದ್ದು ಕಮಲ
ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಈಗ 15 ವರ್ಷದ ಪ್ರಾಯ. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದೊಳಗಿದ್ದ ಈ ಕ್ಷೇತ್ರವು 2008ರಲ್ಲಿ ಮರುವಿಂಗಡಣೆ ಬಳಿಕ ಯಶವಂತಪುರ ವಿಧಾನಸಭಾ ಕ್ಷೇತ್ರವಾಯಿತು. ಹೀಗೆ ಕ್ಷೇತ್ರ ರಚನೆಯಾದ ಬಳಿಕ ಇಲ್ಲಿ ಮೊದಲು ಅರಳಿದ್ದು ಕಮಲ. 2008ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿಯಿಂದ ಗೆದ್ದುಬಂದರು. ಅನಂತರದ ಎರಡು ಚುನಾವಣೆಗಳಲ್ಲಿ “ಕೈ’ ಸೇರಿತು. ಅದನ್ನು ಪ್ರತಿನಿಧಿಸಿದವರು ಎಸ್‌.ಟಿ. ಸೋಮಶೇಖರ್‌.

2019ರಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಪಾಲಾಯಿತು. ಆಗ ಬಿಜೆಪಿ ಪ್ರತಿನಿಧಿಸಿದವರೂ ಸೋಮಶೇಖರ್‌. ಹೆಸರಿಗೆ ಇದು ಯಶವಂತಪುರ ವಿಧಾನಸಭಾ ಕ್ಷೇತ್ರ. ಅತ್ತ ತುಮಕೂರು ರಸ್ತೆಯ ಚಿಕ್ಕಬಿದರಕಲ್ಲಿನಿಂದ ಆರಂಭವಾಗಿ ಮೈಸೂರು ರಸ್ತೆ ದಾಟಿ ಕನಕಪುರ ರಸ್ತೆ ಕಗ್ಗಲಿಪುರವರೆಗೆ, ಇತ್ತ ಮೈಸೂರು ರಸ್ತೆಯಲ್ಲಿ ಬಿಡದಿವರೆಗೆ, ಮಾಗಡಿ ರಸ್ತೆಯಲ್ಲಿ ತಿಪ್ಪಗೊಂಡನಹಳ್ಳಿ ಹತ್ತಿರಕ್ಕೆ ಈ ಕ್ಷೇತ್ರ ವ್ಯಾಪಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿಕೊಂಡಿರುವ ದೊಡ್ಡ ಕ್ಷೇತ್ರಗಳಲ್ಲಿ ಇದೂ ಒಂದು.

-ವಿಜಯಕುಮಾರ್‌ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next