ಬಿಹಾರ: ಸೆ. 22ರ ಮಂಗಳವಾರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ, ಇದೀಗ ತಾವು ರಾಜಕೀಯ ಪ್ರವೇಶಿಸುವುದಾಗಿ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೆ ಈ ಹೇಳಿಕೆ ಹೊರಬಿದ್ದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ವಿವಾದಗಳಲ್ಲಿ ಸಿಲುಕಿದ ನಂತರ ಬಿಹಾರದ ಡಿಜಿಪಿಯಾಗಿದ್ದ ಗುಪ್ತೇಶ್ವರ ಪಾಂಡೆ ನಿವೃತ್ತಿ ಘೋಷಿಸಿದ್ದರು. ಇವರು ಬಿಹಾರದಲ್ಲಿ ‘ಟಾಪ್ ಕಾಪ್’ ಆಗಿಯೂ ಜನಪ್ರಿಯರಾಗಿದ್ದರು. ನಿವೃತ್ತಿ ಘೋಷಿಸಿದಾಗಲೇ ರಾಜಕೀಯ ಪ್ರವೇಶಿಸುತ್ತಾರೆಂಬ ಊಹಾಪೋಹ ಎಲ್ಲೆಡೆ ಹಬ್ಬಿದ್ದು ಇದೀಗ ನಿಜವಾಗಿದೆ.
ಇಂದು ಮಾಧ್ಯಮವೊಂದರ ಸಂದರ್ಶನಲ್ಲಿ ನೀವು ರಾಜಕೀಯ ಪ್ರವೇಶ ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಪಾಂಡೆ, ಅಪರಾಧಿಗಳು ಸಂಸತ್ತನ್ನು ತಲುಪುತ್ತಾರೆ, ಹಾಗಿದ್ದಲ್ಲಿ ನಾನು ಈ ಬಗ್ಗೆ ಏಕೆ ಯೋಚಿಸಬಾರದು ? ಇದರಲ್ಲಿ ಅನೈತಿಕವಾದುದು ಏನಾದರೂ ಇದೆಯೇ ? ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಯಾವುದೇ ಸ್ಥಳದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರೂ ಗೆಲ್ಲುವ ಸಾಮಾರ್ಥ್ಯವಿದೆ. ರಾಜಕೀಯಕ್ಕೆ ಸಿಂಹದಂತೆ ಪ್ರವೇಶಿಸಿದ್ದೇನೆ, ಕಳ್ಳನಂತೆ ಅಲ್ಲ ಎಂದು ತಿಳಿಸಿದ್ದಾರೆ.
ಗುಪ್ತೇಶ್ವರ್ ಪಾಂಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಫಾಗು ಚೌಹಾಣ್ ರಾಜೀನಾಮೆ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.