ಮಳೆಗಾಲದಲ್ಲಿ ಮಣ್ಣಿನಲ್ಲಿ ಹೊರಳಾಡುವ ಎರೆಹುಳಗಳನ್ನು ಹೊರಕ್ಕೆಳೆದು ಅಂಗೈಯಲ್ಲಿ ಹಾಕಿಕೊಂಡು ತಿರುಗಿಸುತ್ತಾ ಖುಷಿಪಡುತ್ತಿದ್ದ ನೆನಪು ಅನೇಕರಲ್ಲಿದೆ. ಅದೇ ಎರೆಹುಳು ಸಾಕಣೆ ಮತ್ತು ಎರೆಹುಳು ಗೊಬ್ಬರದ ಬ್ರ್ಯಾಂಡ್ ಸೃಷ್ಟಿಸಿ ಮಾರಾಟದ ಮೂಲಕ ಆದಾಯ ಗಳಿಕೆಯನ್ನು ಹೆಚ್ಚಿಸಿಕೊಂಡಿರುವ ರೈತ ಮಹಿಳೆಯೋರ್ವಳ ಯಶೋಗಾಥೆ ಇಲ್ಲಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗಡಿ ಗ್ರಾಮ ಲಕ್ಷ್ಮೀಪುರ ಗೊಲ್ಲರ ಬಿಡಾರದ ರೈತ ಮಹಿಳೆ ನಾಗವೇಣಿ ಗೊಲ್ಲರ. ಶಾಲೆಯ ಮುಖವನ್ನೇ ನೋಡದ ಇವರು ಎರೆಹುಳು ಸಾಕಣೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಪತಿ ಬಾಬಣ್ಣರಿಗೆ ಎರೆಹುಳು ಸಾಕಣಿಕೆಯ ಬಗ್ಗೆ ಆಸಕ್ತಿ ಇದ್ದ ಕಾರಣ ಇವರೂ ಪತಿಯ ಜೊತೆ ಕೈಜೋಡಿಸಿದರು. ಬೇರೆಡೆಯಿಂದ 2 ಕೆ.ಜಿ. ಎರೆಹುಳುಗಳನ್ನು ತಂದು ಅವರೇ ಸಾಕಿದ್ದರು. ಈಗ ಅವರೇ ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಾರೆ.
ಹಲವೆಡೆ ಎಕ್ಸ್‌ಪೋರ್ಟ್: ಇಂದು, ಅವರು ತಯಾರಿಸುತ್ತಿರುವ ಎರೆಹುಳು ಗೊಬ್ಬರ, ಉದ್ಯಮದ ಸ್ವರೂಪ ಪಡೆದುಕೊಳ್ಳುತ್ತಿದೆ. ಇವರು ತಯಾರಿಸುತ್ತಿರುವ ಎರೆಹುಳು ಗೊಬ್ಬರಕ್ಕೆ ಹೆಚ್ಚು ಬೇಡಿಕೆಯೂ ಇದೆ. ಕುಂದಾಪುರ, ಉಡುಪಿ, ಮಹಾರಾಷ್ಟ್ರ, ಶಿವಮೊಗ್ಗ, ಗಂಗಾವತಿ, ರಾಯಚೂರು, ದಾವಣಗೆರೆ , ಕಾರವಾರ, ಬೆಳಗಾವಿ, ಧಾರವಾಡ ಹೀಗೆ ನಾನಾ ಕಡೆಗಳಿಗೆ ನಾಗವೇಣಿಯವರು ತಯಾರಿಸಿದ ಎರೆ ಹುಳು ಗೊಬ್ಬರ ಸರಬರಾಜಾಗುತ್ತದೆ. ಖಾದಿ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸಹಾಯ ಧನ ಪಡೆದು ತಾವು ಕೈಯಿಂದ ಒಂದಷ್ಟು ಹಣ ಹೂಡಿ ಉದ್ಯಮ ಸ್ಥಾಪಿಸಿದ್ದಾರೆ ಈ ರೈತ ಮಹಿಳೆ. 39 ಅಡಿ ಉದ್ದ 27 ಅಡಿ ಅಗಲದ ಶೆಡ್‌ಅನ್ನು ನಿರ್ಮಿಸಿ ಅದರಲ್ಲಿ ಸುಮಾರು 10 ತೊಟ್ಟಿಗಳನ್ನು ನಿರ್ಮಿಸಿ ಗೊಬ್ಬರ ತಯಾರಿಸಲು ಪ್ರಾರಂಭಿಸಿದ್ದರು. ಬೇಡಿಕೆ ಹೆಚ್ಚಾದಾಗ ತಿಪ್ಪೆ ತೊಟ್ಟಿಯನ್ನು ನಿರ್ಮಿಸಿ ಅದರಲ್ಲಿಯೂ ಎರೆಹುಳುಗಳನ್ನು ಬಿಟ್ಟು ಗೊಬ್ಬರ ತಯಾರಿಕೆಯಲ್ಲಿ ತೊಡಗಿದರು.
ಸ್ವಂತ ಬ್ರ್ಯಾಂಡ್: ತಾವು ತಯಾರಿಸಿದ ಗೊಬ್ಬರವನ್ನು ತನ್ನ ಸ್ವಂತ ಹೊಲಕ್ಕೂ ಉಪಯೋಗಿಸುತ್ತಾರೆ. ಅಷ್ಟೇ ಅಲ್ಲ “ಸಂಜೀವಿನಿ ಎರೆ ಗೊಬ್ಬರ’ ಎಂಬ ಬ್ರ್ಯಾಂಡ್ ಪ್ರಾರಂಭಿಸಿದ್ದಾರೆ. ಅದರಡಿ 50 ಕೆ.ಜಿ ಚೀಲಕ್ಕೆ 450-500 ರೂ. ಮತ್ತು ಎರೆಹುಳುವನ್ನು ಒಂದು ಕೆ.ಜಿ.ಗೆ 300 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖರ್ಚೆಲ್ಲಾ ಕಳೆದು ವರ್ಷಕ್ಕೆ ಏನಿಲ್ಲವೆಂದರೂ 1ರಿಂದ 2 ಲಕ್ಷ ರೂ. ತನಕ ಲಾಭ ಗಳಿಸುತ್ತಾರೆ. ತನಗಿರುವ 5 ಎಕರೆ ಜಮೀನಿನಲ್ಲಿ ಭತ್ತ, ಅಡಕೆ, ಬಾಳೆ ಅಷ್ಟೇ ಅಲ್ಲದೇ ಹೈನುಗಾರಿಕೆಯಲ್ಲಿಯೂ ತೊಡಗಿದ್ದಾರೆ.
ಜರ್ಮನ್ ತಳಿಯ ಎರೆಹುಳು: ನಾಗವೇಣಿ ಗೊಲ್ಲರ, ಗೊಬ್ಬರದ ತೊಟ್ಟಿಗಳಿಗೆ ಹಸಿರೆಲೆಸೊಪ್ಪು, ಚದುರಂಗಸೊಪ್ಪು, ಗೊಬ್ಬರದಸೊಪ್ಪು ಬಿಳಿಹುಲ್ಲಿನಪುಡಿ ಸೇರಿದಂತೆ ಹಲವು ಬಗೆಯ ತ್ಯಾಜ್ಯ ವಸ್ತುಗಳನ್ನು ಹಾಕಿ ಕೊಳೆಯಲು ಬಿಟ್ಟು ನಂತರ ಎರೆಹುಳುಗಳನ್ನು ಬಿಡುತ್ತಾರೆ. ಶೇ. 50 ತೇವಾಂಶ ಇರುವಂತೆ ನೋಡಿಕೊಳ್ಳುತ್ತಾರೆ. ತೊಟ್ಟಿಗಳ ಮೇಲೆ ಬಿಸಿಲಿನ ಝಳ ಬೀಳದಂತೆ ಎಚ್ಚರವಹಿಸಿದ್ದಾರೆ. ತ್ಯಾಜ್ಯ ವಸ್ತುಗಳನ್ನೆಲ್ಲ ಹುಳುಗಳು ತಿಂದುಹಾಕಿ ಚಹಾ ಪುಡಿಯಂಥ ಎರೆಹುಳು ಗೊಬ್ಬರ ಸಿದ್ದವಾಗುತ್ತದೆ. ಯುಡ್ರಿಲೇಸ್ ಜರ್ಮನ್ ತಳಿ ಮತ್ತು ಐಸೇನೀಯಾ ಪೆಟಿಡಾ ಎರೆಹುಳುಗಳನ್ನು ಸಾಕುವುದರಿಂದ ಗೊಬ್ಬರ ಬೇಗ ಸಿದ್ಧವಾಗುತ್ತದೆ ಎನ್ನುವುದು ನಾಗವೇಣಿಯವರ ಅನುಭವದ ಮಾತು.
ಸಂಪರ್ಕ: 9972712106
ಚಿತ್ರ ಲೇಖನ: ಟಿ. ಶಿವಕುಮಾರ್