ಶಂಕರಣ್ಣನದ್ದು ದೊಡ್ಡ ಬಂಗ್ಲೆ.. ಅಲ್ಲಿ ನಿಮಿಷಕ್ಕೊಮ್ಮೆ ಏನೋ ಒಂದು ಸದ್ದು.. ಹೀಗೊಂದು ಅರ್ಥದ ಹಾಡು ಕೆಲವೇ ದಿನದಲ್ಲಿ ನಿಮ್ಮ ಕಿವಿಯಲ್ಲಿ ಅನುರಣಿಸಲಿದೆ. ತುಳು ರಂಗಭೂಮಿಯಲ್ಲಿ ಹಲವು ಪ್ರಖ್ಯಾತ ನಾಟಕಗಳನ್ನು ನೀಡಿ, ಎಂದೆಂದೂ ಕಿವಿ ತಂಪುಗೊಳಿಸುವ ಹಾಡುಗಳನ್ನು ನೀಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರೇ ಈ ಹಾಡಿನ ಜನಕ.
ಕಾಪಿಕಾಡ್ ಅವರಿಂದ ಮೂಡಿಬಂದ ಕೋಸ್ಟಲ್‌ವುಡ್‌ನ ಎಲ್ಲ ಸಿನೆಮಾದಲ್ಲೂ ಅವರ ಹಾಡುಗಳು ಎವರ್‌ಗ್ರೀನ್ ಆಗಿ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ‘ಠಾಸೆದ ಪೆಟ್ಟ್’, ‘ಮಟ್ಟ್ದ ಪೊಣ್ಣು’ ಹೀಗೆ ತರತರದ ಹಾಡನ್ನು ನೀಡುವ ಮೂಲಕ ಕಾಪಿಕಾಡ್ ಕೋಸ್ಟಲ್‌ವುಡ್‌ನ ಹಂಸಲೇಖ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅಂದಹಾಗೆ, ಸೆಪ್ಟಂಬರ್ ನಲ್ಲಿ ತೆರೆಕಾಣಲಿರುವ ತುಳುವಿನ ಮೊದಲ ಸಸ್ಪೆನ್ಸ್/ ಹಾರರ್/ ಕಾಮಿಡಿ ಮೂವಿ ‘ಏರಾ ಉಲ್ಲೆರ್’ನಲ್ಲಿಯೂ ಇಂತಹ ಎರಡು ಹಾಡುಗಳಿವೆ.
‘ಕಣ್ಣ್ ಸನ್ನೆ ಮಲ್ತೆ ಪೊಣ್ಣೆ’ ಎಂಬ ಧಾಟಿಯ ಹಾಡು ಕೂಡ ಏರಾ ಉಲ್ಲೆರ್‌ನಲ್ಲಿ ಈಗಾಗಲೇ ನಿರೀಕ್ಷೆ ಮೂಡಿಸಿದೆ. ವಿಶೇಷವೆಂದರೆ ಅರ್ಜುನ್ ಕಾಪಿಕಾಡ್ ಅವರೇ ಈ ಹಾಡನ್ನು ಹಾಡಿದ್ದಾರೆ. ಏರಾ ಉಲ್ಲೆರ್ ಗೆ ಸಿನೆಮಾದಲ್ಲಿ ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ಸಾಯಿಕೃಷ್ಣ, ಸಂದೀಪ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ರಶ್ಮಿಕಾ ಚೆಂಗಪ್ಪ , ಮಿಮಿಕ್ರಿ ಶರಣ್ ಸಹಿತ ಚಾಪರ್ಕ ತಂಡದ ಬಹುತೇಕ ಕಲಾವಿದರು ಅಭಿನಯಿಸಿದ್ದಾರೆ.
ಹೀರೊ ಗೆಟಪ್‌ನಲ್ಲಿ ಮಿಂಚಿದ್ದ ಅನೂಪ್ ಸಾಗರ್ ಈ ಸಿನೆಮಾದಲ್ಲಿ ನೆಗೆಟಿವ್ ರೋಲ್‌ನಲ್ಲಿದ್ದಾರೆ. ತಮಿಳು ಸಿನೆಮಾದಲ್ಲಿ ಕಾಣುವ ಫೈಟ್ ಸೀನ್‌ಗಳನ್ನು ‘ಏರಾ ಉಲ್ಲೆರ್’ನಲ್ಲಿ ಕಾಣಬಹುದು. ಯಾಕೆಂದರೆ ಅರ್ಜುನ್ ಆ ರೀತಿಯಲ್ಲಿ ಫೈಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಗುವಿಗೆ ಒಂದಿನಿತೂ ಕೊರತೆ ಆಗದಂತೆ ನೋಡಿಕೊಂಡು ಸಸ್ಪೆನ್ಸ್ ಕಥೆಯನ್ನು ಜನರಿಗೆ ಇಷ್ಟ ಆಗುವ ರೀತಿಯಲ್ಲಿ ಚಿತ್ರಿಸಲಾಗಿದೆ. 16 ದಿನದಲ್ಲಿ ಶೂಟಿಂಗ್ ಮುಗಿಸಿ, 7-8 ದಿನದಲ್ಲಿ ಡಬ್ಬಿಂಗ್ ಮುಗಿಸಿದ ಈ ಸಿನೆಮಾ ಕೋಸ್ಟಲ್‌ವುಡ್‌ನಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಿದೆ.