ಮಂಗಳೂರು: ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಆಶ್ರಯದಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆದ ದಿ| ಅಹಮದ್ ಮಾಸ್ಟರ್ ಸ್ಮಾರಕ ಎ ಡಿವಿಜನ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ದೇರಳಕಟ್ಟೆಯ ಯೇನಪೊಯ ತಂಡವು ಮಂಗಳೂರಿನ ಕಸಬಾ ಬೆಂಗರೆಯ ಕಸಬಾ ಬ್ರದರ್ಸ್ ತಂಡವನ್ನು 2-0 ಗೊಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.
ಈ ಮೊದಲು ಸೆಮಿಫೈನಲ್ ಪಂದ್ಯದಲ್ಲಿ ಯೇನಪೊಯ ತಂಡ ಸೋಕರ್ ಉಳ್ಳಾಲ ತಂಡವನ್ನು 2-0 ಗೋಲಿಗಳಿಂದ ಸೋಲಿಸಿ ಫೈನಲ್ ಹಂತ ತಲುಪಿತ್ತು. ಅದೇ ರೀತಿ ಕಸಬಾ ಬೆಂಗರೆ ತಂಡ ಜೆನಿಫಾ ಉಳ್ಳಾಲ ತಂಡವನ್ನು 1-0 ಗೋಲಿನಿಂದ ಸೋಲಿಸಿ ಫೈನಲ್ ಹಂತ ತಲುಪಿತ್ತು. ಲೀಗ್ ಹಂತದಲ್ಲಿ ಕಸಬಾ ಬೆಂಗರೆ ತಂಡ ಆಡಿದ 4 ಪಂದ್ಯಗಳಲ್ಲಿ ಜಯಗಳಿಸಿ ಪೂರ್ಣ 12 ಅಂಕ ಗಳಿಸಿಕೊಂಡು ಸೆಮಿಫೈನಲ್ ಹಂತ ತಲುಪಿತ್ತು.
ಯೇನಪೊಯ ತಂಡ 3 ಜಯ, ಒಂದು ಡ್ರಾ ಸಾಧಿಸಿ ಒಟ್ಟು 10 ಅಂಕ ಗಳಿಸಿ ಸೆಮಿಫೈನಲ್ ಹಂತ ತಲುಪಿತ್ತು. ಬಿ ಡಿವಿಜನ್ ಪಂದ್ಯಾವಳಿ ಜಿಲ್ಲಾ ಫುಟ್ ಬಾ ಲ್ ಸಂಸ್ಥೆಯ ವತಿಯಿಂದ ನಡೆದ ಪಳ್ಳಿ ಜಯರಾಂ ಶೆಟ್ಟಿ ಸ್ಮಾರಕ ಬಿ’ ಡಿವಿಜನ್ ಫುಟ್ ಬಾಲ್ ಲೀಗ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ “ಮಂಗಳೂರು ಯುನೈಟೆಡ್ ತಂಡ’ ಪಜೀರಿನ ಯುನೈಟೆಡ್ ಪಜೀರ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಸೆಮಿಫೈನಲ್ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡ ಉಳ್ಳಾಲದ ಏಷಿಯನ್ ತಂಡವನ್ನು 1-0 ಗೋಲಿನಿಂದ ಸೋಲಿಸಿ ಫೈನಲ್ ಹಂತ ತಲುಪಿತ್ತು.
ಯುನೈಟೆಡ್ ಪಜೀರ್ ತಂಡ ಕೆ.ಸಿ.ರೋಡ್ ತಲಪಾಡಿಯ ಸಿಟಿಜನ್ ತಂಡವನ್ನು ಟೈ ಬ್ರೇಕರ್ ನಲ್ಲಿ 6-4 ಗೋಲ್ ಅಂತರದಿಂದ ಸೋಲಿಸಿ ಫೈನಲ್ ಹಂತ ತಲುಪಿತ್ತು. ಲೀಗ್ ಹಂತದಲ್ಲಿ ಮಂಗಳೂರು ಯುನೈಟೆಡ್ ತಂಡ ಆಡಿದ ಆರು ಪಂದ್ಯಾಟಗಳಲ್ಲಿ 15 ಅಂಕಗಳಿಸಿ ಸೆಮಿಫೈನಲ್ ಹಂತ ತಲುಪಿದರೆ ಪಜೀರ್ ಯುನೈಟೆಡ್ ತಂಡ 13 ಅಂಕಗಳಿಸಿ ಸೆಮಿಫೈನಲ್ ಹಂತ ತಲುಪಿತ್ತು.
ಅದೇ ರೀತಿ ಸಿಟಿಜನ್ ಕೆ.ಸಿ.ರೋಡ್ ತಂಡ ಆಡಿದ 5 ಪಂದ್ಯಗಳಲ್ಲಿ 11 ಅಂಕ ಗಳಿಸಿ ಸೆಮಿಫೈನಲ್ ಹಂತ ತಲುಪಿದರೆ ಏಷಿಯನ್ ಉಳ್ಳಾಲ ತಂಡ 10 ಅಂಕ ಗಳಿಸಿ ಸೆಮಿಫೈನಲ್ ಹಂತ ತಲುಪಿತ್ತು. ಸಮಾರೋಪದಲ್ಲಿ ಮಂಗಳೂರು ನಗರ ಟ್ರಾಫಿಕ್ ಎಸಿಪಿ. ಗೀತ ಕುಲಕರ್ಣಿ, ಮನಪಾ ಸದಸ್ಯರಾದ ಎ.ಸಿ. ವಿನಯರಾಜ್, ಮುನೀಬ್ ಬೆಂಗ್ರೆ ಪ್ರಶಸ್ತಿ ವಿತರಿಸಿದರು. ಜಿಲ್ಲಾ ಫುಟ್ ಬಾ ಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಫುಟ್ ಬಾ ಲ್ ಸಂಸ್ಥೆಯ ಖಜಾಂಚಿ ಅನಿಲ್ ಪಿ.ವಿ, ಸದಸ್ಯರಾದ ಶಿವರಾಮ್ ಎ., ಅಬ್ದುಲ್ ಲತೀಫ್, ಜೀವನ್, ಟೂರ್ನಮೆಂಟ್ ಸಮಿತಿ ಸದಸ್ಯರಾದ ಅಶ್ರಫ್, ಬಶೀರ್, ಜಿಲ್ಲಾ ಫುಟ್ ಬಾಲ್ ತಂಡದ ಕೋಚ್ ಆ್ಯಂಟಣಿ, ಬಿಬಿ ಥೋಮಸ್ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ ಪ್ರಸ್ತಾವಿಸಿದರು. ಜಿಲ್ಲಾ ಫುಟ್‌ಬಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುಸೇನ್ ಬೋಳಾರ ನಿರೂಪಿದರು.