Advertisement

ವಿಭಿನ್ನ ಕಥಾ ಹಂದರದ ಸಾಮಾಜಿಕ ನಾಟಕ “ಎನನ್‌ ನಂಬುಲೇ…!’

12:12 PM Sep 06, 2017 | |

ನಮ್ಮ ದೈನಂದಿನ ಜೀವನದಲ್ಲಿ ನಮ್ಮ ನಮ್ಮ ವ್ಯವಹಾರಗಳೊಂದಿಗೆ ಒಂದಷ್ಟು ಹೊತ್ತು ನಮ್ಮ ಭಾಷೆ, ಸಂಸ್ಕೃತಿ, ಕಲಾಪ್ರಕಾರಗಳ ಬಗ್ಗೆ ಕಾಳಜಿ ಉಳಿಸಿಕೊಂಡರೆ ಬಹುಶಃ ನಮ್ಮ ಮನಸ್ಸನ್ನು  ಪ್ರಫುಲ್ಲಗೊಳಿಸುವುದು ಮಾತ್ರವಲ್ಲ ನಮ್ಮ ಸಾಂಸ್ಕೃತಿಕ ಪರಂಪರೆಗೆ ನಾವು ಕೊಡುಗೆ ನೀಡಿದಂತಾಗುತ್ತದೆ. ಯಾರು ಕಲೆಯನ್ನು ಪ್ರೀತಿಯಿಂದ ಆಸ್ವಾದಿಸುತ್ತಾರೋ ಅವರಿಗೆ ಕಲೆ ಸುಲಭವಾಗಿ  ಒಲಿಯಲು ಸಾಧ್ಯ.

Advertisement

ಕಲಾಸಕ್ತರಿಗೆ ಸೂಕ್ತವಾದ ವೇದಿಕೆ ಸಿಕ್ಕರೆ ತಮ್ಮಲ್ಲಿರುವ ಪ್ರತಿಭೆ ಯನ್ನು ಅನಾವರಣಗೊಳಿಸಿ ಉತ್ತಮ ಕಲಾವಿದನಾಗಿ ರೂಪು ಪಡೆಯಲು ಸಾಧ್ಯ ಎಂಬುದಕ್ಕೆ ಈಚೆಗೆ ಪುಣೆಯಲ್ಲಿ ಪ್ರದರ್ಶನ ಗೊಂಡ “ಎನನ್‌ ನಂಬುಲೆ’ ನಾಟಕ ಸಾಕ್ಷಿಯಾಗಿದೆ.

ಪುಣೆ  ತುಳುಕೂಟದ  20ನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ  ರಂಗಕಲಾವಿದ ಅರುಣ್‌ ಬಿ. ಸಿ. ರೋಡ್‌  ರಚಿಸಿದ, ರಂಗತರಂಗ ಕಾಪು ನಾಟಕ ತಂಡದ ಖ್ಯಾತ ನಟ ಶಿವಪ್ರಕಾಶ್‌ ಪೂಂಜಾ ನಿರ್ದೇಶಿಸಿ ಪ್ರದರ್ಶನಗೊಂಡ ಈ ನಾಟಕ ಸಾವಿರಾರುಪ್ರೇಕ್ಷಕರ ಪ್ರಶಂಸೆಗೆ ಒಳಗಾಯಿತು.

ಸಾಮಾನ್ಯನೊಬ್ಬ ಬದುಕಿನಲ್ಲಿ ಅನಿವಾರ್ಯ ಪರಿಸ್ಥಿತಿ ಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಅನಂತರ ತನ್ನ ತಪ್ಪಿನ ಅರಿವಾಗಿ ಮುಂದೆ ಕಳ್ಳತನವನ್ನು ಮಾಡದೆ ಜೀವನ ನಡೆಸಲು ಪ್ರಯತ್ನಪಟ್ಟರೂ ಸಮಾಜ ಆತನನ್ನು ಸಂಶಯ ದಿಂದಲೇ ಕಾಣುತ್ತದೆ. ಕಳ್ಳನೆಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗದೆ ಪರಿತಪಿಸುವ, ತನ್ನ ಕಳ್ಳತನದ ಕೃತ್ಯದಿಂದ ಪತ್ನಿ ಮಕ್ಕಳಿಂದಲೂ ಹೀಯಾಳಿಸಿಕೊಳ್ಳುವ, ವಠಾರದಲ್ಲಿರುವವರಿಂದ ದೂಷಿಸಿಕೊಂಡರೂ ಕಳ್ಳತನವನ್ನು ಬಿಟ್ಟು ಉತ್ತಮ ಮನುಷ್ಯನಾಗು ಎನ್ನುವ ಹಿತವಚನದೊಂದಿಗೆ ಜೀವಿಸಲು ಯತ್ನಿಸುತ್ತಾನೆ.  ಕೊನೆಗೆ ವಠಾರದ ಗುತ್ತಿನ ಮನೆಯ ಯಜಮಾನನ ಸಮಾಜಕ್ಕೆ ಉತ್ತಮವಾದ ಸಂದೇಶಭರಿತ ಮಾತಿನಿಂದ ತನ್ನ ತಪ್ಪಿನಿಂದಾಗಿ ಒಮ್ಮೆ ಕಳ್ಳತನ ಮಾಡಿದರೂ ಅನಂತರ ಉತ್ತಮ ಮನುಷ್ಯನಾಗಿ ಬದಲಾದರೆ ಸಮಾಜ ಅವನನ್ನು ಒಪ್ಪದೇ ಖಂಡಿಸುವ ಮನಸ್ಥಿತಿಯನ್ನು ಬದಲಾಯಿಸಿ ನಿಜಸ್ಥಿತಿಯನ್ನು ಸಾರಿ ಕಳ್ಳನೆಂಬ ಹಣೆಪಟ್ಟಿಗೆ ನ್ಯಾಯನೀಡುವ ಕಥೆಯೇ “ಎನನ್‌ ನಂಬುಲೆ’ ನಾಟಕವಾಗಿದೆ.

ಇಲ್ಲಿ ವಠಾರದಲ್ಲಿರುವ ಗುತ್ತಿನ ಮನೆಯ ಯಜಮಾನ ಹಾಗೂ ದೈವಸ್ಥಾನದ ಮೊಕ್ತೇಸರ ಅಮೃತೇಶ್ವರ, ಆತನ ಪತ್ನಿ ಕಾಂಚನ, ಜೀವನದಲ್ಲಿ ಆದರ್ಶವಾಗಿ ಕಾಣಿಸಿಕೊಳ್ಳುವ ಸಮಾಜ ಸೇವಕ ಸಹೋದರ ನಚಿಕೇತ  ಹಾಸ್ಯ ಪಾತ್ರದಂತೆ ಕಂಡುಬರುವ ದೈವಸ್ಥಾನದ ವಾಚ್‌ಮೆನ್‌ ಪದ್ಮ, ವಿಭಿನ್ನವಾಗಿ ಕಾಣಿಸಿಕೊಳ್ಳುವ ಕಳ್ಳ ನಾಗಪ್ಪ, ಕಳ್ಳನ ಕುಟುಂಬ ಎಂಬ ಮಾತಿನಿಂದ ಹೊರಬರಲು ಕಷ್ಟಪಟ್ಟು ಜೀವನ ಸಾಗಿಸುವ ಆತನ ಪತ್ನಿ ವಾಣಿ, ಮಗಳು ಭಾಗೀರಥಿ, ಫೋಟೋಗ್ರಾಫರ್‌ನಾಗಬಯಸುವ ಮಗ ಕಿಟ್ಟ, ತುಳುನಾಡಿನ ದೈವಾರಾಧನೆಯನ್ನು ಪ್ರತಿಪಾದಿಸುವ  ದೈವದ ಪಾತ್ರಿ, ಪೂರಕ ಪಾತ್ರಗಳಾದ ಪೊಲೀಸ್‌,  ಮದುವೆ ಬ್ರೋಕರ್‌, ಮದುವೆ ಗಂಡು, ಗಂಡಿನ ತಂದೆ ಎಲ್ಲಾ ಪಾತ್ರಗಳೂ ಕಥೆಯನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ.

Advertisement

ಇಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ, ಧೂಮಪಾನದ ಬಗ್ಗೆ ಎಚ್ಚರಿಕೆ, ತುಳುನಾಡಿನ ಸಂಸ್ಕೃತಿಯನ್ನು ಹೀಯಾಳಿಸಬಾರದೆನ್ನುವ ಸಂದೇಶ, ಸಮಾಜದ ಭ್ರಷ್ಟಾಚಾರದ ಬಗ್ಗೆ ಬೆಳಕುಚೆಲ್ಲುವಂತಹ ಹಲವಾರು ಉತ್ತಮ ಸಂದೇಶಗಳನ್ನು ನಾಟಕದುದ್ದಕ್ಕೂ ನೀಡಲಾಗಿದೆ. ನಾಟಕದಲ್ಲಿ ನಾಗಪ್ಪನಾಗಿ ವಾಸು ಕುಲಾಲ ವಿಟ್ಲ, ಅಮೃತೇಶ್ವರನಾಗಿ ಹರೀಶ್‌ ಶೆಟ್ಟಿ ಖಜನೆ, ನಚಿಕೇತನಾಗಿ ಕಿರಣ್‌ ಬಿ. ರೈ ಕರ್ನೂರು, ವಾಣಿಯಾಗಿ ನಯನಾ ಸಿ. ಶೆಟ್ಟಿ ಅಮಟೂರು ಬಾಳಿಕೆ, ಕಾಂಚನಳಾಗಿ ವರ್ಷಾ ವೈ. ಗೌಡ ಬಂಟ್ವಾಳ್‌, ಪದ್ಮನಾಗಿ ಸುಕೇಶ್‌  ಶೆಟ್ಟಿ ಎಣ್ಣೆಹೊಳೆ, ಭಾಗೀರಥಿಯಾಗಿ ಶ್ರೇಯಾ ದಿವಾಕರ್‌  ಶೆಟ್ಟಿ ಮಾಣಿಬೆಟ್ಟು, ದೈವದ ಪಾತ್ರಿಯಾಗಿ ದಿವಾಕರ ಶೆಟ್ಟಿ ಮಾಣಿಬೆಟ್ಟು, ಪೊಲೀಸ್‌ ಆಗಿ ವಿಶ್ವನಾಥ ಶೆಟ್ಟಿ  ಹಿರಿಯಡ್ಕ, ಕಿಟ್ಟನಾಗಿ ವಿಕೇಶ್‌ ರೈ ಶೇಣಿ, ಪೂರಕ ಪಾತ್ರಗಳಲ್ಲಿ ಜಗಜೀವನ ಶೆಟ್ಟಿ ಕೊರಂಗ್ರಪಾಡಿ, ಆಕಾಶ್‌ ಶೆಟ್ಟಿ, ಚೇತನ್‌ ಶೆಟ್ಟಿ ಕೌಡೂರು ಅವರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸುವಂತೆ ನಟಿಸಿದ್ದಾರೆ.
ನಾಟಕಕ್ಕೆ ಸಂಗೀತವನ್ನು ವಿಧಾತ್ರಿ ಕಲಾತಂಡದ ಶ್ರೇಯಸ್‌ ಕಲ್ಲಡ್ಕ ನೀಡಿದ್ದಾರೆ. 

ಬೆಳಕಿನ ವ್ಯವಸ್ಥೆ  ಸ್ವಲ್ಪ ಪರಿಣಾಮಕಾರಿಯಾಗಿ ಅಳವಡಿಸಿದ್ದರೆ ಉತ್ತಮವಾಗಿರು
ತ್ತಿತ್ತು. ನಾಟಕದ ಸೆಟ್ಟಿಂಗ್‌, ವೇಷಭೂಷಣ ಉತ್ತಮ ವಾಗಿತ್ತು. ಹವ್ಯಾಸಿ ಕಲಾವಿದರನ್ನು ಉತ್ತಮವಾಗಿ ಉಪಯೋಗಿಸಿಕೊಂಡ ನಿರ್ದೇಶಕ ಶಿವಪ್ರಕಾಶ್‌ ಪೂಂಜಾ ತಮ್ಮ ಅನುಭವವನ್ನು ಇಲ್ಲಿ ಯಶಸ್ವಿಯಾಗಿ ಧಾರೆಯೆರೆದಿದ್ದಾರೆ. ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು  ಪ್ರಾಯೋಜಕತ್ವದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್‌ ಬಿ. ರೈ ಅವರ ಸಂಯೋಜನೆಯಲ್ಲಿ ಸಂಘದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಹಾಗೂ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ  ಶ್ರೀಧರ ಶೆಟ್ಟಿ ಕಲ್ಲಾಡಿ ಅವರ ಸಹಕಾರದೊಂದಿಗೆ ನಾಟಕ ಯಶಸ್ವಿ ಯಾಗಿ ಆಯೋಜನೆಗೊಂಡು ಪ್ರಶಂಸೆಗೆ ಪಾತ್ರವಾಯಿತು.

ಸರಿತಾ ಕೆ. ಪುಣೆ

Advertisement

Udayavani is now on Telegram. Click here to join our channel and stay updated with the latest news.

Next